

ಸದಾ ತಮ್ಮ ವಿಚಿತ್ರ ಮ್ಯಾನರಸಿಂ ಮತ್ತು ಹಾಸ್ಯಭರಿತ ಮಾತುಗಳಿಂದ ಎಲ್ಲರನ್ನೂ ನಗಿಸುತ್ತಿದ್ದ ಬುಲೆಟ್ ಪ್ರಕಾಶ್ ಸೋಮವಾರ ಬಹುಅಂಗಾಂಗ ವೈಲ್ಯದಿಂದ ಕೊನೆ ಉಸಿರೆಳೆದಿದ್ದಾರೆ. ಇನ್ನು ಮಂಗಳವಾರ ಹೆಬ್ಬಾಳ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನಡೆದಿದೆ. ಲಾಕ್‌ಡೌನ್ ಆಗಿರುವುದರಿಂದ ಹಲವು ಸೆಲೆಬ್ರಿಟಿಗಳಿಗೆ ಬುಲೆಟ್ ಪ್ರಕಾಶ್ ಅವರ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಿಲ್ಲ. ಹಾಗೆ ಸಾಧ್ಯವಾಗದವರಲ್ಲ ಬುಲೆಟ್ ಅವರ ಸಾವಿಗೆ ಸೋಷಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸಿದ್ದಾರೆ.
ಪ್ರಮುಖವಾಗಿ ತಮ್ಮ ಗೆಳೆಯನನ್ನು ಕಳೆದುಕೊಂಡ ನೋವಿನಲ್ಲಿ ದರ್ಶನ್ ಅವರು, ಟ್ವಿಟರ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ‘ಹಾಸ್ಯ ಕಲಾವಿದರಾದ ಬುಲೆಟ್ ಪ್ರಕಾಶ್ ನಮ್ಮಿಂದ ದೈಹಿಕವಾಗಿ ದೂರವಾಗಿದ್ದಾರೆ. ಈ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ, ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಸುದೀಪ್ ಸಹ ತಮ್ಮ ಅಗಲಿದ ಗೆಳೆಯನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ‘ಬುಲೆಟ್ ಪ್ರಕಾಶ್ ಇನ್ನಿಲ್ಲ ಎಂಬ ವಿಷಯ ಕೇಳಿ ಬಹಳ ನೋವಾಗಿದೆ. ಅದಕ್ಕಿಂತ ನೋವಿನ ಸಂಗತಿ ಎಂದರೆ, ಅವರ ಅಂತಿಮ ದರ್ಶನ ಪಡೆಯುವುದಕ್ಕೂ ಚಿತ್ರರಂಗದ ಸ್ನೇಹಿತರಿಗೆ ಸಾಧ್ಯವಾಗುತ್ತಿಲ್ಲ. ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.
ಬರೀ ದರ್ಶನ್ ಮತ್ತು ಸುದೀಪ್ ಅಷ್ಟೇ ಅಲ್ಲ, ಗಣೇಶ್, ಆದಿತ್ಯ, ತರುಣ್ ಸುಧೀರ್ ಸೇರಿದಂತೆ ಚಿತ್ರರಂಗದ ಹಲವು ಸೆಲೆಬ್ರಿಟಿಗಳು, ಬುಲೆಟ್ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.