

ಬೆಂಗಳೂರು: ‘ಕಿಚ್ಚ’ ಸುದೀಪ್ ಅಭಿಮಾನಿಗಳಿಗೆ ಶಿವರಾತ್ರಿ ಡಬಲ್ ಸಂಭ್ರಮ ತಂದಿದೆ. ಒಂದೆಡೆ ಅವರ ‘ಕೋಟಿಗೊಬ್ಬ 3’ ಚಿತ್ರದ ಟೀಸರ್ ರಿಲೀಸ್ ಆದರೆ, ಮತ್ತೊಂದೆಡೆ ‘ದಾದಾ ಸಾಹೆಬ್ ಫಾಲ್ಕೆ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್’ನಲ್ಲಿ ಪ್ರಾಮಿಸಿಂಗ್ ಆಕ್ಟರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಈ ಎರಡು ಸಂಭ್ರಮವನ್ನು ಸುದೀಪ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಶಿವಕಾರ್ತಿಕ್ ನಿರ್ದೇಶನ ಮಾಡಿರುವ ‘ಕೋಟಿಗೊಬ್ಬ3’ ಚಿತ್ರದ ಟೀಸರ್ ಯೂಟ್ಯೂಬ್ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಟೀಸರ್ನ್ನು ಲಕ್ಷಾಂತರ ಮಂದಿ ಕಣ್ತುಂಬಿಕೊಂಡಿದ್ದಾರೆ. ಕೆ.ಎಸ್. ರವಿಕುಮಾರ್ ನಿರ್ದೇಶನ ಮಾಡಿದ್ದ ‘ಕೋಟಿಗೊಬ್ಬ 2’ ಚಿತ್ರ ಎಲ್ಲಿಗೆ ಮುಗಿದಿತ್ತೋ, ಅಲ್ಲಿಂದ ಈ ಚಿತ್ರ ಆರಂಭವಾಗಿದ್ದು, ‘ಅವನು ಇಂಟರ್ ನ್ಯಾಷನಲ್ ಕಿಲಾಡಿ’ ಎನ್ನುವ ಡೈಲಾಗ್ನಿಂದ ಆರಂಭವಾಗುವ ಟೀಸರ್ನಲ್ಲಿ ಸುದೀಪ್ ಸ್ಟೈಲಿಷ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಇದರ ಜತೆಗೆ ನಾಯಕಿ ಮಡೋನಾ ಸಬಾಸ್ಟಿಯನ್ ಮತ್ತು ಬಾಲಿವುಡ್ ನಟ ಅಬ್ತಾಬ್ ಶಿವದಾಸನಿ ಪಾತ್ರವನ್ನೂ ರಿವೀಲ್ ಮಾಡಲಾಗಿದೆ. ಮೇಕಿಂಗ್ ದೃಷ್ಟಿಯಿಂದ ಸಿನಿಮಾ ಶ್ರೀಮಂತವಾಗಿದ್ದು, ವಿದೇಶಿ ಕಾರುಗಳು, ದೊಡ್ಡ ದೊಡ್ಡ ಸೆಟ್ಗಳು ಕಣ್ಮನ ಸೆಳೆಯುತ್ತಿವೆ.