

ಬೆಂಗಳೂರು: 'ವಿಕ್ರಾಂತ್ ರೋಣ' ಚಿತ್ರೀಕರಣ ಸಂದರ್ಭದಲ್ಲಿ ಅನೂಪ್ ಭಂಡಾರಿ ನಿರ್ದೇಶನದಲ್ಲಿ 'ಅಶ್ವತ್ಥಾಮ' ಎಂಬ ಇನ್ನೊಂದು ಹೊಸ ಚಿತ್ರದಲ್ಲಿ ಸುದೀಪ್ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆ ನಂತರ 'ಅಶ್ವತ್ಥಾಮ' ಎಂಬ ಶೀರ್ಷಿಕೆ ನಿರ್ದೇಶಕ ಸಚಿನ್ ಬಳಿ ಇದೆ ಮತ್ತು ಅವರು ಶಿವರಾಜಕುಮಾರ್ ಅಭಿನಯದಲ್ಲಿ ಚಿತ್ರವೊಂದನ್ನು ನಿರ್ದೇಶಿಸುವುದಾಗಿ ಘೋಷಣೆಯಾಯಿತು.
ಈಗ್ಯಾಕೆ ಈ ವಿಷಯ ಎಂದರೆ, ಸುದೀಪ್ ಅಭಿನಯದಲ್ಲಿ 'ಅಶ್ವತ್ಥಾಮ' ಎಂಬ ಚಿತ್ರವನ್ನು ಅನೂಪ್ ನಿರ್ದೇಶಿಸಲಿದ್ದಾರೆ ಮತ್ತು ಕೆಆರ್ಜಿ ಸ್ಟುಡಿಯೋಸ್ ಸಂಸ್ಥೆಯಿಂದ ಈ ಚಿತ್ರನಿರ್ಮಾಣವಾಗಲಿದೆ ಎಂಬ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಕೆಆರ್ಜಿ ಸ್ಟುಡಿಯೋಸ್ನ ಕಾರ್ತಿಕ್ ಗೌಡ, ಸುದೀಪ್ ಅವರನ್ನು ಭೇಟಿ ಮಾಡಿದ್ದರು. ಆಗ ಸುದೀಪ್, ಕೆಆರ್ಜಿ ನಿರ್ಮಾಣದ ಚಿತ್ರವೊಂದರಲ್ಲಿ ನಟಿಸಬಹುದು ಎಂಬ ಸುದ್ದಿ ಇತ್ತು. ಈಗ ಕೆಆರ್ಜಿ ಸ್ಟುಡಿಯೋಸ್ನ ಖಾತೆಯಿಂದ ಘೋಷಣೆ ಆಗಿರುವುದರಿಂದ, ಈ ಚಿತ್ರದ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ.
ಆದರೆ, ವಿಷಯವೇನೆಂದರೆ, ಇದು ಕೆಆರ್ಜಿ ಸ್ಟುಡಿಯೋಸ್ನ ಅಸಲಿ ಖಾತೆಯಲ್ಲ. ನಕಲಿ ಖಾತೆ. ಹಾಗಾಗಿ, ಈ ಸುದ್ದಿ ಸಹ ಸುಳ್ಳು. ಹಿಂದೆ ಯಾವಾಗಲೋ ಕೇಳಿ ಬಂದ ಸುದ್ದಿಗೆ ಹೊಸ ಬಣ್ಣ ಬಳಿದು ಮರುಪ್ರಸಾರ ಮಾಡಲಾಗಿದೆ. ಮೂಲಗಳ ಪ್ರಕಾರ, ಹೊಂಬಾಳೆ ಅಥವಾ ಕೆಆರ್ಜಿ ಸ್ಟುಡಿಯೋಸ್ಗಾಗಿ ಸುದೀಪ್ ಮುಂದೊಂದು ದಿನ ಚಿತ್ರ ಮಾಡುವುದು ಹೌದಾದರೂ, ಅದು 'ಅಶ್ವತ್ಥಾಮ' ಆಗಿರುವುದಿಲ್ಲವಂತೆ. ಸದ್ಯಕ್ಕೆ ಯಾವ ತರಹದ ಚಿತ್ರ ಮಾಡಬೇಕು ಎಂಬ ವಿಷಯ ಇನ್ನೂ ಮಾತುಕಥೆಯ ಹಂತದಲ್ಲಿದೆಯಂತೆ.
ಅಂದಹಾಗೆ, 'ವಿಕ್ರಾಂತ್ ರೋಣ' ನಂತರ ಸುದೀಪ್ ಅಭಿನಯದ ಯಾವುದೇ ಹೊಸ ಚಿತ್ರದ ಅಧಿಕೃತ ಘೋಷಣೆಯಾಗಿಲ್ಲ. ತಮಿಳು ನಿರ್ದೇಶಕ ವೆಂಕಟ್ ಪ್ರಭು ಮತ್ತು ಕನ್ನಡದ ನಂದಕಿಶೋರ್ ನಿರ್ದೇಶನದ ಚಿತ್ರಗಳಲ್ಲಿ ಸುದೀಪ್ ಅಭಿನಯಿಸುತ್ತಾರೆ ಎಂಬ ಸುದ್ದಿ ಇದೆಯಾದರೂ, ಸದ್ಯಕ್ಕೆ ಸುದೀಪ್ ಕಡೆಯಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.