ಏಳು ಕೋಟಿಯ ಸ್ಟೇಡಿಯಂ ಸೆಟ್ ಸದ್ಯದಲ್ಲೇ ಪುಡಿಪುಡಿ ...

Final - Maidaan
Published on

ಕೊನೆಗೂ ಅಂದುಕೊಂಡಂತೆಯೇ ಆಗಿದೆ. ಅಜಯ್ ದೇವಗನ್ ಅಭಿನಯದ ಹೊಸ ಚಿತ್ರಕ್ಕೆ ದೊಡ್ಡ ಸ್ಟೇಡಿಯಂವೊಂದರ ಸೆಟ್ ನಿರ್ಮಿಸಲಾಗಿತ್ತು. ಏಳು ಕೋಟಿ ವೆಚ್ಚದ ಈ ಸೆಟ್, ಈಗ ಬಳಸದಿದ್ದಾರಿಂದ ಸಾಕಷ್ಟು ಹಾಳಾಗಿದ್ದು, ಸದ್ಯದಲ್ಲೇ ಇದನ್ನು ಕೆಡವಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಹೌದು, ಅಜಯ್ ದೇವಗನ್ ಅಭಿನಯದ `ಮೈದಾನ್' ಚಿತ್ರಕ್ಕೆ ಕಳೆದ ವರ್ಷವೇ ಚಿತ್ರೀಕರಣ ಪ್ರಾರಂಭವಾಗಿತ್ತು. ಆದಷ್ಟು ಬೇಗ ಚಿತ್ರೀಕರಣ ಮುಗಿಸಿ, ಇದೇ ಸೆಪ್ಟೆಂಬರ್‍ನಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರತಂಡದ ಸಹ ಘೋಷಿಸಿತ್ತು. ಆದರೆ, ಅಷ್ಟರಲ್ಲಿ ಲಾಕ್‍ಡೌನ್ ಘೋಷಣೆಯಾಗಿ, ಈ ಸೆಟ್‍ನಲ್ಲಿ ಚಿತ್ರೀಕರಣ ಮಾಡದಂತಾಯಿತು.

ಕೆಲವು ದಿನಗಳ ನಂತರ ಎಲ್ಲವೂ ಸರಿ ಹೋಗುತ್ತದೆ, ಮತ್ತೊಮ್ಮೆ ಚಿತ್ರೀಕರಣ ಮಾಡಬಹುದು ಎಂಬ ಚಿತ್ರತಂಡದ ನಂಬಿಕೆ ಕ್ರಮೇಣ ಸುಳ್ಳಾಯಿತು. ಕ್ರಮೇಣ ಲಾಕ್‍ಡೌನ್ ವಿಸ್ತರಣೆಯಾಗಿದ್ದರಿಂದ ಚಿತ್ರೀಕರಣ ಸಂಪೂರ್ಣವಾಗಿ ನಿಂತಿತು. ಲಾಕ್‍ಡೌನ್ ತೆರವಾದರೂ, ಚಿತ್ರೀಕರಣ ಚಟುವಟಿಕೆಗಳಿಗೆ ಅನುಮತಿ ಸಿಗದೇ ಇದ್ದ ಕಾರಣ, ಚಿತ್ರೀಕರಣ ಮಾಡಲಾಗಲಿಲ್ಲ.

ಜೂನ್‍ನಲ್ಲಿ ಮಹಾರಾಷ್ಟ್ರದಲ್ಲಿ ಚಿತ್ರೀಕರಣ ನಡೆಸುವುದಕ್ಕೆ ಅನುಮತಿ ಸಿಕ್ಕರೂ, ಕರೊನಾ ಕೇಸ್‍ಗಳಲ್ಲಿ ಹೆಚ್ಚಳ ಕಂಡುಬಂದಿದ್ದರಿಂದ, ಚಿತ್ರೀಕರಣ ಪ್ರಾರಂಭವಾಗಲಿಲ್ಲ. ಇದೀಗ ಮುಂಬೈನಲ್ಲಿ ಮಳೆ ಶುರುವಾಗಿದ್ದು, ಇದರಿಂದ ಮೈದಾನದ ಸೆಟ್ ಕ್ರಮೇಣ ಹಾಳಾಗುತ್ತಿದೆ.

ಹಾಗಾಗಿ ಸದ್ಯಕ್ಕೆ ಸೆಟ್ ಕೆಡವಿ, ಆ ನಂತರ ಕರೊನಾ ಹಾವಳಿ ಸ್ವಲ್ಪ ಕಡಿಮೆಯಾಗುತ್ತಿದ್ದಂತೆಯೇ ಮತ್ತೆ ನಿರ್ಮಿಸಿದರಾಯಿತು ಎಂಬ ತೀರ್ಮಾನಕ್ಕೆ ಇದೀಗ ಚಿತ್ರತಂಡ ಬಂದಿದೆ. ಈ ನಿಟ್ಟಿನಲ್ಲಿ ಏಳು ಕೋಟಿ ವೆಚ್ಚದ ಸೆಟ್ ಕೆಡವಲು ತೀರ್ಮಾನ ತೆಗೆದುಕೊಂಡಿದ್ದು, ಸದ್ಯದಲ್ಲೇ ಈ ಕೆಲಸ ಶುರುವಾಗಲಿದೆ. ಬಹುಶಃ ಈ ವರ್ಷದ ಕೊನೆಯಲ್ಲಿ ಸೆಟ್ ನಿರ್ಮಾಣ ಮತ್ತೆ ಶುರುವಾಗುವ ಸಾಧ್ಯತೆ ಇದೆ.

ಈ ಮಧ್ಯೆ, `ಮೈದಾನ್' ಚಿತ್ರವು ಭಾರತದಲ್ಲಿ ಪುಟ್ಬಾಲ್ ಯುಗದ ಸುವರ್ಣ ಕಥೆಯನ್ನು ಹೇಳುತ್ತಿದ್ದು, ಚಿತ್ರದಲ್ಲಿ ಅಜಯ್ ದೇವಗನ್, ಪ್ರಿಯಾಮಣಿ ಮುಂತಾದವರು ನಟಿಸುತ್ತಿದ್ದಾರೆ. ಇನ್ನು ಚಿತ್ರವು 2021ರ ಆಗಸ್ಟ್ 13ರಂದು ಬಿಡಗುಡೆಯಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net