ಶ್ರೀದೇವಿ ಆಸೆಗೆ ವಿರುದ್ಧ ಮಿಸ್ಟರ್ ಇಂಡಿಯಾ 2: ಬಾಲಿವುಡ್​ನಲ್ಲಿ ಚರ್ಚೆಗೀಡಾಯ್ತು ಸೀಕ್ವೆಲ್ ವಿಚಾರ

Indian
Published on

ಬಾಲಿವುಡ್ ಬೆಡಗಿ ಶ್ರೀದೇವಿ ಎಲ್ಲರನ್ನೂ ಅಗಲಿ ಫೆ. 24ಕ್ಕೆ ಭರ್ತಿ ಎರಡು ವರ್ಷ. ಹೀಗಾಗಿ ಶ್ರೀದೇವಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ವಿಶೇಷವೆಂದರೆ ಅವರ ಅಭಿನಯದ ಯಶಸ್ವಿ ಸಿನಿಮಾ, 1987ರಲ್ಲಿ ತೆರೆ ಕಂಡಿದ್ದ ‘ಮಿಸ್ಟರ್ ಇಂಡಿಯಾ’ ಕೂಡ ಇದೇ ಸಂದರ್ಭದಲ್ಲಿ ಸದ್ದು ಮಾಡುತ್ತಿದೆ. ಒಟ್ಟಿನಲ್ಲಿ ‘ಮಿಸ್ಟರ್ ಇಂಡಿಯಾ’ ಹಾಗೂ ಶ್ರೀದೇವಿ ಹೆಸರು ಎರಡೂ ಒಟ್ಟೊಟ್ಟಿಗೇ ಕೇಳಿ ಬರುತ್ತಿದ್ದು, ಬಾಲಿವುಡ್​ನಲ್ಲಿ ಇದೀಗ ಚರ್ಚೆಗೆ ಈಡಾಗಿದೆ. ಅಂದಹಾಗೆ ಇಷ್ಟಕ್ಕೆಲ್ಲ ಕಾರಣ, ‘ಮಿಸ್ಟರ್ ಇಂಡಿಯಾ 2’. ಹಾಗಂತ ಅದ್ಯಾರು ಎಂದು ಅಚ್ಚರಿ ಪಡಬೇಕಾಗಿಲ್ಲ. ‘ಮಿಸ್ಟರ್ ಇಂಡಿಯಾ 2’ ಬೇರಾರೂ ಅಲ್ಲ, ‘ಮಿಸ್ಟರ್ ಇಂಡಿಯಾ’ ಸಿನಿಮಾದ ಸೀಕ್ವೆಲ್. ಹೌದು.. ‘ಮಿ. ಇಂಡಿಯಾ’ ಸಿನಿಮಾದ ಸೀಕ್ವೆಲ್ ಮಾಡುವುದಾಗಿ ನಿರ್ದೇಶಕ ಅಲಿ ಅಬ್ಬಾಸ್ ಜಫರ್ ಘೋಷಣೆ ಮಾಡಿಕೊಂಡಿರುವುದೇ ಸದ್ಯದ ಚರ್ಚೆಗೆ ಕಾರಣ. ಈ ಹಿನ್ನೆಲೆಯಲ್ಲಿ ಶ್ರೀದೇವಿ ಅವರ ಹಳೇ ಸಂದರ್ಶನದ ವಿಚಾರ ಕೂಡ ವೈರಲ್ ಆಗಿದ್ದು, ಅವರ ಇಚ್ಛೆಗೆ ವಿರುದ್ಧವಾಗಿ ಸೀಕ್ವೆಲ್ ನಿರ್ಮಾಣ ಆಗುತ್ತಿದೆ ಎಂಬ ಅಸಮಾಧಾನವೂ ವ್ಯಕ್ತವಾಗಿದೆ.

‘ಜೀ ಸ್ಟುಡಿಯೋಸ್ ಪಾಲುದಾರಿಕೆಯಲ್ಲಿ ‘ಮಿ. ಇಂಡಿಯಾ’ ಸೀಕ್ವೆಲ್ ಮಾಡಲಿದ್ದೇನೆ. ಸದ್ಯ ಚಿತ್ರಕಥೆ ರಚಿಸಲಾಗುತ್ತಿದೆ. ಪಾತ್ರವರ್ಗದ ಬಗ್ಗೆ ಇನ್ನಷ್ಟೇ ನಿಗದಿ ಆಗಬೇಕಿದೆ. ಸ್ಕ್ರಿಪ್ಟ್ ಮುಗಿಯುತ್ತಿದ್ದಂತೆ ತಾರಾಗಣ ಆಯ್ಕೆ ಮಾಡಲಾಗುವುದು’ ಎಂದು ಅಲಿ ಅಬ್ಬಾಸ್ ಜಫರ್ ಇತ್ತೀಚೆಗೆ ಹೇಳಿಕೊಂಡಿದ್ದರು. ಈ ಹೇಳಿಕೆ ಬಗ್ಗೆ ಇದೀಗ ಬಾಲಿವುಡ್​ನಲ್ಲಿ ಆಕ್ಷೇಪ ಕೇಳಿ ಬರುತ್ತಿದೆ. ಮಿ. ಇಂಡಿಯಾ ನಿರ್ದೇಶನ ಮಾಡಿದ್ದ ಶೇಖರ್ ಕಪೂರ್, ಅದರಲ್ಲಿ ನಾಯಕನಾಗಿದ್ದ ಅನಿಲ್ ಕಪೂರ್ ಅವರ ಪುತ್ರಿ ಸೋನಮ್ ಕಪೂರ್ ಕೂಡ ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

‘ಮಿ. ಇಂಡಿಯಾ ರಿಮೇಕ್ ಬಗ್ಗೆ ಬಹಳಷ್ಟು ಮಂದಿ ನನ್ನನ್ನು ಕೇಳುತ್ತಿದ್ದಾರೆ. ಆ ಬಗ್ಗೆ ನನ್ನ ತಂದೆಗೆ ಯಾವ ಮಾಹಿತಿಯೂ ಇಲ್ಲ. ಸೋಷಿಯಲ್ ಮೀಡಿಯಾ ಮೂಲಕ ನಮಗೆ ಆ ವಿಷಯ ತಿಳಿಯಿತು. ತಂದೆ ಅನಿಲ್ ಕಪೂರ್ ಅಥವಾ ನಿರ್ದೇಶಕ ಶೇಖರ್ ಕಪೂರ್ ಅವರನ್ನು ಈ ಸಂಬಂಧ ಯಾರೂ ಸಂರ್ಪಸಿಲ್ಲ. ಒಂದು ವೇಳೆ ಈ ಸುದ್ದಿ ನಿಜವಾಗಿದ್ದರೆ ಇದು ತೀರಾ ಅಗೌರವಯುತ ನಡೆ’ ಎಂದು ಸೋನಮ್ ಕಪೂರ್ ಹೇಳಿಕೊಂಡಿದ್ದಾರೆ. ಮತ್ತೊಂದೆಡೆ ಮಿ. ಇಂಡಿಯಾ ಬಗ್ಗೆ ಶ್ರೀದೇವಿ ಮಾತನಾಡಿದ್ದ ಹಳೇ ಸಂದರ್ಶನದಲ್ಲಿನ ಅಭಿಪ್ರಾಯ ಕೂಡ ಇದೇ ವೇಳೆ ವೈರಲ್ ಆಗಿದೆ. ‘ಮಿ. ಇಂಡಿಯಾ ಎಲ್ಲ ಅದಾಗೇ ಕೂಡಿ ಬಂದು ಉಂಟಾದ ಸಿನಿಮಾ. ಒಂದು ಸಂತೋಷದಿಂದ ಸೃಷ್ಟಿಯಾದ ಚಿತ್ರವದು. ಅದರ ರಿಮೇಕ್ ಅಥವಾ ಸೀಕ್ವೆಲ್ ಸಾಧ್ಯವೇ ಇಲ್ಲ..’ ಎಂಬುದಾಗಿ ಶ್ರೀದೇವಿ ಹೇಳಿದ್ದ ಅಭಿಪ್ರಾಯವೂ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ವ್ಯಾಪಕ ಪ್ರತಿಕ್ರಿಯೆ ಪಡೆದಿದೆ. ನಿರ್ದೇಶಕ

ಶೇಖರ್ ಕಪೂರ್ ಕೂಡ ಅದಕ್ಕೆ ಸಹಮತ ವ್ಯಕ್ತಪಡಿಸಿದ್ದು, ಶ್ರೀದೇವಿ ಅಭಿಪ್ರಾಯವನ್ನೇ ಉಲ್ಲೇಖಿಸಿ, ‘ಮಿ. ಇಂಡಿಯಾ ರಿಮೇಕ್ ಬಗ್ಗೆ ನನ್ನ ಅಂತಿಮ ಮಾತು ಕೂಡ ಇದೇ’ ಎಂಬುದಾಗಿ ಹೇಳಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net