Pushparaj Bollar Interview; ಕುಡಿಯದೇ ಕುಡುಕನಾದ ಸು ಫ್ರಮ್​ ಸೋ ಭಾವ!

acascac
Published on

| ಹರ್ಷವರ್ಧನ್​ ಬ್ಯಾಡನೂರು

ಕಂಟೆಂಟ್​ ಚೆನ್ನಾಗಿದ್ದರೆ ಕಡಿಮೆ ಬಜೆಟ್​ ಸಿನಿಮಾನೂ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂಬುದನ್ನು "ಸು ಫ್ರಮ್​ ಸೋ ಸಾಬೀತ ಪಡಿಸಿದೆ. ಕನ್ನಡದ ಗಡಿ ದಾಟಿ ಮಲಯಾಳಂ, ತೆಲುಗಿನಲ್ಲೂ ಪ್ರೇಕ್ಷಕರನ್ನು ರಂಜಿಸುತ್ತಿರುವ ಸಿನಿಮಾ ತಮಿಳು, ಹಿಂದಿಗೆ ಹಾರಲು ಸಿದ್ಧತೆ ನಡೆಸುತ್ತಿದೆ. ಕಳೆದ ಜು. 25ರಂದು ಬಿಡುಗಡೆಯಾದ ಜೆ.ಪಿ. ತುಮಿನಾಡ್​ ನಿರ್ದೇಶಿಸಿ, ಶನೀಲ್​ ಗೌತಮ್​, ಪುಷ್ಪರಾಜ್​ ಬೊಳ್ಳಾರ್​, ಜೆ.ಪಿ. ತುಮಿನಾಡ್​, ಸಂಧ್ಯಾ ಅರಕೆರೆ, ದೀಪಕ್​ ರೈ ಪಾಣಾಜೆ ಜತೆ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ "ಸು ಫ್ರಮ್​ ಸೋ' ಇದೀಗ ₹100 ಕೋಟಿ ಕ್ಲಬ್​ಗೆ ಎಂಟ್ರಿ ಕೊಡಲು ರೆಡಿಯಾಗಿದೆ. ಅದೇ ಖುಷಿಯಲ್ಲಿ ಚಿತ್ರದ ಯಶಸ್ಸು, ಮುಂದಿನ ಪ್ರಾಜೆಕ್ಟ್​ಗಳ ಬಗ್ಗೆ ಬಾವ ಪಾತ್ರದಲ್ಲಿ ನಟಿಸಿರುವ ಪುಷ್ಪರಾಜ್​ ಬೊಳ್ಳಾರ್​ ವಿಜಯವಾಣಿ ಜತೆ ಮಾತನಾಡಿದ್ದಾರೆ.

ಕುಡುಕ ಭಾವ ಪುಷ್ಪರಾಜ್​

ಸು ಫ್ರಮ್​ ಸೋಚಿತ್ರದಲ್ಲಿ ಹೆಸರೇ ಇಲ್ಲದ ಕುಡುಕ ಬಾವನ ಪಾತ್ರದಲ್ಲಿ ಪುಷ್ಪರಾಜ್​ ಬೊಳ್ಳಾರ್​ ನಟಿಸಿದ್ದಾರೆ. "ಬಂದರೋ ಬಾವ ಬಂದರೋ' ಹಿನ್ನೆಲೆ ಸಂಗೀತಕ್ಕೆ ತಕ್ಕಂತೆ ಮುಖ ಅರಳಿಸಿಕೊಂಡು ನಗುತ್ತಾ ತೆರೆಯ ಮೇಲೆ ಬರುವ ಬಾವ ಕೇವಲ ತಮ್ಮ ಎಂಟ್ರಿಯಿಂದಲೇ ಜನರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದಾರೆ. "ಜೆಪಿ. ತುಮಿನಾಡ್​ ಎರಡು ವರ್ಷಗಳ ಹಿಂದೆ ಕಥೆ ಮತ್ತು ಪಾತ್ರದ ಬಗ್ಗೆ ಹೇಳಿದ್ದರು. ಕುಡುಕನಾದ ಗಡಿಬಿಡಿ ಭಾವನ ರೋಲ್​. ಚಿಕ್ಕದಾದರೂ ಒಳ್ಳೆ ಪಾತ್ರ. ನೀವು ಮಾಡುವ ರೀತಿ ಮಾಡಿದರೆ ದೊಡ್ಡ ಪಾತ್ರವಾಗುತ್ತದೆ ಎಂದಿದ್ದರು. 25 ವರ್ಷಗಳಿಂದ ನಾಟಕ, 12 ವರ್ಷಗಳಿಂದ ಸಿನಿಮಾ ಮಾಡುತ್ತಿದ್ದೇನೆ. ಹೀಗಾಗಿ ಕುಡುಕನಾಗಿ ಹಲವು ಬಾರಿ ನಟಿಸಿದ್ದೇನೆ. ಆದರೆ, ನಿರ್ದೇಶಕರು ನಾಟಕದ ಕುಡುಕ ಬೇಡ, ಹೊರ ರೀತಿಯ ಕುಡುಕ ಬೇಕು ಅಂದರು. ಅದಕ್ಕಾಗಿ ಮದ್ಯ ಸೇವಿಸದಿದ್ದರೂ ಬಾರ್​ನಲ್ಲಿ ಕುಳಿತು ಕುಡಿದು ತೂರಾಡುವವರನ್ನು ಗಮನಿಸಿದ್ದೂ ಇದೆ' ಎಂದು ಮಾಹಿತಿ ನೀಡುತ್ತಾರೆ.

12 ಅವಕಾಶಗಳು ಬಂದಿವೆ

ಅಂದಹಾಗೆ "ಸು ಫ್ರಮ್​ ಸೋಯಶಸ್ಸಿನ ಬೆನ್ನಲ್ಲೇ ಪುಷ್ಪರಾಜ್​ ಅವರಿಗೆ 12 ಕನ್ನಡ, ತುಳು ಮತ್ತು ಒಂದು ಮಲಯಾಳಂ ಚಿತ್ರದಲ್ಲಿ ಆರ್​ಗಳು ಬಂದಿವೆಯಂತೆ. ಆದರೆ, ಅವರು ಇನ್ನೂ "ಸು ಫ್ರಮ್​ ಸೋ ಪ್ರಚಾರದಲ್ಲಿ ಬಿಜಿಯಿರುವ ಕಾರಣ ಯಾವುದನ್ನೂ ಒಪ್ಪಿಕೊಂಡಿಲ್ಲ. "ಜೆಪಿ ತುಮಿನಾಡ್​ ನಾಟಕಗಳಲ್ಲಿ ಅಭಿನಯಿಸಿದ್ದ ನನಗೆ ಹಾಗೂ ತಂಡದ ಎಲ್ಲರಿಗೂ ಅವರ ಸ್ಕ್ರಿಪ್ಟ್​ ಮೇಲೆ ಭರವಸೆ ಇತ್ತು. ಏಕೆಂದರೆ ಅವರದು ಸೂಕ್ಷ$್ಮ ಬರವಣಿಗೆ. "ಕಥೆ ಎಡ್ಡೆಂದು', "ನಿತ್ಯೆ ಬಣ್ಣಗಾ', "ಬಂಜಿಗ್​ ಹಾಕೋಡ್ಚಿ'ಯಂತಹ ಸೂಪರ್​ಹಿಟ್​ ನಾಟಕಗಳನ್ನು ಬರೆದಿದ್ದಾರೆ. ಅವರು ಸಿನಿಮಾ ಬರೆಯುತ್ತಿದ್ದಾರೆ ಅಂತ ಗೊತ್ತಾದಾಗಲೇ, ನಮಗೆ ಕಾನ್ಫಿಡೆನ್ಸ್​ ಇತ್ತು. ನನ್ನ ಪಾತ್ರವನ್ನು ಸಹ ನಾನು ಮಾಡಿಲ್ಲ. ಅದರ ಸಂಪೂರ್ಣ ಕ್ರೆಡಿಟ್​ ಜೆಪಿಗೆ ನೀಡುತ್ತೇನೆ. ಶೂಟಿಂಗ್​ ಸಮಯದಲ್ಲಿ ಖಾಲಿಯಾಗಿ ಹೋದ ನನ್ನಿಂದ ಭಾವ ಪಾತ್ರವನ್ನು ಇದೇ ರೀತಿ ಬೇಕು ಅಂತ ಜೆಪಿ ತುಮಿನಾಡ್​ ಮಾಡಿಸಿದರು. ಈಗ ನಾನು ಎಲ್ಲಿಗೇ ಹೋದರೂ ಜನ ಭಾವ ಎಂದೇ ಗುರುತಿಸುತ್ತಾರೆ' ಎಂದು ಸಂತಸ ವ್ಯಕ್ತಪಡಿಸುತ್ತಾರೆ.

ರಂಗಭೂಮಿ ಬಿಡುವುದಿಲ್ಲ

ಸಾಮಾನ್ಯವಾಗಿ ಕಲಾವಿದರು ಸಿನಿಮಾದಲ್ಲಿ ಸಕ್ಸಸ್​ ಸಿಕ್ಕ ತಕ್ಷಣ ರಂಗಭೂಮಿಯಿಂದ ದೂರವಾಗಿಬಿಡುತ್ತಾರೆ. ಆದರೆ, "ರಂಗಭೂಮಿಯೇ ನಮ್ಮ ಬೇಸ್​. ಅಲ್ಲಿಂದ ಪ್ರತಿದಿನ ಕಲಿಯಲು ಸಿಗುತ್ತದೆ. ಇವತ್ತು ಮಾಡಿದ ಪಾತ್ರವನ್ನೇ ನಾಳೆ ಇನ್ನೊಂದು ರೀತಿ ಮಾಡುತ್ತೇವೆ. ಹೀಗಾಗಿ ರಂಗಭೂಮಿಯಲ್ಲೂ ಸಕ್ರಿಯರಾಗಿರಲಿದ್ದೇನೆ' ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net