ಶ್ರೀಮುರಳಿ ನಟನೆಯ ಬಘೀರ ಸಿನಿಮಾ ಬಗ್ಗೆ ನಿಮಗೆ ಗೊತ್ತಿರದ ಶಾಕಿಂಗ್ ಸಂಗತಿಗಳು ಇಲ್ಲಿವೆ... Sri Murali

Sri Murali
Published on

Sri Murali: ಮದಗಜ ಚಿತ್ರ ತೆರೆಗೆ ಬಂದ ಮೂರು ವರ್ಷಗಳ ಬಳಿಕ ಶ್ರೀಮುರಳಿ ನಟಿಸಿರುವ ಹೊಸ ಸಿನಿಮಾ 'ಬಘೀರ’ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಈ ಸಿನಿಮಾಗೆ ಡಾ. ಸೂರಿ ಆ್ಯಕ್ಷನ್​-ಕಟ್​ ಹೇಳಿದ್ದು, ಶ್ರೀಮುರಳಿ ಸೂಪರ್​ಹೀರೋ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೆ ಟ್ರೇಲರ್​ ರಿಲೀಸ್ ಆಗಿದ್ದು, ಎಲ್ಲೆಡೆ ಸಖತ್​ ಸೌಂಡ್​ ಮಾಡುತ್ತಿದೆ.

ಈ ಚಿತ್ರದ ವಿಶೇಷತೆ ಏನೆಂದರೆ, ಕೆಜಿಎಫ್​ ಖ್ಯಾತಿಯ ಪ್ರಶಾಂತ್ ನೀಲ್ ಕಥೆ ಬರೆದುಕೊಟ್ಟಿದ್ದಾರೆ. ಟ್ರೈಲರ್​ ಬಿಡುಗಡೆಯಾದ ಬಳಿಕ ಸಿನಿಮಾ ಕುರಿತಾದ ಹಲವು ಕುತೂಹಲಕಾರಿ ಸಂಗತಿಗಳು ಹೊರಬಿದ್ದಿವೆ. ನಿರ್ದೇಶಕರು 127 ದಿನಗಳಲ್ಲಿ ಈ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಈ ಸಿನಿಮಾದ ಆಕ್ಷನ್ ಎಪಿಸೋಡ್​ಗಳಿಗಾಗಿ ನಿರ್ಮಾಪಕರು 5 ಅದ್ಧೂರಿ ಸೆಟ್​ಗಳನ್ನು ನಿರ್ಮಾಣ ಮಾಡಿದ್ದರು. ಪ್ರತಿ ಸೆಟ್ ನಿರ್ಮಿಸಲು 60 ದಿನಗಳನ್ನು ತೆಗೆದುಕೊಂಡಿತು. ಕೇವಲ ಫೈಟ್ ಸೀಕ್ವೆನ್ಸ್‌ಗಾಗಿಯೇ 55 ದಿನಗಳನ್ನು ನಿಗದಿಪಡಿಸಿ, ಶೂಟಿಂಗ್​ ಮಾಡಲಾಗಿದೆ.

ಇನ್ನು ಚಿತ್ರದ ನಾಯಕ ಶ್ರೀಮುರಳಿ ಈ ಸಿನಿಮಾಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಬರೋಬ್ಬರಿ 3 ವರ್ಷಗಳ ಕಾಲ ತೀವ್ರ ಜಿಮ್ ತರಬೇತಿ ಪಡೆದಿದ್ದಾರೆ. ಚಿತ್ರದ ಶೂಟಿಂಗ್ ವೇಳೆ ಶ್ರೀಮುರಳಿಗೆ ಗಾಯವಾಗಿದ್ದು, 4 ತಿಂಗಳ ಕಾಲ ಶೂಟಿಂಗ್ ನಿಲ್ಲಿಸಲಾಗಿತ್ತು. ಶೇ.90ರಷ್ಟು ಸಾಹಸ ದೃಶ್ಯಗಳನ್ನು ಯಾವುದೇ ಡ್ಯೂಪ್ ಇಲ್ಲದೆ ಶ್ರೀ ಮುರುಳಿ ನಟಿಸಿದ್ದಾರೆ. ಚಿತ್ರದ ಒಂದು ಪ್ರಮುಖ ಚೇಸ್ ದೃಶ್ಯದಲ್ಲಿ ಶ್ರೀಮುರಳಿ ಅವರು ಬಸ್ಸಿನಿಂದ ಬಿದ್ದು ಸ್ವಲ್ಪದರಲ್ಲೇ ಗಾಯದಿಂದ ಪಾರಾಗಿದ್ದಾರೆ.

127 ದಿನಗಳ ಶೂಟಿಂಗ್‌ನಲ್ಲಿ 60 ದಿನಗಳ ಚಿತ್ರೀಕರಣ ರಾತ್ರಿಯಲ್ಲಿ ಮಾತ್ರ ನಡೆದಿದೆ. ಸುಮಾರು 15 ರಿಂದ 16 ಬಾರಿ ದಿನದ 24 ಗಂಟೆಯೂ ಶೂಟಿಂಗ್​ ಮಾಡಿದ್ದಾರೆ. ಪ್ರಶಾಂತ್ ನೀಲ್ ಬರೆದ ಕತೆಗೆ ಚಿತ್ರಕಥೆ ಬರೆದು ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿಯಲು 2 ವರ್ಷಗಳನ್ನು ತೆಗೆದುಕೊಂಡಿತು. ಚಿತ್ರದ ಬಹುತೇಕ ಚಿತ್ರೀಕರಣ ವೈಜಾಗ್, ಗೋವಾ, ಹೈದರಾಬಾದ್, ಮಂಗಳೂರು, ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆದಿದೆ. ದೀಪಾವಳಿ ಉಡುಗೊರೆಯಾಗಿ ಅಕ್ಟೋಬರ್ 31 ರಂದು ಬಘೀರ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಸಣ್ಣ ವಯಸ್ಸಿನಲ್ಲಿ ಬ್ಯಾಟ್​ಮ್ಯಾನ್​, ಐರನ್​ ಮ್ಯಾನ್​, ಸ್ಪೈಡರ್​ಮ್ಯಾನ್​, ಸೂಪರ್​ಮ್ಯಾನ್​ನಂತಹ ಸೂಪರ್​ಹೀರೋಗಳನ್ನು ನೋಡಿ ನಾನೂ ಸೂಪರ್​ಹೀರೋ ಆಗಬೇಕು ಅಂತ ಆಸೆಪಡುತ್ತಿದ್ದೆ. “ಬಘೀರ’ ಕಥೆ ಕೇಳಿದ ತಕ್ಷಣ ತುಂಬ ಖುಷಿಯಾಯಿತು. ಮೊದಲ ಬಾರಿ ಕಾಸ್ಟ್ಯೂಮ್​ ಧರಿಸಿದಾಗ, ನನಗೆ ಇಷ್ಟದ ತಿಂಡಿ, ತಿನಿಸುಗಳನ್ನು ತೊರೆದು, ವರ್ಕೌಟ್​ ಮಾಡಲೇಬೇಕು ಅಂತ ಸಿದ್ಧತೆ ಮಾಡತೊಡಗಿದೆ ಎಂದು ಚಿತ್ರದ ಮೇಲಿನ ತಮ್ಮ ಪ್ರೀತಿಯನ್ನು ನಾಯಕ ಶ್ರೀಮುರಳಿ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net