Shaneel Gowtham Interview; ವಿಜಯವಾಣಿ ಜತೆ ಸು ಫ್ರಮ್​ ಸೋ ರವಿ ಅಣ್ಣನ ಮಾತುಕತೆ

xfcgg
Published on

| ಹರ್ಷವರ್ಧನ್​ ಬ್ಯಾಡನೂರು

ಕಂಟೆಂಟ್​ ಚೆನ್ನಾಗಿದ್ದರೆ ಕಡಿಮೆ ಬಜೆಟ್​ ಸಿನಿಮಾನೂ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂಬುದನ್ನು "ಸು ಫ್ರಮ್​​ ಸೋ' ಸಾಬೀತುಪಡಿಸಿದೆ. ಕನ್ನಡದ ಗಡಿ ದಾಟಿ ಮಲಯಾಳಂ, ತೆಲುಗಿನಲ್ಲೂ ಪ್ರೇಕ್ಷಕರನ್ನು ರಂಜಿಸುತ್ತಿರುವ ಸಿನಿಮಾ ತಮಿಳು, ಹಿಂದಿಗೆ ಹಾರಲು ಸಿದ್ಧತೆ ನಡೆಸುತ್ತಿದೆ. ಕಳೆದ ಜು. 25ರಂದು ಬಿಡುಗಡೆಯಾದ ಜೆ.ಪಿ. ತುಮಿನಾಡ್​ ನಿರ್ದೇಶಿಸಿ, ಶನೀಲ್​ ಗೌತಮ್​, ಪುಷ್ಪರಾಜ್​ ಬೊಳ್ಳಾರ್​, ಜೆ.ಪಿ. ತುಮಿನಾಡ್​, ಸಂಧ್ಯಾ ಅರಕೆರೆ, ದೀಪಕ್​ ರೈ ಪಾಣಾಜೆ ಜತೆ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸು ಫ್ರಮ್​​ ಸೋ' ಇದೀಗ ₹100 ಕೋಟಿ ಕ್ಲಬ್​ಗೆ ಎಂಟ್ರಿ ಕೊಡಲು ರೆಡಿಯಾಗಿದೆ. ಅದೇ ಖುಷಿಯಲ್ಲಿ ಚಿತ್ರದ ಯಶಸ್ಸು, ಮುಂದಿನ ಪ್ರಾಜೆಕ್ಟ್​ಗಳ ಬಗ್ಗೆ ರವಿ ಅಣ್ಣ ಪಾತ್ರದ ಶನೀಲ್​ ಗೌತಮ್​ ವಿಜಯವಾಣಿ ಜತೆ ಮಾತನಾಡಿದ್ದಾರೆ.

ರವಿ ಅಣ್ಣನ ನಗುವಿನ ಆರ್ಭಟ

ಖಾಸಗಿ ಬ್ಯಾಂಕ್​ ಮ್ಯಾನೇಜರ್​ ಆಗಿದ್ದ ಶನೀಲ್​ ಗೌತಮ್​, 2013ರಲ್ಲಿ ಸಿನಿಮಾ ಕನಸಿನ ಬೆನ್ನು ಹತ್ತಿ ಕೆಲಸಕ್ಕೆ ರಾಜೀನಾಮೆ ಕೊಟ್ಟು, ಆಡಿಷನ್​ ಮೂಲಕ ರಾಜ್​ ಬಿ. ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ "ಒಂದು ಮೊಟ್ಟೆಯ ಕಥೆ' ತಂಡ ಸೇರಿದವರು. ನಂತರ ನಟನೆಯ ಜತೆಗೆ ಬರವಣಿಗೆ ಮತ್ತು ನಿರ್ದೇಶನ ವಿಭಾಗದಲ್ಲೂ ತೊಡಗಿಸಿಕೊಂಡಿರುವ ಅವರು "ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ', "ಗರುಡ ಗಮನ ವೃಷಭ ವಾಹನ', "ಕಾಂತಾರ' ಮತ್ತು ಇದೀಗ "ಕಾಂತಾರ ಚಾಪ್ಟರ್​ 1' ಚಿತ್ರದ ಸ್ಕ್ರಿಪ್ಟ್​ನಲ್ಲೂ ಕೆಲಸ ಮಾಡಿದ್ದಾರೆ. ಶನೀಲ್​ ಗುರು ಅಂತಿದ್ದ ಹೆಸರನ್ನು "ಸು ಫ್ರಮ್​​ ಸೋ' ಚಿತ್ರದಲ್ಲೇ ಶನೀಲ್​ ಗೌತಮ್​ ಎಂದು ಬದಲಿಸಿಕೊಂಡ ಅವರು, 2023ರ ಆಗಸ್ಟ್​ನಲ್ಲಿ ಗೃಹಸ್ತಾಶ್ರಮ ಪ್ರವೇಶಿಸಿದ್ದಾರೆ. "ಹೆಸರು ಬದಲಿಸಿದ ಪರಿಣಾಮವೋ, ಮನೆಗೆ ಮಡದಿ ಬಂದ ಕಾಲ್ಗುಣವೋ ಗೊತ್ತಿಲ್ಲ. ಆದರೆ, ಕಾಕತಾಳಿಯ ಎಂಬಂತೆ ಈ ಯಶಸ್ಸು ದೊರೆತಿರುವುದು ತುಂಬ ಖುಷಿ ನೀಡಿದೆ. ನನ್ನ ಪಾತ್ರದ ಸಂಪೂರ್ಣ ಕ್ರೆಡಿಟ್​ ನಿರ್ದೇಶಕ ಜೆಪಿ ತುಮಿನಾಡ್​ಗೆ ಸಲ್ಲುತ್ತದೆ. ಪಾತ್ರದ ಬಗ್ಗೆ ತಿಳಿದು, ನಾನು ಸಿದ್ಧತೆ ನಡೆಸುತ್ತಿದ್ದೆ. ಆದರೆ, ಯಾವಾಗ ವರ್ಕ್​ಶಾಪ್​ ಪ್ರಾರಂಭವಾಯಿತೋ ಎಲ್ಲ ಸಿದ್ಧತೆಗಳೂ ಠುಸ್​ ಆದವು. ಏಕೆಂದರೆ ಜೆಪಿಗೆ ರವಿ ಅಣ್ಣ ಪಾತ್ರ ಹೀಗೇ ಇರಬೇಕು ಎಂಬ ಸ್ಪಷ್ಟತೆ ಇತ್ತು. ಅವರು ನನ್ನಿಂದ ಮಾಡಿಸಿದ್ದು ಇವತ್ತು ಇಷ್ಟು ದೊಡ್ಡ ಮಟ್ಟದಲ್ಲಿ ಜನರು ಗುರುತಿಸುವಂತಾಗಿದೆ. ನಾನು ನಿರ್ದೇಶಕರ ಮಗು, ಸ್ಪಷ್ಟತೆ ಇರುವ ನಿರ್ದೇಶಕರು ಸಿಕ್ಕರೆ ನನ್ನನ್ನು ಹೇಗೆ ಬೇಕಾದರೂ ಮೌಲ್ಡ್​ ಮಾಡಬಹುದು' ಎಂದು ಹೇಳಿಕೊಳ್ಳುತ್ತಾರೆ.

ರಮೇಶ್​ ಅರವಿಂದ್​ ಮೆಚ್ಚಿದ ರವಿ ಅಣ್ಣ

ಸು ಫ್ರಮ್​​ ಸೋ' ಸಿನಿಮಾ ನೋಡಿ ನಟ ರಮೇಶ್​ ಅರವಿಂದ್​ ಮೆಸೇಜ್​ ಕಳುಹಿಸಿದ್ದನ್ನು ಸ್ಮರಿಸಿಕೊಳ್ಳುವ ಶನೀಲ್​ ಗೌತಮ್​, "ರಮೇಶ್​ ಸರ್​ರಿಂದ ನನಗೆ ಬೆಸ್ಟ್​ ಕಾಂಪ್ಲಿಮೆಂಟ್​ ಬಂತು. ಮೂರು ವರ್ಷಗಳ ಹಿಂದೆ ನಾನವರ ಜತೆ ಆ್ಯಡ್​ ಶೂಟ್​ ಮಾಡಿದ್ದೆ. ಆಗ ನಮ್ಮ ಚಿತ್ರದ ಬಗ್ಗೆ ಹೇಳಿದ್ದೆ. ಇದೀಗ ಸಿನಿಮಾ ನೋಡಿ ಅವರಿಗೆ ಇಷ್ಟವಾಗಿ ನನಗೆ ಮೆಸೇಜ್​ ಮಾಡಿ ಮೆಚ್ಚುಗೆಯ ಮಾತುಗಳನ್ನಾಡಿದರು. ನನಗೆ ಅವರು ಸಣ್ಣ ವಯಸ್ಸಿನಿಂದಲೂ ಸ್ಪೂರ್ತಿ. ಅವರಂತಹ ಲೆಜೆಂಡ್​ ನನ್ನ ಬಗ್ಗೆ ಮಾತನಾಡಿದ್ದು ಖುಷಿ ನೀಡಿತು' ಎನ್ನುತ್ತಾರೆ.

ದೈವ, ದೇವರ ಕೃಪೆ

ಚಿತ್ರರಂಗಕ್ಕೆ ಬಂದು ಏಳೆಂಟು ವರ್ಷಗಳಾಗಿದ್ದರೂ ಶನೀಲ್​ ನಟಿಸಿರುವುದು ಬೆರಳೆಣಿಕೆ ಸಿನಿಮಾಗಳಲ್ಲಷ್ಟೇ. ನಟನೆಯ ಜತೆಗೆ ಬರವಣಿಗೆ, ಸಹ-ನಿರ್ದೇಶನದಲ್ಲೂ ತೊಡಗಿಸಿಕೊಳ್ಳುವುದು ಅದಕ್ಕೆ ಕಾರಣ. "ನಾನೂ ಬರೆಯಬಲ್ಲೆ ಅಂತ ಗುರುತಿಸಿ "ಕಾಂತಾರ'ದಲ್ಲಿ ರಿಷಬ್​ ಸರ್​ ಅವಕಾಶ ನೀಡಿದರು. ಈಗ "ಕಾಂತಾರ ಚಾಪ್ಟರ್​ 1' ಸ್ಕ್ರಿಪ್ಟ್​ನಲ್ಲೂ ಕೆಲಸ ಮಾಡಿದ್ದೇನೆ. ಈ ಸಮಯದಲ್ಲಿ 32 ಚಿತ್ರಗಳಲ್ಲಿ ನಟನೆ ಮತ್ತು ಎಂಟು ಸಿನಿಮಾಗಳ ಸ್ಕ್ರಿಪ್ಟ್​ ಆರ್​ ಬಂದವು. ಆದರೆ, ನಾನು ಒಪ್ಪಲಿಲ್ಲ. ಒಂದು "ಕಾಂತಾರ' ಮತ್ತೊಂದು "ಸು ಫ್ರಮ್​​ ಸೋ'. ಏಕೆಂದರೆ, ಜೆಪಿ ತುಮಿನಾಡ್​ ಈ ಕಥೆ ಮೊದಲು ಹೇಳಿದ್ದು 2019ರಲ್ಲಿ. 2024ರವರೆಗೂ ಈ ಕಥೆಯ ಮೇಲಿದ್ದಷ್ಟು ಒಲವು ನನಗೆ ಬೇರೆ ಕಥೆಗಳ ಮೇಲಿರಲಿಲ್ಲ. ದೈವ, ದೇವರ ಕೃಪೆ ಚಿತ್ರ ನಾವಂದುಕೊಂಡಿದ್ದಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಗೆದ್ದಿದೆ. ಸಿನಿಮಾ ಇನ್ನೆಷ್ಟು ದೂರ ಕರೆದೊಯ್ಯುತ್ತೋ ನೋಡಬೇಕು' ಎಂದು ಸಂತಸ ಹಂಚಿಕೊಳ್ಳುತ್ತಾರೆ. ಅಂದಹಾಗೆ ಶನೀಲ್​ಗೆ ನಿರ್ದೇಶನ ಒಲವೂ ಇದ್ದು, ಮೂರ್ನಾಲ್ಕು ಕಥೆ ಕೂಡ ಮಾಡಿಕೊಂಡಿದ್ದಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net