

ಬೆಂಗಳೂರು:
1989ರಲ್ಲಿ 'ಮನ್ಮಥ ರಾಜ' ಚಿತ್ರದಲ್ಲಿ ಕಾಶೀನಾಥ್ ನಾಯಕನಾಗಿ ನಟಿಸಿದ್ದರು. ಬಳಿಕ 2007ರಲ್ಲಿ 'ಮನ್ಮಥ' ಎಂಬ ಚಿತ್ರದಲ್ಲಿ ಜಗ್ಗೇಶ್ ಎರಡು ಶೇಡ್ಗಳಲ್ಲಿ ಮಿಂಚಿದ್ದರು. ಇದೀಗ ಸುಬ್ರಮಣಿ ಸ್ಯಾಂಡಲ್ವುಡ್ಗೆ 'ಮನ್ಮಥ'ನಾಗಿ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಚಿತ್ರದ ಹೆಸರು "ಮಿ.& ಮಿಸಸ್ ಮನ್ಮಥ'. ಸುಬ್ರಮಣಿ ಅವರೇ ಈ ಸಿನಿಮಾ ನಿರ್ದೇಶಿಸಿದ್ದು, ನಾಯಕನಾಗಿ ನಟಿಸಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ಮತ್ತು ಆಡಿಯೋ ಬಿಡುಗಡೆ ಮಾಡಲಾಯಿತು. ಇದೊಂದು ಕಾಮಿಡಿ ಹಾಗೂ ಫ್ಯಾಮಿಲಿ ಎಂಟರ್‌ಟೈನರ್ ಕಥಾಹಂದರದ ಚಿತ್ರವಾಗಿದ್ದು, ಸುಬ್ರಮಣಿಗೆ ಶಕುಂತಲಾ, ಚಂದನಾ ಹಾಗೂ ವೈಶಾಲಿ ಎಂಬ ಮೂವರು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕ, ನಾಯಕ ಸುಬ್ರಮಣಿ, 'ಕಳೆದ 94ರಿಂದಲೂ ಒಬ್ಬ ಹೀರೋ ಆಗಬೇಕೆಂದು ಪ್ರಯತ್ನಿಸಿದೆ, ಐದಾರು ಸೀರಿಯಲ್ ಹಾಗೂ 'ಅರಬ್ಬೀ ಕಡಲತೀರದಲ್ಲಿ' ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಆರಂಭದಲ್ಲಿ ಮನ್ಮಥ ಒಬ್ಬ ಮೂಗನಾಗಿದ್ದು, ಶ್ರೀಮಂತನಾದ ಆತನಲ್ಲಿರುವ ಹಣವನ್ನು ಲಪಟಾಯಿಸಲು ಜಾಕ್ ಅಂಡ್ ಜಿಲ್ ಎಂಬ ಇಬ್ಬರು ವ್ಯಕ್ತಿಗಳು ಆತನ ಹಿಂದೆ ಮೂವರು ಹುಡುಗಿಯರನ್ನು ಛೂ ಬಿಡುತ್ತಾರೆ, ಆದರೆ ಆತ ಯಾವುದೇ ಅಮಿಷಕ್ಕೂ ಬಗ್ಗಲ್ಲ. ಹೀಗೆ ಮನರಂಜನಾತ್ಮಕವಾಗಿ ಕಥೆಯನ್ನು ಹೇಳಿಕೊಂಡು ಹೋಗಿದ್ದೇವೆ. ಬೆಂಗಳೂರು, ಅರಸೀಕೆರೆ, ಮಂಗಳೂರು ಮತ್ತು ಉಡುಪಿ ಸುತ್ತಮತ್ತ ಚಿತ್ರೀಕರಣ ನಡೆಸಲಾಗಿದೆ. ಅಲ್ಲದೆ ಚಿತ್ರವನ್ನು ಅ.೬ಕ್ಕೆ ರಿಲೀಸ್ ಮಾಡುವ ಯೋಜನೆಯಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ಮದುವೆ ವದಂತಿಗೆ ನಟಿ ಸಾಯಿ ಪಲ್ಲವಿ ಕೊಟ್ಟ ಉತ್ತರ ಹೀಗಿದೆ
ನಾಯಕಿ ವೈಶಾಲಿ, 'ಸಿನಿಮಾದಲ್ಲಿ ಅಭಿನಯಿಸಬೇಕೆಂದು ತುಂಬಾ ಆಸೆಯಿತ್ತು, ಆದರೆ ಅವಕಾಶ ಸಿಕ್ಕಿರಲಿಲ್ಲ. ಚಿತ್ರದಲ್ಲಿ ರಮ್ಯ ಎಂಬ ಯುವತಿಯ ಪಾತ್ರವನ್ನು ಮಾಡಿದ್ದೇನೆ' ಎಂದರು. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಕೆವಿನ್ ಎಂ. ಸಂಗೀತ ನಿರ್ದೇಶನವಿರಲಿದೆ. ಬಸವರಾಜು, ರವಿ ಕುಂದಾಪುರ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ವಿಜಯರಾಜ್ ಅವರ ಕಥೆ-ಸಂಕಲನ, ರವಿಶ್ರೀ ಮಾರುತಿ ಸಹನಿರ್ದೇಶನ ಮತ್ತು ಸಂಭಾಷಣೆ, ರವಿ ಛಾಯಾಗ್ರಹಣ, ಜೈಪ್ರಕಾಶ್ ನೃತ್ಯ ನಿರ್ದೇಶನ, ಶಿವು ಸಾಹಸ ನಿರ್ದೇಶನವಿದೆ.