ಕ್ಯಾಮೆರಾ, ಕನಸು … 'ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ' ಟ್ರೈಲರ್ ಬಿಡುಗಡೆ

Sri Balaji Photo Studio
Published on

ಬೆಂಗಳೂರು: ಕಿರುತೆರೆ ನಟ 'ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ' ಎಂಬ ಚಿತ್ರದಲ್ಲಿ ಹೀರೋ ಆಗಿದ್ದು, ಆ ಚಿತ್ರವನ್ನು ನಿರ್ದೇಶಿಸಿದ್ದು ಗೊತ್ತಿರಬಹುದು. ಈಗ ಆ ಚಿತ್ರ ಜ.6ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಮೊದಲ ಹಂತವಾಗಿ, ಚಿತ್ರದ ಟ್ರೈಲರ್​ ಇತ್ತೀಚೆಗೆ ಬಿಡುಗಡೆಯಾಗಿದೆ. 'ಗಂಧದಗುಡಿ' ನಿರ್ದೇಶಕ ಅಮೋಘ ವರ್ಷ ಟ್ರೈಲರ್​ ಬಿಡುಗಡೆ ಮಾಡಿದ್ದಾರೆ.

ಒಂದು ಪುಟ್ಟ ಊರಿನಲ್ಲಿರುವ ಒಬ್ಬ ಫೋಟೋಗ್ರಾಫರ್​ನ ಕನಸಿನ ಕುರಿತಾದ ಚಿತ್ರ 'ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ'. ಆ ಊರಿನಲ್ಲೊಂದು ಸ್ಟುಡಿಯೋ ಇಟ್ಟುಕೊಂಡಿರುವ ಆತನ ಜೀವನದಲ್ಲಿ ನಡೆಯುವ ಹಲವು ಘಟನೆಗಳ ಕುರಿತು ಈ ಚಿತ್ರ ಬೆಳಕು ಚೆಲ್ಲುತ್ತದೆ. ಒಬ್ಬ ಫೋಟೋಗ್ರಾಫರ್​ನ ಭಾವನೆ, ತೊಳಲಾಟ, ಪೇಚಾಟ, ಬದುಕು ಎಲ್ಲವೂ ಇಲ್ಲಿ ಅನಾವರಣಗೊಂಡಿದೆ ಅನಿಸುತ್ತದೆ.

ಈ ಚಿತ್ರವನ್ನು ವೆಂಕಟೇಶ್ವರ ರಾವ್ ಬಳ್ಳಾರಿ ನಿರ್ಮಿಸಿದ್ದಾರೆ. ಸೃಜನ ಪ್ರೊಡಕ್ಷನ್ಸ್​ನಡಿ ಅವರು ನಿರ್ಮಿಸಿರುವ ಮೊದಲ ಚಿತ್ರ ಇದು. 'ಈಗಂತೂ ಜನರು ಹೊಸ ಬಗೆಯ ಕಥೆ ಆಯ್ಕೆ ಮಾಡುತ್ತಾರೆ. ಅಂತಹವರಿಗೆ 'ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ' ಸಿನಿಮಾ ರುಚಿಸಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ. .

ಚಿತ್ರದ ಕುರಿತು ಮಾತನಾಡುವ ರಾಜೇಶ್​ ಧ್ರುವ, '23 ದಿನಗಳ ಕಾಲ ಮಳೆಯಲ್ಲೇ ಚಿತ್ರೀಕರಣ ಮಾಡಿದ್ದೇವೆ. ನನ್ನ ಊರಿನಲ್ಲಿ ಅನುಭವಕ್ಕೆ ಬಂದ ಹಲವು ಘಟನೆಗಳನ್ನು ಮತ್ತು ಭಾಷೆಯನ್ನು ಈ ಸಿನೆಮಾದಲ್ಲಿ ಬಳಸಿಕೊಂಡಿದ್ದೇವೆ. ಎಲ್ಲ ಕಲಾವಿದರಿಗೆ 30 ದಿನಗಳ ಕಾಲ ಅಲ್ಲಿಯ ಭಾಷೆಯ ಕಾರ್ಯಾಗಾರ ಮಾಡಿಸಿ, ಪಾತ್ರಕ್ಕೆ ತಕ್ಕಂತೆ ತಯಾರು ಮಾಡಿಸಿ ಚಿತ್ರೀಕರಣ ಮಾಡಿದ್ದೇವೆ' ಎನ್ನುತ್ತಾರೆ.

'ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ' ಚಿತ್ರಕ್ಕೆ ಶಿರಸಿ, ಯಲ್ಲಾಪುರ, ಹೊನ್ನಾವರ ಸುತ್ತ ಮುತ್ತ ಚಿತ್ರೀಕರಣ ನಡೆದಿದ್ದು, ರಾಜೇಶ್ ಧ್ರುವ, ರವಿ ಸಾಲಿಯಾನ್, ರಾಧಿಕಾ ಅಚ್ಯುತ್ ರಾವ್, ಸಂಪತ್ ಜೆ ರಾಮ್, ಶುಭಲಕ್ಷ್ಮಿ, ನಕುಲ್ ಶರ್ಮ, ರಕ್ಷಿತ್, ರವಿ ಮೂರೂರು, ಶಿಶಿರ್ ಮುಂತಾದವರು ನಟಿಸಿದ್ದಾರೆ. ಚಿತ್ರದಲ್ಲಿ 2 ಹಾಡುಗಳಿಗೆ ಶ್ರೀರಾಮ್ ಗಂಧರ್ವ ಸಂಗೀತ ಸಂಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net