

ಬೆಂಗಳೂರು: ಶರಣ್ ನಟನೆಯ ‘ಗುರು ಶಿಷ್ಯರು’ ಸಿನಿಮಾ ಘೋಷಣೆ ಆದ ಬಳಿಕ ಒಂದಲ್ಲ ಒಂದು ರೀತಿ ಕುತೂಹಲ ಮೂಡಿಸುತ್ತಲೇ ಬಂದಿದೆ. ಭಾನುವಾರ ಶರಣ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಚಿತ್ರತಂಡದಿಂದ ಹೊಸ ಪೋಸ್ಟರ್ ಅನಾವರಣಗೊಂಡಿದೆ. ವಿಶೇಷವೆಂದರೆ, ಸ್ಯಾಂಡಲ್ವುಡ್ನ ಹಲವು ನಟರ ಮಕ್ಕಳು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ!
ಜಡೇಶ್ ಕುಮಾರ್ ಹಂಪಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಗುರು ಶಿಷ್ಯರು’ ಖೋ ಖೋ ಆಟದ ಹಿನ್ನೆಲೆಯಲ್ಲಿ ಸಾಗುವ ಕ್ರೀಡಾ ಪ್ರಧಾನ ಸಿನಿಮಾ. 90-95ರ ಕಾಲಘಟ್ಟದಲ್ಲಿ ನಡೆಯುವ ಈ ಕಥೆಯನ್ನು ಆ ಕಾಲಘಟ್ಟಕ್ಕೆ ತಕ್ಕಂತೆ ಚಿತ್ರೀಕರಿಸಲಾಗಿದೆ. ಈಗಾಗಲೇ ಬಹುತೇಕ ಮಾತಿನ ಭಾಗದ ಶೂಟಿಂಗ್ ಮುಗಿಸಿರುವ ನಿರ್ದೇಶಕರು, ಪೋಸ್ಟರ್ ಮೂಲಕ ಶಿಷ್ಯರನ್ನು ಪರಿಚಯಿಸಿದ್ದಾರೆ.
‘ಸ್ಕ್ರಿಪ್ಟ್ ಬರೆಯುವಾಗ ಈ ತರಹದ ಪ್ಲಾನ್ ಇರಲಿಲ್ಲ’ ಎನ್ನುವ ಜಡೇಶ್, ‘ಶೂಟಿಂಗ್ ಹಂತದಲ್ಲಿ ಕಲಾವಿದರ ಮಕ್ಕಳನ್ನೇ ಏಕೆ ಬಳಸಿಕೊಳ್ಳಬಾರದು ಎಂದೆನಿಸಿತು. ಆಗ ಶರಣ್ ಪುತ್ರ ಹೃದಯ್, ‘ನೆನಪಿರಲಿ’ ಪ್ರೇಮ್ ಮಗ ಏಕಾಂತ್, ಬುಲೆಟ್ ಪ್ರಕಾಶ್ ಮಗ ರಕ್ಷಕ್, ರವಿಶಂಕರ್ ಗೌಡ ಮಗ ಸೂರ್ಯ, ನವೀನ್ ಕೃಷ್ಣ ಮಗ ಹರ್ಷಿತ್, ಸುರಪುರ ಎಂಎಲ್ಎ ಮಗ ಮಣಿ ಜತೆಗೆ ಆಡಿಷನ್ನಲ್ಲಿ ಆಯ್ಕೆಯಾದ ಹುಡುಗರೂ ಇದ್ದಾರೆ. ಮಾತಿನ ಶೂಟಿಂಗ್ ಮುಗಿಸಿದ್ದೇವೆ. ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಇದೆ. ಶೀಘ್ರದಲ್ಲಿ ಆ ಕೆಲಸವನ್ನೂ ಮುಗಿಸಲಿದ್ದೇವೆ’ ಎನ್ನುತ್ತಾರೆ.
ಲಡ್ಡು ಸಿನಿಮಾ ಹೌಸ್ ಬ್ಯಾನರ್ನಲ್ಲಿ ಶರಣ್ ಮತ್ತು ತರುಣ್ ಸುಧೀರ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಆರೂರು ಸುಧಾಕರ್ ಶೆಟ್ಟಿ ಛಾಯಾಗ್ರಹಣ ಚಿತ್ರಕ್ಕಿದೆ. ಶರಣ್ಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ನಟಿಸಿದ್ದಾರೆ.