

ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ 2018ನೇ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪ್ರಕಟಿಸಿದೆ. ಜೀವಮಾನ ಸಾಧನೆಗಾಗಿ ‘ಡಾ.ರಾಜ್ಕುಮಾರ್’ ಪ್ರಶಸ್ತಿಗೆ ಹಿರಿಯ ನಟ ಜೆ.ಕೆ.ಶ್ರೀನಿವಾಸಮೂರ್ತಿ, ‘ಪುಟ್ಟಣ್ಣ ಕಣಗಾಲ್’ ಪ್ರಶಸ್ತಿಗೆ ಹಿರಿಯ ನಿರ್ದೇಶಕ ಪಿ.ಶೇಷಾದ್ರಿ, ‘ಡಾ.ವಿಷ್ಣುವರ್ಧನ್’ ಪ್ರಶಸ್ತಿಗೆ ಹಿರಿಯ ಛಾಯಾಗ್ರಾಹಕ ಬಿ.ಎಸ್. ಬಸವರಾಜು ಪಾತ್ರರಾಗಿದ್ದಾರೆ.
ವಾರ್ತಾ ಇಲಾಖೆ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ, ಜೀವಮಾನ ಸಾಧನೆ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಬಸಂತ್ಕುಮಾರ್ ಪಾಟೀಲ್, ವಾರ್ಷಿಕ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಜೋಸೈಮನ್, ಮುಖ್ಯಮಂತ್ರಿಗಳ ಸಲಹೆಗಾರ ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು.
ಪ್ರಶಸ್ತಿ ವಿವರ
ರಾಘವೇಂದ್ರ ರಾಜ್ಕುಮಾರ್ ಅತ್ಯುತ್ತಮ ನಟ (ಚಿತ್ರ: ‘ಅಮ್ಮನ ಮನೆ’), ಮೇಘನಾ ರಾಜ್ ಅತ್ಯುತ್ತಮ ನಟಿ (ಚಿತ್ರ: ‘ಇರುವುದೆಲ್ಲವ ಬಿಟ್ಟು’) ದಯಾಳ್ ಪದ್ಮನಾಭನ್ ನಿರ್ದೇಶನದ ‘ಆ ಕರಾಳ ರಾತ್ರಿ’ ಮೊದಲ ಅತ್ಯುತ್ತಮ ಚಿತ್ರ, ಬಿ.ಮಂಜುನಾಥ ನಿರ್ದೇಶನದ ‘ಹೂವು ಬಳ್ಳಿ’ ಅತ್ಯುತ್ತಮ ಮಕ್ಕಳ ಹಾಗೂ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಅತ್ಯುತ್ತಮ ಮನರಂಜನಾ ಚಿತ್ರ ಪ್ರಶಸ್ತಿಗೆ ಭಾಜನವಾಗಿವೆ. ಬಾಲಾಜಿ ಮನೋಹರ್ (ಚೂರಿಕಟ್ಟೆ) ಹಾಗೂ ವೀಣಾ ಸುಂದರ್ (ಆ ಕರಾಳ ರಾತ್ರಿ) ಅತ್ಯುತ್ತಮ ಪೋಷಕ ನಟ-ಪೋಷಕ ನಟಿ ಎನಿಸಿಕೊಂಡರೆ, ಮಾಸ್ಟರ್ ಆರೆನ್ (ರಾಮನ ಸವಾರಿ) ಮತ್ತು ಬೇಬಿ ಸಿಂಚನಾ (ಅಂದವಾದ) ಅತ್ಯುತ್ತಮ ಬಾಲ ನಟ-ಬಾಲ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಅಲ್ಕೊಟ್ರು ಇಲ್ಕೊಡ್ಲಿಲ್ಲ!
ಕಳೆದ ವರ್ಷವಷ್ಟೇ ಕನ್ನಡಕ್ಕೆ ಬರೋಬ್ಬರಿ 11 ರಾಷ್ಟ್ರಪ್ರಶಸ್ತಿ ಲಭಿಸಿದ್ದವು. ಆ ಪೈಕಿ ಮನ್ಸೊರೆ ನಿರ್ದೇಶನದ ‘ನಾತಿ ಚರಾಮಿ’ ಚಿತ್ರ 5 ವಿಭಾಗಗಳಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿತ್ತು. ಆದರೆ, ‘ನಾತಿಚರಾಮಿ’ಗೆ ಒಂದೇ ಒಂದು ರಾಜ್ಯ ಚಲನಚಿತ್ರ ಪ್ರಶಸ್ತಿ ದೊರೆತಿಲ್ಲ. ಈ ವಿಚಾರ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇಷ್ಟು ವರ್ಷಗಳ ಸಿನಿ ಪಯಣದಲ್ಲಿ ಇದೇ ಮೊದಲ ಸಲ ನನಗೆ ಪ್ರಶಸ್ತಿ ಬಂದಿದ್ದು. ಈ ಪ್ರಶಸ್ತಿ ಮತ್ತಷ್ಟು ದೊಡ್ಡ ಪ್ರಯತ್ನಕ್ಕೆ, ಸಾಹಸಕ್ಕೆ ಕೈಹಾಕು ವಂತೆ ಮಾಡಿದೆ. ನಿರ್ದೇಶಕರು ಮತ್ತು ಇಡೀ ಚಿತ್ರತಂಡಕ್ಕೆ ನನ್ನ ಧನ್ಯವಾದಗಳು. | ರಾಘವೇಂದ್ರ ರಾಜ್ಕುಮಾರ್ ನಟ
ಸಾಹಿತ್ಯ ಪ್ರಶಸ್ತಿ
ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಕಾಶನದಲ್ಲಿ ಎನ್.ಎಸ್.ಶಂಕರ್ ಬರೆದಿರುವ ‘ಚಿತ್ರಕಥೆ: ಹಾಗೆಂದರೇನು?’, ಸಾವಣ್ಣ ಎಂಟರ್ಪ್ರೖೆಸಸ್ ಪ್ರಕಟಿತ- ಶರಣು ಹುಲ್ಲೂರು ಬರೆದಿರುವ ‘ಅಂಬರೀಶ್ ವ್ಯಕ್ತಿ-ವ್ಯಕ್ತಿತ್ವ-ವರ್ಣರಂಜಿತ ಬದುಕು’ ಕೃತಿಗಳಿಗೆ ರಾಜ್ಯ ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿ ಘೋಷಿಸಲಾಗಿದೆ.