

ಕನ್ನಡದ ‘ಕಿಸ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಬಂದ ನಟಿ ಶ್ರೀಲೀಲಾ ಮಾತ್ರ ಹೆಚ್ಚು ಪ್ರಸಿದ್ಧಿಯಾಗಿದ್ದು ಟಾಲಿವುಡ್‌ನಲ್ಲಿ. ಏಳು ವರ್ಷಗಳ ಸಿನಿ ಜರ್ನಿಯಲ್ಲಿ ಶ್ರೀಲೀಲಾ ಕನ್ನಡದ ಮೂರೇ ಸಿನಿಮಾಗಳಲ್ಲಿ ನಟಿಸಿದ್ದು, ಹೆಚ್ಚು ಕಾಣಿಸಿಕೊಂಡಿದ್ದು ತೆಲುಗು ಚಿತ್ರರಂಗದಲ್ಲಿ. 2021ರಲ್ಲಿ ತೆರೆಕಂಡಿದ್ದ ‘ಪೆಳ್ಳಿ ಸಂದಡ’ ಮೂಲಕ ಟಾಲಿವುಡ್‌ಗೆ ಎಂಟ್ರಿಯಾಗಿ ಬಳಿಕ ಮಹೇಶ್‌ಬಾಬು, ರವಿತೇಜಾ, ರಾಮ್ ಪೋತಿನೇನಿ, ಬಾಲಯ್ಯ ಸೇರಿ ಅನೇಕರಿಗೆ ನಾಯಕಿಯಾಗಿ ನಟಿಸಿದ್ದಾರೆ. ಇನ್ನು, ಇತ್ತೀಚೆಗೆ ತೆರೆಕಂಡಿದ್ದ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ: ದ ರೂಲ್’ನಲ್ಲಿ ‘ಕಿಸಿಕ್’ ಎಂಬ ವಿಶೇಷ ಸಾಂಗ್‌ನ ನೃತ್ಯವು ಹೆಚ್ಚು ಖ್ಯಾತಿ ತಂದುಕೊಟ್ಟಿದೆ. ಹೀಗಾಗಿ ಹೆಚ್ಚು ಅವಕಾಶಗಳನ್ನು ಅವರು ಬಾಚಿಕೊಳ್ಳುತ್ತಿದ್ದಾರೆ. ಸದ್ಯ ತೆಲುಗಿನ ಮೂರು ಸಿನಿಮಾಗಳಲ್ಲಿ ನಟಿಸುತ್ತಿರುವ ನಡುವೆಯೇ ಶ್ರೀಲೀಲಾ ತೆಲುಗಿನ ಎರಡು ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ಅಲ್ಲದೇ, ತಮಿಳು ಚಿತ್ರರಂಗಕ್ಕೂ ಡೆಬ್ಯೂ ಆಗುತ್ತಿದ್ದಾರೆ. -ಏಜೆನ್ಸೀಸ್
ಅಕ್ಕಿನೇನಿ ಬ್ರದರ್ಸ್‌ಗೆ ನಾಯಕಿ: ಶ್ರೀಲೀಲಾ ತೆಲುಗಿನ ಎರಡು ಹೊಸ ಪ್ರಾಜೆಕ್ಟ್‌ಗಳಿಗೆ ಸಹಿ ಹಾಕಿದ್ದಾರೆ. ಕಾರ್ತಿಕ್ ದಂಡು ನಿರ್ದೇಶನದ ನಾಗಚೈತನ್ಯ ನಾಯಕನಾಗಿರುವ ಹೊಸ ಸಿನಿಮಾಕ್ಕೆ ಶ್ರೀಲೀಲಾ ನಾಯಕಿಯಾಗಿದ್ದಾರೆ. ಇನ್ನೊಂದು ಮುರಳಿ ಕಿಶೋರ್ ಅಬ್ಬೂರು ಆ್ಯಕ್ಷನ್-ಕಟ್ ಹೇಳುತ್ತಿರುವ ಅಖಿಲ್ ಅಕ್ಕಿನೇನಿ ಮುಖ್ಯಭೂಮಿಕೆಯಲ್ಲಿ ಚಿತ್ರಕ್ಕೆ ‘ಕಿಸ್’ ಬೆಡಗಿ ಜೋಡಿಯಾಗಿದ್ದಾರೆ. ಈ ಮೂಲಕ ಸಹೋದರರ ಇಬ್ಬರಿಗೂ ಕನ್ನಡದ ಮೂಲದ ನಟಿ ಜೋಡಿಯಾಗಿರುವುದು ವಿಶೇಷ.
ತಮಿಳಿಗೂ ಎಂಟ್ರಿ: ತೆಲುಗು ಚಿತ್ರರಂಗದಲ್ಲಿ ಬಿಜಿ ಇರುವ ಶ್ರೀಲೀಲಾ ಇದೀಗ ತಮಿಳಿನಲ್ಲಿ ಮೋಡಿ ಮಾಡಲು ಮುಂದಾಗಿದ್ದಾರೆ. ‘ಅಮರನ್’ ಯಶಸ್ಸಿನಲ್ಲಿರುವ ನಟ ಶಿವಕಾರ್ತಿಕೇಯನ್ ನಟನೆಯ 25ನೇ ಚಿತ್ರಕ್ಕೆ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಈ ಚಿತ್ರವನ್ನು ಡಾನ್ ಪಿಕ್ಚರ್ಸ್ ನಿರ್ಮಿಸುತ್ತಿದೆ.
ರಾಬಿನ್‌ಹುಡ್ ಈ ವಾರ ತೆರೆಗೆ: ಶ್ರೀಲೀಲಾ, ತೆಲುಗು ನಟ ನಿತಿನ್‌ಗೆ ಜೋಡಿಯಾಗಿರುವ ‘ರಾಬಿನ್‌ಹುಡ್’ ಸಿನಿಮಾ ಇದೇ ತಿಂಗಳ 20ರಂದು ಬಿಡುಗಡೆಯಾಗಲಿದೆ. ಅಲ್ಲದೇ, ರವಿ ತೇಜಾ ಅಭಿನಯದ ‘ಮಾಸ್ ಜಾತರ’, ಪವನ್ ಕಲ್ಯಾಣ್ ಮುಂದಿನ ಸಿನಿಮಾ ‘ಉಸ್ತಾದ್ ಭಗತ್ ಸಿಂಗ್’ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.