ತೆಲುಗು ಬಿಗ್​ಬಾಸ್​ನಲ್ಲಿ ಸುದೀಪ್!

Sudeep
Published on

ಬೆಂಗಳೂರು: ಕನ್ನಡದ ಬಿಗ್​ಬಾಸ್ ಸೀಸನ್ 8, 2021ರ ಜನವರಿಯಲ್ಲಿ ಶುರುವಾಗಲಿದೆ. ಈಗಾಗಲೇ ಆ ರಿಯಾಲಿಟಿ ಶೋಗೆ ತಯಾರಿ ಸಹ ಶುರುವಾಗಿದ್ದು, ಸುದೀಪ್ ಕಡೆಯಿಂದಲೂ ಒಪ್ಪಿಗೆ ಸಿಕ್ಕಿದೆ. ಇನ್ನೇನು ಪ್ರೋಮೋ ಮೂಲಕ ಒಂದೊಂದೆ ಮಾಹಿತಿಯನ್ನು ನೀಡಲಿದ್ದಾರವರು. ಈ ನಡುವೆಯೇ ಸುದೀಪ್ ತೆಲುಗಿನ ಬಿಗ್​ಬಾಸ್ ವೇದಿಕೆ ಏರಿಬಂದಿದ್ದಾರೆ.

ಅಂದರೆ, ತೆಲುಗಿನಲ್ಲಿ ನಾಗಾರ್ಜುನ ನಿರೂಪಣೆ ಮಾಡುತ್ತಿರುವ ಬಿಗ್​ಬಾಸ್ ಸೀಸನ್ 4ರ ಭಾನುವಾರದ ವಿಶೇಷ ಸಂಚಿಕೆಯಲ್ಲಿ ಸುದೀಪ್ ಒಂದಷ್ಟು ಹೊತ್ತು ಸಮಯ ಕಳೆದಿದ್ದಾರೆ. ಸ್ಪರ್ಧಿಗಳ ಕಾಲೆಳೆದು ಕನ್ನಡದಲ್ಲಿಯೂ ಮಾತನಾಡಿದ್ದಾರೆ. ಈ ವಿಶೇಷ ಸಂಚಿಕೆಯ ಪ್ರೋಮೋ ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಕಿಚ್ಚನ ಅಭಿಮಾನಿಗಳಿಗೂ ಇದು ಡಬಲ್ ಧಮಾಕಾ ರೂಪದಲ್ಲಿ ಲಭಿಸಿದೆ. ತೆಲುಗಿನ ಸ್ಟಾರ್ ನಟ ನಾಗಾರ್ಜುನ್ ಅವರೊಂದಿಗೆ ನಿರೂಪಣೆ ಮಾಡಿದ ವಿಚಾರವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಸುದೀಪ್, ‘ಬಿಗ್​ಬಾಸ್ ನಿರೂಪಿಸುವ ಖುಷಿನೇ ಬೇರೆ. ಇದೀಗ ತೆಲುಗು ಬಿಗ್​ಬಾಸ್​ನಲ್ಲಿ ಅತಿಥಿ ನಿರೂಪಕನಾಗಿ ಪಾಲ್ಗೊಂಡಿದ್ದೇನೆ.

ಎವರ್ ಯಂಗ್ ನಾಗಾರ್ಜುನ ಸರ್ ಅವರೊಂದಿಗೆ ವೇದಿಕೆ ಏರಿರುವುದು ಮತ್ತಷ್ಟು ಖುಷಿ ನೀಡಿದೆ’ ಎಂದಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ ಕನ್ನಡದ ಬಿಗ್​ಬಾಸ್ ಸೀಸನ್ 8 ಶುರುವಾಗಿರಬೇಕಿತ್ತು. ಕರೊನಾ ಹಿನ್ನೆಲೆಯಲ್ಲಿ ಈ ವರ್ಷದ ಬಿಗ್​ಬಾಸ್ ನಡೆಯುವುದೇ ಅನುಮಾನ ಎಂಬಂತಾಗಿತ್ತು. ತಡವಾಗಿಯಾದರೂ, ಜನವರಿ ವೇಳೆಗೆ ಕನ್ನಡದ ಬಿಗ್​ಬಾಸ್ ಶುರುವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net