

ಹೊಸ ವರ್ಷ ಎಂದಾಕ್ಷಣ ಅಲ್ಲೊಂದು ಸಂಭ್ರಮ ಸಹಜ. ಇರುಳುರುಳಿ ಹಗಲಾಗಿ ಹೊಸ ಹರುಷ ಅರಳುವ ಆ ಕ್ಷಣಗಳನ್ನು ಹಲವರು ಹಲವು ರೀತಿಯಲ್ಲಿ ಆಚರಿಸುತ್ತಾರೆ. ಅಂಥ ಕ್ಷಣಗಳನ್ನು ತಾರೆಯರು ಹೇಗೆ ಕಳೆಯುತ್ತಾರೆ ಎಂಬ ಕುತೂಹಲಕ್ಕೆ ಅವರೇ ಇಲ್ಲಿ ಉತ್ತರಿಸಿದ್ದಾರೆ. ಮಾತ್ರವಲ್ಲ ಅವರ ಪಾಲಿಗೆ 2019 ಹೇಗಿತ್ತು, 2020ರ ಬಗ್ಗೆ ಇರುವ ನಿರೀಕ್ಷೆಗಳೇನು ಎಂಬ ಕುರಿತಾದ ಮಾಹಿತಿಯನ್ನು ಕೂಡ ಅವರ ಮಾತುಗಳಲ್ಲೇ ವಿಜಯವಾಣಿ ಇಲ್ಲಿ ನಿಮ್ಮ ಮುಂದಿಟ್ಟಿದೆ.
ಹೊಸ ವರ್ಷ ಬಂದಿದೆ ಎಂದು ಅದ್ದೂರಿ ಸೆಲೆಬ್ರೇಷನ್ ಏನೂ ಮಾಡಲ್ಲ, ಮನೆಯಲ್ಲಿಯೇ ನಮ್ಮ ಆಚರಣೆ. ಕುಟುಂಬದ ಜತೆಗೆ ಹೊಸ ವರ್ಷವನ್ನು ಸೆಲೆಬ್ರೇಟ್ ಮಾಡುತ್ತೇನೆ. ಸಹಜವಾಗಿ ಸ್ನೇಹಿತರೆಲ್ಲ ಹೊರಗಡೆ ಹೋಗೋಣ ಅನ್ನುತ್ತಾರೆ. ಆದರೆ ನಾನು ಮಾತ್ರ ಎಲ್ಲೂ ಹೋಗುವುದಿಲ್ಲ. ನಮ್ಮ ಮನೆಯೇ ನನಗೆ ಬೆಸ್ಟ್. ಏನೇ ಮಾಡಿದರೂ ನಮ್ಮ ಮನೆಯಲ್ಲಿಯೇ.
ಇದೆಲ್ಲ ಬದಿಗಿಟ್ಟರೆ 2019 ಸದಾ ನೆನಪಿನಲ್ಲಿರುವಂಥ ವರ್ಷ. ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿ ಎರಡೆರಡು ಸಿನಿಮಾಗಳಲ್ಲಿ ಕಾಣಿಸಿಕೊಂಡೆ. 2019ರಲ್ಲಿ ಹೀಗಾಗುತ್ತೆ ಅಂತ ಅಂದುಕೊಂಡಿರಲಿಲ್ಲ. ಎರಡು ಸಿನಿಮಾ ಮೂಲಕ ಎಲ್ಲವೂ ಬದಲಾಯಿತು. 2020ಕ್ಕೆ ಮತ್ತಷ್ಟು ಬದಲಾವಣೆಗಳ ಮೂಲಕ ತೆರೆಮೇಲೆ ಕಾಣಿಸಿಕೊಳ್ಳುವ ಆಸೆ ಇದೆ. ಅದನ್ನೂ ಈಡೇರಿಸಿ ಕೊಳ್ಳಲಿದ್ದೇನೆ. ಚಾಲೆಂಜಿಂಗ್ ಅನಿಸುವ ಪಾತ್ರಗಳನ್ನು ಆಯ್ದುಕೊಳ್ಳಲಿದ್ದೇನೆ. ವರ್ಷಕ್ಕೆ ಒಂದೇ ಸಿನಿಮಾ ಆದರೂ ಪರವಾಗಿಲ್ಲ. ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಲಿದ್ದೇನೆ.
| ಶ್ರೀಲೀಲಾ