ಜೋಯಿಸರಾದ ಕಿಚ್ಚ; 28ಕ್ಕೆ ಬಿಗ್​ಬಾಸ್ ಸೀಸನ್ 8 ಶುರು?

Sudeep
Published on

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮವಾದ ‘ಬಿಗ್ ಬಾಸ್’ನ ಎಂಟನೇ ಸೀಸನ್ ಪ್ರಾರಂಭಕ್ಕೆ ದಿನಗಣನೆ ಪ್ರಾರಂಭವಾಗಿದೆ. ಕಾರ್ಯಕ್ರಮ ಪ್ರಾರಂಭದ ಕುರಿತು ಚಾನೆಲ್ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಇನ್ನು ಬರದಿದ್ದರೂ, ಫೆಬ್ರವರಿ 28ಕ್ಕೆ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಕಾರ್ಯಕ್ರಮದ ಮೊದಲ ಪ್ರೋಮೋ ಬಿಡುಗಡೆಯಾಗಿ ಸಾಕಷ್ಟು ಜನಪ್ರಿಯವಾಗಿದೆ. ಇದೀಗ 2ನೇ ಪ್ರೋಮೋ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದು, ಪ್ರೋಮೋದಲ್ಲಿನ ಸುದೀಪ್ ಅವರ ಗೆಟಪ್ ಬಹಿರಂಗವಾಗಿದೆ. ಸುದೀಪ್ ಈ ಪ್ರೋಮೋದಲ್ಲಿ ‘ಕಿಚ್ಚ ಜೋಯಿಸ’ರಾಗಿ ಕಾಣಿಸಿಕೊಳ್ಳಲಿದ್ದು, ಲಾಕ್​ಡೌನ್ 8.0ಗೆ (‘ಬಿಗ್ ಬಾಸ್’ ಪ್ರಾರಂಭಕ್ಕೆ) ಮುಹೂರ್ತ ಇಟ್ಟುಕೊಡಲಿದ್ದಾರೆ. ಕಿಚ್ಚ ಜೋಯಿಸರು ಯಾವಾಗ ಮುಹೂರ್ತ ಇಟ್ಟುಕೊಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಇನ್ನು, ಈ ಪ್ರೋಮೋದಲ್ಲಿ ಕನ್ನಡದ ಸ್ಟಾರ್​ನಟರೊಬ್ಬರು ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಭವಿಷ್ಯ ಕೇಳಲು ಬರುವ ಆ ಸ್ಟಾರ್​ನಟ ಯಾರು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಇನ್ನು ಈ ಸೀಸನ್​ನಲ್ಲಿ ರವಿಶಂಕರ್ ಗೌಡ, ಅನಿರುದ್ಧ್, ವಿನಯಾ ಪ್ರಸಾದ್ ಮುಂತಾದವರ ಹೆಸರು ಕೇಳಿಬಂದಿತ್ತು. ಅದನ್ನು ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ನಿರಾಕರಿಸಿದ್ದರು. ಈಗ ಮತ್ತಷ್ಟು ಹೆಸರುಗಳು ಕೇಳಿ ಬರುತ್ತಿದ್ದು, ಆ ಪೈಕಿ ಸುನೀಲ್ ರಾವ್, ‘ಸರಿಗಮಪ’ ಖ್ಯಾತಿಯ ಗಾಯಕ ಹನುಮಂತ, ‘ಅಗ್ನಿಸಾಕ್ಷಿ’ ಧಾರಾವಾಹಿಯ ಸುಕೃತಾ ನಾಗ್, ‘ಬ್ರಹ್ಮಗಂಟು’ ಗೀತಾ ಭಾರತಿ ಪ್ರಮುಖವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net