

Samantha : ಬಾಲಿವುಡ್ನಲ್ಲಿ ಸೆಲೆಬ್ರಿಟಿಗಳನ್ನು ಕಾಡುವ ಪ್ರಮುಖರಲ್ಲಿ ಒಬ್ಬರೆಂದರೆ ಅದು ಪಾಪರಾಜಿಗಳು. ಸೆಲೆಬ್ರಿಟಿಗಳಿಗೂ ವೈಯಕ್ತಿಕ ಜೀವನ ಇದೆ ಎಂಬುದನ್ನು ಮರೆತು ಕೆಲವೊಮ್ಮೆ ತುಂಬಾ ಅತಿರೇಕದ ವರ್ತನೆ ತೋರುತ್ತಾರೆ. ಎಲ್ಲೆಂದರಲ್ಲಿ ಫೋಟೋಗಾಗಿ ಮುಗಿ ಬೀಳುತ್ತಾರೆ. ಇನ್ನು ಕೆಲವೊಮ್ಮೆ ಸೆಲೆಬ್ರಿಟಿಗಳ ಅನುಮತಿ ಇಲ್ಲದೇ ಫೋಟೋ ಕ್ಲಿಕ್ಕಿಸುತ್ತಾರೆ. ಇಂತಹ ಘಟನೆಗಳು ಅನೇಕ ಸೆಲೆಬ್ರಿಗಳನ್ನು ಮುಜುಗರಕ್ಕೆ ದೂಡುತ್ತದೆ. ಇತ್ತೀಚೆಗೆ ಸಮಂತಾ ಕೂಡ ಇದೇ ಸಮಸ್ಯೆಯನ್ನು ಎದುರಿಸಿದ್ದಾರೆ.
ಸಮಂತಾ ಅವರು ಪ್ರಸ್ತುತ ಹೆಚ್ಚಾಗಿ ಮುಂಬೈನಲ್ಲಿ ನೆಲೆಸಿದ್ದಾರೆ. ಇಂದು ಬೆಳಗ್ಗೆ ಮುಂಬೈನಲ್ಲಿ ಸಮಂತಾ ಜಿಮ್ನಿಂದ ಹಿಂತಿರುಗುತ್ತಿದ್ದಾಗ ಪಾಪರಾಜಿಗಳು ಅವರ ಅನುಮತಿ ಇಲ್ಲದೇ ವಿಡಿಯೋಗಳು ಮತ್ತು ಫೋಟೋಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು.
ಸಮಂತಾ ಅವರು ಜಿಮ್ ಉಡುಪಿನಲ್ಲಿ ಜಿಮ್ನಿಂದ ಹೊರ ಬಂದು ತಮ್ಮ ಕಾರನ್ನು ಏರಲು ಹೊರಟಾಗ ಅಲ್ಲಿಯೇ ಇದ್ದ ಪಾಪರಾಜಿಗಳು ಅವರ ಫೋಟೋಗಳು ಮತ್ತು ವಿಡಿಯೋಗಳನ್ನು ತೆಗೆದುಕೊಳ್ಳುತ್ತಿದ್ದರು. ಅದನ್ನು ನೋಡಿದ ಸಮಂತಾ ಸಿಟ್ಟಾದರು. ಅಲ್ಲದೆ, ಸಾಕು ನಿಲ್ಲಿಸಿ ಎಂದು ಏರು ಧ್ವನಿಯಿಂದ ಗದರಿ, ಓಡಿ ಹೋಗಿ ತಮ್ಮ ಕಾರು ಏರಿದರು.
ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಪಾಪರಾಜಿಗಳ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಕಲಾವಿದರಿಗೂ ಖಾಸಗಿ ಬದುಕಿದೆ. ಅದನ್ನು ಗೌರವಿಸಿ ಎಂದು ಪಾಪರಾಜಿಗಳನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮಗೆಲ್ಲ ಏನಾಗಿದೆ? ಸ್ವಲ್ಪವೂ ನಾಚಿಕೆ ಇಲ್ಲವಾ ಎಂದು ಒಬ್ಬ ಬಳಕೆದಾರ ಬರೆದರೆ, ಇನ್ನೊಬ್ಬರು, ಅನುಮತಿ ಇಲ್ಲದೆ ಫೋಟೋ ಅಥವಾ ವಿಡಿಯೋಗಳನ್ನು ಸೆರೆಹಿಡಿಯುವುದು ತಪ್ಪು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ, ಸಮಂತಾ ಅವರು ಇತ್ತೀಚೆಗೆ ಶುಭಂ ಚಿತ್ರದ ಮೂಲಕ ನಿರ್ಮಾಪಕಿಯಾಗಿ ಪ್ರೇಕ್ಷಕರ ಮುಂದೆ ಬಂದರು. ಈ ಚಿತ್ರದಲ್ಲಿ ಅವರು ಅತಿಥಿ ಪಾತ್ರದಲ್ಲಿಯೂ ಕಾಣಿಸಿಕೊಂಡರು. ಪ್ರಸ್ತುತ, ಸಮಂತಾ ಬಾಲಿವುಡ್ನಲ್ಲಿ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ, ತಮ್ಮದೇ ನಿರ್ಮಾಣ ಸಂಸ್ಥೆಯಡಿಯಲ್ಲಿ ಚಿತ್ರವೊಂದರಲ್ಲಿಯೂ ನಟಿಸುತ್ತಿದ್ದಾರೆ. (ಏಜೆನ್ಸೀಸ್)