ಇದು ನೊಂದ ಹೆಣ್ಣಿನ ಕಥೆ!; ಚಿತ್ರವಾಯ್ತು ಸಾರಾ ಅವರ ವಜ್ರಗಳು

Movie 2
Published on

ಸಾರಾ ಅಬೂಬಕರ್ ಅವರ ಜನಪ್ರಿಯ ಕಾದಂಬರಿಗಳಲ್ಲಿ ‘ವಜ್ರಗಳು’ ಸಹ ಒಂದು. ಈಗ ಆ ಕಾದಂಬರಿ ಆಧರಿಸಿ ‘ಸಾರಾ ವಜ್ರ’ ಎಂಬ ಚಿತ್ರ ತಯಾರಾಗಿದೆ. ಅಷ್ಟೇ ಅಲ್ಲ, ಇದೇ ಶುಕ್ರವಾರ (ಮೇ 20) ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಶ್ವೇತಾ ಶೆಟ್ಟಿ (ಆರ್ನಾ ಸಾಧ್ಯ) ನಿರ್ದೇಶಿಸಿದ್ದು, ಚಿತ್ರದ ಬಗ್ಗೆ ಮಾತನಾಡುವುದಕ್ಕೆ ಅವರು ಚಿತ್ರತಂಡದವರೊಂದಿಗೆ ಬಂದಿದ್ದರು. ‘ಸಾರಾ ವಜ್ರ’ ಚಿತ್ರದ ಕಥೆ 1989ರಲ್ಲಿ ಪ್ರಾರಂಭವಾಗಿ, ಈಗಿನವರೆಗೂ ಬಂದು ನಿಲ್ಲುತ್ತದಂತೆ. ತ್ರಿವಳಿ ತಲಾಖ್ ಪರಿಣಾಮವಾಗಿ ಹೆಣ್ಮಕ್ಕಳು ಅನುಭವಿಸುವ ಕಷ್ಟ, ನೋವುಗಳ ಚಿತ್ರಣವಿದೆಯಂತೆ.

ಅನು ಪ್ರಭಾಕರ್, ಇಲ್ಲಿ ನಫೀಜಾ ಎಂಬ ಬ್ಯಾರಿ ಸಮಾಜದ ಮಹಿಳೆಯ ಪಾತ್ರ ಮಾಡಿದ್ದಾರಂತೆ. 20ನೇ ವಯಸ್ಸಿನಿಂದ 60 ವರ್ಷದ ಮಹಿಳೆಯಾಗಿ ಅವರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಕುರಿತು ಮಾತನಾಡುವ ಅವರು, ‘ಎಲ್ಲ ಹೆಣ್ಮಕ್ಕಳಿಗೂ ನಾಟುವಂತಹ ಕಥೆ ಇದು. ಈ ಚಿತ್ರದಿಂದ 10 ಹೆಣ್ಮಕ್ಕಳಿಗಾದರೂ ಧೈರ್ಯ ಬರಲಿ ಎನ್ನುವುದು ನಮ್ಮ ಆಶಯ. ಸಿನಿಮಾ ನೋಡಿ ಹೊರಬಂದ ಮೇಲೆ ಒಂದು ನಗು ಇರುತ್ತದೆ. ಮಹಿಳೆ ಬರೆದ ಈ ಮಹಿಳಾ ಪ್ರಧಾನವಾದ ಕಥೆಯನ್ನು ಮಹಿಳೆಯೇ ನಿರ್ದೇಶಿಸಿರುವುದು ವಿಶೇಷ. ಪುನೀತ್ ಅವರು ನಮ್ಮ ಚಿತ್ರಕ್ಕೆ ಬಹಳ ಸಪೋರ್ಟ್ ಮಾಡಿದ್ದರು. ಕಾಸರಗೋಡಿನಲ್ಲಿ ಬ್ಯಾರಿ ಸಮುದಾಯ ವಾಸವಿರುವ ಜಾಗದಲ್ಲೇ ಚಿತ್ರೀಕರಣ ಮಾಡಿದ್ದೇವೆ’ ಎಂದು ಚಿತ್ರದ ಬಗ್ಗೆ ಮಾಹಿತಿ ಕೊಡುತ್ತಾರೆ. ಚಿತ್ರದಲ್ಲಿ ರಹಮಾನ್ ಹಾಸನ್, ಸುಧಾ ಬೆಳವಾಡಿ, ರಮೇಶ್ ಭಟ್ ಮುಂತಾದವರು ನಟಿಸಿದ್ದಾರೆ. ದೇವೇಂದ್ರ ರೆಡ್ಡಿ ನಿರ್ವಿುಸಿರುವ ಈ ಚಿತ್ರದಲ್ಲಿ ಐದು ಹಾಡುಗಳಿದ್ದು ವಿ. ಮನೋಹರ್ ಸಂಗೀತ ಸಂಯೋ ಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net