

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
"ವಿಕ್ರಾಂತ್ ರೋಣ' ಚಿತ್ರದ ಬಳಿಕ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಅನೂಪ್ ಭಂಡಾರಿ ಮತ್ತೆ ಒಂದಾಗಿದ್ದು, ಏ. 16ರಿಂದ ಆ್ಯಕ್ಷನ್ ಅಡ್ವೆಂಚರ್ ಸಿನಿಮಾ "ಬಿಲ್ಲಾ ರಂಗ ಬಾಷಾ' ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ. 2209ರ ಕಾಲಟ್ಟದಲ್ಲಿ ನಡೆಯುವ ಕಥೆಯಾದ ಕಾರಣ ನಟ ಕಿಚ್ಚ ಸುದೀಪ್ ವಿಭಿನ್ನ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದು, ಹಾಲಿವುಡ್ನ "ಮ್ಯಾಡ್ ಮ್ಯಾಕ್ಸ್' ಸರಣಿಯಲ್ಲಿ ಬಳಸಿರುವಂತಹ ವಿಶೇಷವಾಗಿ ಮಾಡಿಫೈ ಮಾಡಿರುವ ವಾಹನಗಳು, ಶಸ್ತ್ರಾಸ್ತ್ರಗಳು ಈ ಚಿತ್ರದಲ್ಲೂ ಕಾಣಸಿಗಲಿವೆ. ಸದ್ಯ ಕಂಠೀರವ ಸ್ಟುಡಿಯೋನಲ್ಲಿ ಸೆಟ್ ಹಾಕಿ "ಬಿಲ್ಲಾ ರಂಗ ಬಾಷಾ' ಚಿತ್ರೀಕರಣ ನಡೆಸಲಾಗುತ್ತಿದ್ದು, ಪಾತ್ರಗಳ ಲುಕ್ ಮತ್ತು ಸೆಟ್ ಡಿಸೈನ್ ಸೇರಿ ಚಿತ್ರದ ಕುರಿತ ಎಲ್ಲ ವಿಷಯಗಳಲ್ಲೂ ಗೌಪ್ಯತೆ ಕಾಪಾಡಿಕೊಳ್ಳಲು ಚಿತ್ರತಂಡ ಎಚ್ಚರಿಕೆ ವಹಿಸಿದೆ. ಹೀಗಾಗಿಯೇ ಈ ಸಿನಿಮಾದಲ್ಲಿ ಕೆಲಸ ಮಾಡುವ ಎಲ್ಲ ತಂತ್ರಜ್ಞರು, ಕಲಾವಿದರಿಗೂ ಗುರುತಿನ ಚೀಟಿ ನೀಡಲಾಗಿದ್ದು, ಅದಿಲ್ಲದಿದ್ದರೆ ಸೆಟ್ಗೆ ಪ್ರವೇಶವಿರುವುದಿಲ್ಲ.
ಹಾಗೇ ಇತ್ತೀಚಿನ ದಿನಗಳಲ್ಲಿ ಚಿತ್ರತಂಡಗಳು ಎಷ್ಟೇ ಕಟ್ಟುನಿಟ್ಟಾಗಿದ್ದರೂ, ಸೆಟ್ನಲ್ಲಿ ಚಿತ್ರೀಕರಣ ನಡೆಸುತ್ತಿರುವ ಫೋಟೋ ಮತ್ತು ವಿಡಿಯೋಗಳನ್ನು ಮಾಡಿ ಜಾಲತಾಣದಲ್ಲಿ ವೈರಲ್ ಮಾಡುತ್ತಿರುವ ಟನೆಗಳು ಹೆಚ್ಚುತ್ತಿರುವ ಕಾರಣ, "ಬಿಲ್ಲಾ ರಂಗ ಬಾಷಾ' ಸೆಟ್ಗೆ ಮೊಬೈಲ್ಗಳನ್ನು ನಿಷೇಧಿಸಲಾಗಿದೆ. ಹೀಗಾಗಿಯೇ ಸೆಕ್ಯುರಿಟಿಗಳನ್ನು ನೇಮಿಸಲಾಗಿದ್ದು, ಪ್ರತಿಯೊಬ್ಬರನ್ನೂ ಚೆಕ್ ಮಾಡಿ ಒಳಗೆ ಬಿಡಲಾಗುತ್ತಿದೆ. ಮೊದಲ ಹಂತದಲ್ಲಿ 20 ದಿನಗಳ ಕಾಲ ಆ್ಯಕ್ಷನ್ ಸನ್ನಿವೇಶಗಳ ಚಿತ್ರೀಕರಣ ನಡೆಸಲಾಗುತ್ತಿದ್ದು, ಆ ಬಳಿಕ ಎರಡನೇ ಹಂತದ ಶೂಟಿಂಗ್ಗೂ ಮುನ್ನ ಕೆಲ ದಿನಗಳ ಕಾಲ ಬ್ರೇಕ್ ಇರಲಿದೆ. ಎಂಟು ಎಕರೆ ಜಾಗದಲ್ಲಿ ಬೃಹತ್ ಸೆಟ್ ನಿರ್ಮಿಸಲಾಗುತ್ತಿದ್ದು, ಅಲ್ಲಿ ಎರಡನೇ ಹಂತದ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ರೂಪಿಸಿದೆ. ಇದು ಕಿಚ್ಚ ಸುದೀಪ್ ಅವರ ಕರಿಯರ್ನ ಅತಿ ದೊಡ್ಡ ಬಜೆಟ್ ಚಿತ್ರವಾಗಿದ್ದು, ತೆಲುಗಿನ "ಹನುಮಾನ್' ಚಿತ್ರದ ನಿರ್ಮಾಪಕರಾದ ನಿರಂಜನ್ ರೆಡ್ಡಿ ಮತ್ತು ಚೈತನ್ಯ ರೆಡ್ಡಿ ನಿರ್ಮಾಣದ ಹೊಣೆ ಹೊತ್ತಿದ್ದಾರೆ.
ಇತ್ತೀಚೆಗಷ್ಟೆ ಶೂಟಿಂಗ್ ಝಲಕ್ ಬಿಡುಗಡೆ ಮಾಡಿರುವ "ಬಿಲ್ಲಾ ರಂಗ ಬಾಷಾ' ತಂಡ, ಕಿಚ್ಚ ಸುದೀಪ್ ಲುಕ್ ಬಗ್ಗೆ ಕುತೂಹಲ ಮೂಡಿಸಿದೆ. ಸುದೀಪ್ ಕುತ್ತಿಗೆಯ ಮೇಲೆ ಸುಟ್ಟ ಗಾಯದ ಕಲೆಯಿದ್ದು, ಅದರ ಪಕ್ಕ ರೋಮನ್ ಅಥವಾ ಇಟಾಲಿಕ್ ಸಂಖ್ಯೆಗಳಂತೆ ಕಾಣುವ ಹಚ್ಚೆಯಿದೆ. ಹಾಗೇ "ಪೈಲ್ವಾನ್' ಚಿತ್ರದ ಸಮಯದಲ್ಲಿ ಸಿಕ್ಸ್ ಪ್ಯಾಕ್ಗಾಗಿ ದೇಹ ಹುರಿಗೊಳಿಸಿಕೊಂಡಿದ್ದ ನಟ ಸುದೀಪ್, "ಬಿಲ್ಲಾ ರಂಗ ಬಾಷಾ' ಪಾತ್ರಕ್ಕೂ ಜಿಮ್ನಲ್ಲಿ ಸಾಕಷ್ಟು ಬೆವರಿಳಿಸಿ ಸಿದ್ಧತೆ ಮಾಡಿಕೊಂಡಿದ್ದಾರೆ. ಹಾಗೇ ಟೈಟಲ್ ಹೇಳುವಂತೆ ಚಿತ್ರದಲ್ಲಿ ಮೂರು ಪಾತ್ರಗಳು ಇರುತ್ತವಾ? ಅಥವಾ ಒಂದೇ ಪಾತ್ರ ಮೂರು ವಿಭಿನ್ನ ಶೇಡ್ಗಳಲ್ಲಿರುತ್ತಾ? ಎಂಬ ಕುತೂಹಲ ಸದ್ಯಕ್ಕೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಉತ್ತರ ದೊರೆಯಲಿದೆ.