

ಬೆಂಗಳೂರು: ನಟ ಶ್ರೀನಗರ ಕಿಟ್ಟಿಗೆ ಡಬಲ್ ಖುಷಿ. ಅವರ ನಟನೆಯ ‘ಸಂಜು ವೆಡ್ಸ್ ಗೀತಾ-2’ ಚಿತ್ರ ಇತ್ತೀಚೆಗೆ 25 ದಿನಗಳನ್ನು ಪೂರೈಸಿತ್ತು. ಈ ಮಧ್ಯೆ, ಶ್ರೀನಗರ ಕಿಟ್ಟಿ ಜು. 8ರಂದು 47ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಅದೇ ಖುಷಿಯಲ್ಲಿ ‘ವೇಷಗಳು’ ಎಂಬ ಹೊಸ ಸಿನಿಮಾ ಘೋಷಣೆ ಮಾಡಲಾಗಿದೆ. ಎರಡು ವಿಭಿನ್ನ ಗೆಟಪ್‌ಗಳಲ್ಲಿ ಕಿಟ್ಟಿ ಕಾಣಿಸಿಕೊಳ್ಳಲಿದ್ದು, ಅವರ ಲುಕ್‌ಗಳು ವೈರಲ್ ಆಗಿವೆ. ‘ವೇಷಗಳು’ ಶ್ರೀನಗರ ಕಿಟ್ಟಿ ಅವರ ಮಾವ, ಪತ್ರಕರ್ತ ರವಿ ಬೆಳಗೆರೆ ಬರೆದ ಕಥೆ ಆಧರಿತ ಚಿತ್ರ ಎನ್ನುವುದು ಮತ್ತೊಂದು ವಿಶೇಷತೆ. ಜೋಗತಿ ಸಮುದಾಯದ ಜೀವನದ ಆಗು-ಹೋಗುಗಳ ಸುತ್ತ ಕಥೆ ಸುತ್ತುತ್ತದೆ. ‘ರಂಗ ಎಸ್‌ಎಸ್‌ಎಲ್‌ಸಿ’, ‘ಗೌಳಿ’, ‘ಸಂಜು ವೆಡ್ಸ್ ಗೀತಾ-2’ ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ರಂಗಭೂಮಿ ಪ್ರತಿಭೆ ಕಿಶನ್ ರಾವ್ ದಳವಿ ಈ ಚಿತ್ರಕ್ಕೆ ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಶ್ರೀನಗರ ಕಿಟ್ಟಿ ಈ ಚಿತ್ರದಲ್ಲಿ ಬಸಪ್ಪ ಹಾಗೂ ಜೋಗತಿ ಬಸಮ್ಮ ರೂಪದಲ್ಲಿ ಅಭಿನಯಿಸಲಿದ್ದಾರೆ. ಪಾತ್ರದ ನಿರ್ವಹಣೆಗಾಗಿ ಕಿಟ್ಟಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಜೋಗತಿ ಮಂಜಮ್ಮ ಅವರನ್ನು ಸಂಪರ್ಕಿಸಿ, ಜೋಗತಿಯರ ಜೀವನದಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರಂತೆ. ಜತೆಗೆ ಹಲವು ವರ್ಷಗಳ ನಂತರ ಅವರು ಕ್ಲೀನ್ ಶೇವ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಕಿಶನ್, ‘ಆಗಸ್ಟ್‌ನಲ್ಲಿ ‘ವೇಷಗಳು’ ಚಿತ್ರೀಕರಣ ಆರಂಭಿಸಲಿದ್ದೇವೆ. ಮಧ್ಯಪ್ರದೇಶ, ಮಹಾಕಾಲೇಶ್ವರ, ಉತ್ತರ ಕರ್ನಾಟಕ, ಬೆಂಗಳೂರು ಹಾಗೂ ಮೈಸೂರಿನಲ್ಲಿ ಶೂಟಿಂಗ್ ಮಾಡುವ ಪ್ಲ್ಯಾನ್ ಇದೆ. ಮುಂದಿನ ದಿನಗಳಲ್ಲಿ ಬಾಕಿ ಕಲಾವಿದರ ಮಾಹಿತಿ ನೀಡಲಾಗುವುದು’ ಎಂದು ತಿಳಿಸಿದರು. ಕೌಶಿಕ್ ಹರ್ಷ ಸಂಗೀತ, ರಾಜ್‌ಗುರು, ಸೌಜನ್ಯ ದತ್ತರಾಜ್ ಸಂಭಾಷಣೆ, ಅಕ್ಷಯ್ ಪಿ.ರಾವ್ ಸಂಕಲನ ಚಿತ್ರಕ್ಕಿರಲಿದೆ.