

ವಿಜಯವಾಣಿ ಸುದ್ದಿಜಾಲ ಬೆಂಗಳೂರು
"ಮದಗಜ' ಚಿತ್ರ ತೆರೆಗೆ ಬಂದ ಮೂರು ವರ್ಷಗಳ ಬಳಿಕ ಶ್ರೀಮುರಳಿ ನಟಿಸಿರುವ ಹೊಸ ಸಿನಿಮಾ "ಬಘೀರ'. ಡಾ. ಸೂರಿ ಆ್ಯಕ್ಷನ್-ಕಟ್ ಹೇಳಿರುವ ಈ ಚಿತ್ರದಲ್ಲಿ ಶ್ರೀಮುರಳಿ ಸೂಪರ್ಹೀರೋ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗಷ್ಟೆ ಟ್ರೇಲರ್ ರಿಲೀಸ್ ಮಾಡಲಾಗಿದೆ. ಚಿತ್ರದ ಬಗ್ಗೆ ಅವರು, "ಸಣ್ಣ ವಯಸ್ಸಿನಲ್ಲಿ ಬ್ಯಾಟ್ಮ್ಯಾನ್, ಐರನ್ ಮ್ಯಾನ್, ಸ್ಪೈಡರ್ಮ್ಯಾನ್, ಸೂಪರ್ಮ್ಯಾನ್ನಂತಹ ಸೂಪರ್ಹೀರೋಗಳನ್ನು ನೋಡಿ ನಾನೂ ಸೂಪರ್ಹೀರೋ ಆಗಬೇಕು ಅಂತ ಆಸೆಪಡುತ್ತಿದ್ದೆ. "ಬಘೀರ' ಕಥೆ ಕೇಳಿದ ತಕ್ಷಣ ತುಂಬ ಖುಷಿಯಾಯಿತು. ಮೊದಲ ಬಾರಿ ಕಾಸ್ಟ್ಯೂಮ್ ಧರಿಸಿದಾಗ, ನನಗೆ ಇಷ್ಟದ ತಿಂಡಿ, ತಿನಿಸುಗಳನ್ನು ತೊರೆದು, ವರ್ಕೌಟ್ ಮಾಡಲೇಬೇಕು ಅಂತ ಸಿದ್ಧತೆ ಮಾಡತೊಡಗಿದೆ' ಎಂದು ಮಾಹಿತಿ ನೀಡುತ್ತಾರೆ ನಾಯಕ ಶ್ರೀಮುರಳಿ.
ನಾಯಕಿ ರುಕ್ಮಿಣಿ ವಸಂತ್, "ಪಾತ್ರದ ಬಗ್ಗೆ ಹೆಚ್ಚು ಹೇಳಲಾರೆ. ಆದರೆ, ಈ ಚಿತ್ರದಲ್ಲಿ ಒಂದೊಳ್ಳೆ ಪರಿಣಾಮಕಾರಿ ಪಾತ್ರದಲ್ಲಿ ನಟಿಸಿದ್ದೇನೆ. ಸವಾಲಿನ ಸೀನ್ಗಳಿದ್ದವು. ಒಂದು ಉತ್ತಮ ಅನುಭವ ನೀಡಿದ ಚಿತ್ರ' ಎಂದರು. ನಿರ್ದೇಶಕ ಡಾ. ಸೂರಿ, "ಕರಿಚಿರತೆಗಳನ್ನು "ಬಘೀರ' ಎನ್ನುತ್ತಾರೆ. ಪ್ರಶಾಂತ್ ನೀಲ್ ಈ ಕಥೆಯನ್ನು ಹೇಳಿದಾಗ, ನನಗೆ ಮೊದಲು ಹೊಳೆದಿದ್ದೇ ಈ ಟೈಟಲ್. ಹಗಲಿನಲ್ಲಿ ನಿಷ್ಠಾವಂತ ಪೊಲೀಸ್ ಆಫೀಸರ್ ಒಬ್ಬ, ದುಷ್ಟರಲ್ಲಿ ಸದೆಬಡೆಯಲು ಕರಿಚಿರತೆಯಾಗಿ ರಾತ್ರಿ ಸಮಯದಲ್ಲಿ ಹೊಂಚು ಹಾಕುವಕಥೆಯಿದು. ಹಗಲಿನಲ್ಲಿ ಕರಿಚಿರತೆ ಮತ್ತು ಹುಲಿ ಕಾದಾಡಿದರೆ, ಹುಲಿ ಈಸಿಯಾಗಿ ಕರಿಚಿರತೆಯನ್ನು ಸೋಲಿಸಿಬಿಡುತ್ತಂತೆ. ಆದರೆ, ರಾತ್ರಿ ವೇಳೆ ಕರಿಚಿರತೆಯೇ ಹುಲಿಯನ್ನು ಹಿಮ್ಮೆಟ್ಟಿಸುತ್ತಂತೆ. ಕಥೆ ಕೇಳಿದಾಗ ಮೊದಲು ಹೊಳೆದ ಟೈಟಲ್ ಇದು. ಮತ್ತೆ ಬದಲಿಸಬೇಕು ಅಂತ ಅನ್ನಿಸಲಿಲ್ಲ' ಎಂದು ಮಾಹಿತಿ ನೀಡುತ್ತಾರೆ. ಸಂಗೀತ ನಿರ್ದೇಶಕ ಅಜನೀಷ್ ಲೋಕನಾಥ್, "ಮೊದಲ ಬಾರಿ ಆ್ಯಕ್ಷನ್ ಎಂಟರ್ಟೇನರ್ ಚಿತ್ರದಲ್ಲಿ ಕೆಲಸ ಮಾಡಿರುವ ಖುಷಿ' ಹಂಚಿಕೊಂಡರು.
ಹಿಂದಿ ರಿಲೀಸ್ ಆಗುತ್ತಾ?
"ಬಘೀರ' ಘೋಷಣೆಯಾದಾಗ, ಸಿನಿಮಾ ಬಹುಭಾಷೆಗಳಲ್ಲಿ, ಪ್ಯಾನ್ ಇಂಡಿಯಾ ರಿಲೀಸ್ ಆಗಲಿದೆ ಎನ್ನಲಾಗಿತ್ತು. ಆದರೆ, ಇದೀಗ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಮಾತ್ರ ಅ. 31ರಂದು ರಿಲೀಸ್ ಮಾಡಲು ಚಿತ್ರತಂಡ ಪ್ಲಾ$್ಯನ್ ಮಾಡಿಕೊಂಡಿದೆ. ಈ ಬಗ್ಗೆ ಸ್ಪಷ್ಟನೆ ನೀಡಿದ ನಿರ್ದೇಶಕ ಡಾ. ಸೂರಿ, "ಬಾಲಿವುಡ್ನಲ್ಲಿ "ಭೂಲ್ ಬುಲಯ್ಯಾ 3', "ಸಿಂಂ ಅಗೇನ್' ಚಿತ್ರಗಳು ರಿಲೀಸ್ ಆಗುತ್ತಿವೆ. ದೊಡ್ಡಸ್ತಿಕೆ ತೋರಿಸಲು ಹೋಗಿ ಬಿಡುಗಡೆ ಮಾಡುತ್ತೇವೆ ಅಂದರೆ, ಹಿಂದಿ ಬೆಲ್ಟ್ನಲ್ಲಿ ಒಂದೂ ಥಿಯೇಟರ್ ಸಿಗುವುದಿಲ್ಲ. ಹೀಗಾಗಿ ಚಿತ್ರಕ್ಕೆ ಕನ್ನಡ, ತೆಲುಗಿನಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕರೆ, ಒಂದು ವಾರದ ಬಳಿಕ ಹಿಂದಿಯಲ್ಲೂ ರಿಲೀಸ್ ಮಾಡುವ ಪ್ಲಾನ್ ಇದೆ' ಎಂದು ಹೇಳಿಕೊಂಡರು.
ಎಮೋಷನಲ್ ಆ್ಯಕ್ಷನ್ ಥ್ರಿಲ್ಲರ್ ಚಿತ್ರವಿದು. ಆ್ಯಕ್ಷನ್ ಎಷ್ಟಿದೆಯೋ ಭಾವನಾತ್ಮಕ ಮತ್ತು ಡ್ರಾಮಾ ಅಂಶಗಳೂ ಸಾಕಷ್ಟಿದೆ. "ಲಕ್ಕಿ' ಬಳಿಕ ಈ ಸಿನಿಮಾ ನಿರ್ದೇಶಿಸುತ್ತಿದ್ದೇನೆ. ಕಳೆದ 10 ವರ್ಷಗಳಿಂದ ಪ್ರಶಾಂತ್ ನೀಲ್ ಅವರ ಜತೆ ಕೆಲಸ ಮಾಡಿ ಸಾಕಷ್ಟು ಕಲಿತೆ. ಅವರು ಒಂದು ರೀತಿಯ ಯೂನಿವರ್ಸಿಟಿ ಇದ್ದಂತೆ. ಕೆಲಸ ಮಾಡುವ, ಯೋಚಿಸುವ ರೀತಿಗಳೇ ಬದಲಾಗಿಬಿಡುತ್ತವೆ.
- ಡಾ. ಸೂರಿ, ನಿರ್ದೇಶಕ
ಪ್ರತಿ ವರ್ಷ ಎರಡು, ಮೂರು ಸಿನಿಮಾ ಮಾಡಬೇಕು ಅಂತ ನಾನೂ ಪ್ಲಾನ್ ಮಾಡುತ್ತೇನೆ. ಆದರೆ, ಸಾಧ್ಯವಾಗಲಿಲ್ಲ. ತುಂಬ ಗ್ಯಾಪ್ ಆಗುತ್ತಿದೆ. ಈ ಚಿತ್ರದ ವೇಳೆ ಸ್ವಲ್ಪ ಪೆಟ್ಟು ಬಿತ್ತು. ಇದುವರೆಗೂ ಸಣ್ಣ ಪ್ರಯತ್ನ ಅನ್ನುತ್ತಿದ್ದೆ. ಆದರೆ, "ಬಘೀರ' ಒಂದು ದೊಡ್ಡ ಪ್ರಯತ್ನ. ಇದು ಕನ್ನಡ ಚಿತ್ರರಂಗ ಹೆಮ್ಮೆಪಡುವ ಸಿನಿಮಾ.
- ಶ್ರೀಮುರಳಿ, ನಾಯಕ