ಪಾತ್ರಗಳಲ್ಲಿ ವಿಭಿನ್ನತೆ ಬಯಸುವ ಆಕ್ಸಿಡೆಂಟಲ್ ಆರ್ಟಿಸ್ಟ್; ಮಾಡಿದ್ದನ್ನೇ ಮಾಡದ ಅನಂತ್​!

ANANT
Published on

ಇನ್ನು ಮೂರೇ ಮೂರು ವರ್ಷ ಕಳೆದರೆ ಚಿತ್ರೋದ್ಯಮದಲ್ಲಿ ಬರೋಬ್ಬರಿ ಐದು ದಶಕಗಳನ್ನು ಪೂರೈಸಲಿದ್ದಾರೆ ಹಿರಿಯ ನಟ ಅನಂತ್​ನಾಗ್. ಆ ಸಾಧನೆಯನ್ನೇ ಗಮನದಲ್ಲಿಟ್ಟುಕೊಂಡು ಈ ಬಾರಿಯ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ‘ರೆಟ್ರೊಸ್ಪೆಕ್ಟಿವ್’ ಗೌರವ ನೀಡಿ, ಅವರ ಆರು ಕ್ಲಾಸಿಕ್ ಸಿನಿಮಾಗಳನ್ನು ಬಿಗ್​ಸ್ಕ್ರೀನ್ ಮೇಲೆ ಮತ್ತೊಮ್ಮೆ ಪ್ರದರ್ಶನ ಮಾಡಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಅನಂತ್ ಅವರ ಇದುವರೆಗಿನ ಸಿನಿಪಯಣ, ಚಿತ್ರರಂಗದ ಬೆಳವಣಿಗೆ ಹಾಗೂ ತಾವು ಕಂಡ ಸಿನಿಮಾ ಮೇಕರ್​ಗಳ ಬಗ್ಗೆ ವಿಜಯವಾಣಿ ಜತೆ ಮಾತನಾಡಿದ್ದಾರೆ. ಅದರಲ್ಲೂ ಸ್ಯಾಂಡಲ್​ವುಡ್ ಕುರಿತು ತಾವು ಗಮನಿಸಿದ್ದನ್ನು ಅದರಲ್ಲಿನ ಗಹನವಾದ ವಿಚಾರಗಳನ್ನು ಅವರಿಲ್ಲಿ ನಗುನಗುತ್ತಲೇ ಹಂಚಿಕೊಂಡಿದ್ದಾರೆ.

‘ನಾನು ಮಠ-ಆಶ್ರಮದಲ್ಲಿ ಬೆಳೆದವನು, ನನಗೆ ಧರ್ಮ-ಕರ್ಮದಲ್ಲಿ ಅಪಾರ ನಂಬಿಕೆ ಇದೆ. ನಮ್ಮ ಹಣೆಬರಹದಲ್ಲಿ ಬರೆದಿದ್ದು ಆಗೇ ಆಗುತ್ತದೆ. ಸುಮ್ಮನೆ ಆಸೆ ಪಡೆಯುವುದರಲ್ಲೇ ನಾವು ಹೆಚ್ಚು ಕಾಲ ಕಳೆಯುತ್ತೇವೆ. ನಾನು ನಟನಾಗುತ್ತೇನೆ ಎಂದು ಹೊರಟವನೇ ಅಲ್ಲ, ಆಕ್ಸಿಡೆಂಟಲಿ ನಟನಾದವನು.. ಹ್ಹ ಹ್ಹ..’- ಹೀಗೆ ಟಿಪಿಕಲ್ ತಮ್ಮದೇ ಧಾಟಿಯಲ್ಲಿ ತಮ್ಮ ಹಣೆಬರಹದ ಬಗ್ಗೆ ತಾವೇ ಹೇಳಿಕೊಂಡರು ಹಿರಿಯ ನಟ ಅನಂತ್​ನಾಗ್.

ಅಷ್ಟಕ್ಕೂ ಈ ರೀತಿ ಮಾತು ಅವರ ಬಾಯಿಂದ ಬರಲು ಕಾರಣ, ಈವರೆಗೂ ನಿಭಾಯಿಸಿದ ಪಾತ್ರಗಳು. ಹೌದು, 1973ರಲ್ಲಿ ಸಿನಿಮಾರಂಗ ಪ್ರವೇಶಿಸಿದ್ದ ಅನಂತ್​ನಾಗ್, ಅಲ್ಲಿಂದ ಇಲ್ಲಿಯವರೆಗೂ ಇಂಥದ್ದೇ ಪಾತ್ರ ಮಾಡಬೇಕು, ಹೀಗೇ ಕಾಣಿಸಿಕೊಳ್ಳಬೇಕು ಎಂದು ಅಂದುಕೊಂಡವರೇ ಅಲ್ಲ. ಆದರೂ ಅವರ ಸಿನಿಮಾ ಬತ್ತಳಿಕೆಯಲ್ಲಿ ಬಗೆಬಗೆಯ ಪಾತ್ರಗಳುಳ್ಳ ಚಿತ್ರಗಳು ಸ್ಥಾನ ಪಡೆದಿವೆ. ಹಾಗಾಗಿ ಪಾತ್ರಗಳ ಆಯ್ಕೆ ಬಗ್ಗೆ ವಿಚಾರಿಸುವುದನ್ನೇ ಕೈಬಿಟ್ಟಿದ್ದಾರಂತೆ ಅನಂತ್. ‘ನಾನು ಮಾಡಿದ್ದನ್ನೇ ಮಾಡಲು ಬಯಸುವುದಿಲ್ಲ. ಪಾತ್ರಗಳಲ್ಲಿ ವಿಭಿನ್ನತೆ ಇರಲಿ ಎಂಬುದನ್ನಷ್ಟೇ ನಾನು ವಿಚಾರಿಸುತ್ತೇನೆ. ಆ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲೂ ಹೋಗುವುದಿಲ್ಲ.

ಖುಷಿಯ ವಿಚಾರ ಏನೆಂದರೆ, ಇತ್ತೀಚಿನ ದಿನಗಳಲ್ಲಿ ರಿಷಬ್ ಶೆಟ್ಟಿ, ಹೇಮಂತ್ ರಾವ್ ಸೇರಿ ಹಲವು ನಿರ್ದೇಶಕರು ನನಗಾಗಿ ಸೃಷ್ಟಿಸಿದ ಪಾತ್ರ ನಿಜಕ್ಕೂ ಅಚ್ಚರಿ ಮೂಡಿಸುತ್ತವೆ. ಹೇಮಂತ್ ನಿರ್ದೇಶನದ ‘ಗೋದಿ ಬಣ್ಣ ಸಾಧಾರಣ ಮೈಕಟ್ಟು’ ಪಾತ್ರಕ್ಕೂ ಅವರದೇ ‘ಕವಲುದಾರಿ’ ಚಿತ್ರದಲ್ಲಿಯ ಪಾತ್ರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ರಿಷಬ್ ಶೆಟ್ಟಿ ‘ಸ.ಹಿ.ಪ್ರಾ. ಶಾಲೆ ಕಾಸರಗೋಡು’ ಮತ್ತು ಈಗ ಅವರ ನಿರ್ದೇಶನದ ‘ರುದ್ರಪ್ರಯಾಗ’ದ ಪಾತ್ರ ವಿಭಿನ್ನವಾಗಿದೆ. ಹಾಗಾಗಿ ಬೇರೆ ಥರದ ಪಾತ್ರಗಳ ಬಗ್ಗೆ ಯೋಚಿಸುವುದೇ ಇಲ್ಲ. ಅಲ್ಲಿಗೆ ವೈವಿಧ್ಯತೆಯೂ ಸಿಕ್ಕುಬಿಡುತ್ತದೆ. ಬೇರೆಯದನ್ನು ಬಯಸುವುದೇ ಇಲ್ಲ’ ಎಂದು ಸುದೀರ್ಘವಾಗಿ ಉತ್ತರಿಸುತ್ತಾರೆ.

‘ಹೇ.. ಇದನ್ನು ಅನಂತ್ ಮಾಡಬಲ್ಲ’ ಎಂದವರೇ ಹೆಚ್ಚು!

‘ಹೇ.. ಅನಂತ್ ಈ ಪಾತ್ರವನ್ನು ಮಾಡಬಲ್ಲ..’- ಹೀಗೆ ಅದೆಷ್ಟೋ ಬರಹಗಾರರು, ನಿರ್ದೇಶಕರಿಂದ ಮುಕ್ತವಾಗಿ ಕರೆಸಿಕೊಂಡವರು ನಟ ಅನಂತ್. ಅಂದಿನ ಆ ಪ್ರಕ್ರಿಯೆ ಈಗಲೂ ಮುಂದುವರಿಯುತ್ತಿದೆ. ಅದನ್ನು ಅದೃಷ್ಟ ಎಂದೇ ಭಾವಿಸಿದ್ದಾರೆ ಅನಂತ್​ನಾಗ್.

‘ಯಾರಿಗೆ ತಾನೇ ಅಂಥ ಅವಕಾಶ ಸಿಗುತ್ತದೆ ಹೇಳಿ? ‘ನಿಮಗಾಗಿಯೇ ಈ ಕಥೆ ಬರೆದಿದ್ದೇನೆ.. ಈ ಪಾತ್ರ ನೀವೇ ಮಾಡಬೇಕು’ ಎಂದು ಸ್ವತಃ ಚಿ. ಉದಯಶಂಕರ್, ದೊರೈ-ಭಗವಾನ್ ಹೇಳುತ್ತಿದ್ದರು. ಪರಭಾಷೆಯ ನಿರ್ದೇಶಕರಿಗೂ ನಾನು ಪ್ರಿಯನಾಗಿದ್ದೆ, ಅದು ನನ್ನ ಭಾಗ್ಯ. ಒಬ್ಬ ಕಲಾವಿದ ನೀರಿನಂತಿರಬೇಕು. ಯಾವ ಪಾತ್ರೆಗೆ ಹಾಕಿದರೂ, ಅದರ ಆಕಾರಕ್ಕೆ ಬದಲಾಗಬೇಕು. ಆಗ ಮಾತ್ರ ಒಳಗಿನ ನಟ ಸದಾ ಜೀವಂತವಾಗಿರಲು ಸಾಧ್ಯ’ ಎನ್ನುವ ಅನಂತ್​ನಾಗ್, ‘ಯಾವ ಇಮೇಜ್​ಗೂ ನಾನು ಸ್ಟಿಕ್ ಆಗಿಲ್ಲ’ ಎಂಬ ಮಾತನ್ನೂ ಹೇಳುತ್ತಾರೆ.

ಅನಂತ್ ಅವರ ಸಿನಿಮಾಗಳನ್ನು ಗಮನಿಸಿದರೆ ಅವರು ಒಂದೇ ಶೈಲಿಯ ಸಿನಿಮಾಗಳಿಂದ ಗುರುತಿಸಿಕೊಂಡಿಲ್ಲ. ಬಗೆಬಗೆಯ ಪಾತ್ರಗಳಲ್ಲಿ ಜೀವಿಸಿದ್ದಾರೆ. ವಿಭಿನ್ನ ಪೋಷಾಕು ತೊಟ್ಟಿದ್ದಾರೆ. ಕೇವಲ ಕನ್ನಡದಲ್ಲಷ್ಟೇ ಅಲ್ಲ ಪರಭಾಷೆಗಳಲ್ಲೂ ಅನಂತನ ಲೀಲೆ ಅಪಾರ. ‘70ರ ದಶಕದಲ್ಲಿ ಕಲಾತ್ಮಕ ಸಿನಿಮಾ ಕಾಲಘಟ್ಟದಲ್ಲಿ ನಾನು ಬಂದವನು. ಒಂದೊಂದು ದಶಕದಲ್ಲಿ ಒಂದೊಂದು ರೀತಿ ಕಾಣಿಸಿದ್ದೇನೆ. ಆರಂಭದಲ್ಲಿ ಕಾದಂಬರಿ ಆಧಾರಿತ ‘ಹಂಸಗೀತೆ’, ‘ಬಯಲುದಾರಿ’ ಸೇರಿ ಹಲವು ಸಿನಿಮಾಗಳಲ್ಲಿಯೇ ಹೆಚ್ಚುಹೆಚ್ಚು ಕಾಣಿಸಿಕೊಂಡೆ. ತರಾಸು ಕೃತಿಗಳನ್ನು ದೊರೈ-ಭಗವಾನ್, ಜಿ.ವಿ. ಅಯ್ಯರ್ ತರುತ್ತಿದ್ದರು.

ಕನ್ನಡದ ಸಿನಿಮಾಗಳ ಜತೆಗೆ ಹಿಂದಿ ನಿರ್ದೇಶಕ ಶ್ಯಾಮ್ ಬೆನಗಲ್ ಅವರ ‘ಅಂಕುರ್’, ‘ನಿಶಾಂತ್’, ‘ಮಂಥನ್’, ಹಿಂದಿ ಚಿತ್ರ ಮಾಡಿದೆ. ಬಳಿಕ ಅದರ ಘಮಲು ಪಕ್ಕದ ತೆಲುಗು, ಮಲಯಾಳಂ, ಮರಾಠಿ ಚಿತ್ರರಂಗಕ್ಕೂ ಹಬ್ಬಿತ್ತು. ಅಲ್ಲಿಯೂ ಸಿನಿಮಾ ಮಾಡಿದೆ. ನಿಧಾನಕ್ಕೆ ಕಾಮಿಡಿ ಮಾಡಿದೆ. ಆಮೇಲೆ ಪೋಷಕ ಪಾತ್ರಗಳಲ್ಲೇ ಕಾಣಿಸಿಕೊಳ್ಳಲು ಶುರುಮಾಡಿದೆ. ಒಟ್ಟಿನಲ್ಲಿ ನನ್ನ ಜರ್ನಿಯೇ ಒಂದು ರೀತಿ ಮಜವಾಗಿದೆ’ ಎಂದು ನಕ್ಕರು ಅನಂತ್​ನಾಗ್.

ತಂತ್ರಜ್ಞಾನದಿಂದ ಬದಲಾಗಿದೆ ಮನರಂಜನೆಯ ಕಲ್ಪನೆ

‘ತಂತ್ರಜ್ಞಾನದಿಂದಾಗಿ ಪಾಶ್ಚಾತ್ಯರ ಸಿನಿಮಾ ನೋಡುವ ಶೈಲಿಯೇ ಬದಲಾಗಿದೆ. ಮನರಂಜನೆಯ ಕಲ್ಪನೆಯೇ ಉಲ್ಟಾ ಆಗಿದೆ. ಅವರ ಸಿನಿಮಾದಲ್ಲಿರುವುದು ಎಲ್ಲವೂ ಕಲ್ಪಿತ ಮತ್ತು ಕಾಲ್ಪನಿಕ. ನಿನ್ನ ನಂಬಿಕೆಯನ್ನು ಕಳೆದುಕೊಂಡು ನೀನು ಸಿನಿಮಾ ನೋಡಬೇಕು. ಏಕೆಂದರೆ, ನೋಡಿರದ ಪ್ರಾಣಿ, ಮನುಷ್ಯ ಎಲ್ಲವೂ ಅಲ್ಲಿ ಕಾಣಿಸುತ್ತದೆ. ಗ್ರಾಫಿಕ್ಸ್, ಎನಿಮೇಷನ್ ಒಳ್ಳೆಯದೇ, ಅವು ಮಕ್ಕಳಿಗೆ ಹೆಚ್ಚು ಸೂಕ್ತ. ಆದರೆ, ಅವರಿಂದ ಇಲ್ಲಿಯವರೆಗೂ ಮತ್ತೊಬ್ಬ ಚಾರ್ಲಿ ಚಾಪ್ಲಿನ್​ನನ್ನು ಸೃಷ್ಟಿ ಮಾಡಲು ಆಗಿಲ್ಲ. ಹಾಗಾಗಿ ಸಾಧ್ಯವಾದಷ್ಟು ನೈಜತೆಗೆ ಬೆಲೆ ಕಟ್ಟಿ, ನಾಟಕಗಳನ್ನು ಸೃಷ್ಟಿಸಿ, ಆಗ ಕಂಟೆಂಟ್​ಗಳು ತಂತಾನೇ ಜೀವ ತಾಳುತ್ತವೆ’ ಎಂದು ಈಗಿನ ತಾಂತ್ರಿಕತೆಯ ಏರಿಳಿತವನ್ನು ವಿವರಿಸುತ್ತಾರೆ.

ರೆಟ್ರೊಸ್ಪೆಕ್ಟಿವ್ ಗೌರವ ನಿಜಕ್ಕೂ ಖುಷಿ ತಂದಿದೆ

12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಶುರುವಾಗಿದೆ. ಈ ಸಿನಿಮೋತ್ಸವದಲ್ಲಿ ಅನಂತ್​ನಾಗ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿಯೇ ‘ರೆಟ್ರೊಸ್ಪೆಕ್ಟಿವ್’ ಎಂಬ ವಿಭಾಗ ಮಾಡಿ, ಅವರ ಅಭಿನಯದ ಆಯ್ದ ಆರು ಸಿನಿಮಾಗಳನ್ನು ಪ್ರದರ್ಶನ ಮಾಡಲಾಗುತ್ತಿದೆ. ಆ ಪೈಕಿ ಅಮೋಲ್ ಪಾಲೇಕರ್ ನಿರ್ದೇಶನದಲ್ಲಿ ತಯಾರಾದ ‘ಅನಾಹತ್’, ಮಲಯಾಳಂನಲ್ಲಿ ಬಂದ ‘ಸ್ವಾತಿ ತಿರ್ನಾಳ್’, ಫಣಿ ರಾಮಚಂದ್ರ ನಿರ್ದೇಶನದ ‘ಗಣೇಶನ ಮದುವೆ’, ಶಂಕರ್​ನಾಗ್ ಜತೆಗಿನ ‘ಮಿಂಚಿನ ಓಟ’, ಶ್ಯಾಮ್ ಬೆನಗಲ್ ಅವರ ‘ಕಲಿಯುಗ್’, ಸುನೀಲ್​ಕುಮಾರ್ ದೇಸಾಯಿ ಆಕ್ಷನ್-ಕಟ್ ಹೇಳಿದ್ದ ‘ಬೆಳದಿಂಗಳ ಬಾಲೆ’ ಸಿನಿಮಾಗಳು ಈ ಬಾರಿಯ ಸಿನಿಮೋತ್ಸವದಲ್ಲಿ ಪ್ರದರ್ಶನ ಕಾಣುತ್ತಿವೆ.

ಈ ಗೌರವ ಸಿಕ್ಕಿರುವುದಕ್ಕೆ ತುಂಬ ಋಣಿ ಎನ್ನುತ್ತಾರೆ ಅನಂತ್. ‘ಕನ್ನಡದ ಬಳಿಕ, ಹಿಂದಿ, ನಂತರ ಮರಾಠಿ, ತೆಲುಗು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಮಾಡಿದೆ. ಆ ಚಿತ್ರ ಮಾಡುವಾಗ ಏನೂ ಅನಿಸಿರಲಿಲ್ಲ. ಆದರೆ ಇಂದು, ಆ ದಿನಗಳನ್ನು ಅವಲೋಕಿಸಿದಾಗ ಖುಷಿ ಆಗುತ್ತದೆ. ರೆಟ್ರೊಸ್ಪೆಕ್ಟಿವ್ ಎಂಬ ಗೌರವ ನೀಡಿ ನನ್ನ ಆರು ಸಿನಿಮಾಗಳನ್ನು ಪ್ರದರ್ಶನ ಮಾಡುತ್ತಿರುವುದು ಸಂತಸ ತಂದಿದೆ. ಇತ್ತೀಚೆಗಷ್ಟೇ ತುಂಬ ವರ್ಷಗಳ ಬಳಿಕ ರಂಗಾಯಣಕ್ಕೆ ಆಹ್ವಾನಿಸಿದ್ದರು. ತೆಲುಗಿನಲ್ಲಿ ನಾನು ನಟಿಸಿದ ‘ಭೀಷ್ಮ’ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಜತೆಗೆ ಈಗ ರೆಟ್ರೊಸ್ಪೆಕ್ಟಿವ್ ಗೌರವವೂ ಸಿಕ್ಕಿದೆ. ಈ ವರ್ಷದ ಫೆಬ್ರವರಿ ನನ್ನ ಪಾಲಿಗೆ ನೆನಪಿನಲ್ಲಿಡುವಂಥದ್ದು’ ಎಂದರು.

ಅಮಿತಾಭ್​ಗೆ ಹೋಲಿಸಬೇಡಿ!

ಭಾರತ ಸಿನಿಮಾರಂಗ ಕಂಡ ಶ್ರೇಷ್ಠ ನಟರ ಸಾಲಿನಲ್ಲಿ ಕನ್ನಡದ ಸಾಕಷ್ಟು ಕಲಾವಿದರ ಹೆಸರುಗಳಿವೆ. ಅದೇ ರೀತಿ ಬಾಲಿವುಡ್ ಬಿಗ್ ಬಿ ಅಮಿತಾಭ್ ಕೂಡ ಒಬ್ಬರು. ಹೀಗಿರುವಾಗ ‘ಬಾಲಿವುಡ್​ನಲ್ಲಿ ಅಮಿತಾಭ್ ಹೇಗೋ, ಕನ್ನಡದಲ್ಲಿ ಅನಂತ್​ನಾಗ್ ಹಾಗೆ..’ ಎಂದರೂ ಅತಿಶಯೋಕ್ತಿ ಅನಿಸದು. ಆದರೆ ಆ ಮಾತನ್ನು ತಳ್ಳಿಹಾಕುವ ಅನಂತ್ ಹೀಗೆನ್ನುತ್ತಾರೆ. ‘ನನಗೆ ಆ ಥರ ಹೇಳಿದರೆ ಇಷ್ಟ ಆಗುವುದಿಲ್ಲ. ನಾನು ಮಾಡಿದ ಸಿನಿಮಾ ಇನ್ನೊಬ್ಬ ಮಾಡಿರುವುದಿಲ್ಲ. ಅದನ್ನು ಹೇಗೆ ಹೋಲಿಕೆ ಮಾಡಲು ಸಾಧ್ಯ? ಸಾರಾಸಗಟಾಗಿ ಲೇಪನ ಕೊಡುವುದು ಸರಿಯಲ್ಲ. ಆದರೂ ಅದನ್ನು ಅಭಿಮಾನದಿಂದ ಹೆಮ್ಮೆಯಿಂದ, ಪ್ರೀತಿಯಿಂದ ಹೇಳುತ್ತಾರೆ. ಆದರೆ ವೈಯಕ್ತಿಕವಾಗಿ ಆ ಹೋಲಿಕೆ ನನಗಿಷ್ಟವಿಲ್ಲ’ ಎನ್ನುತ್ತಾರೆ. ಹಾಗಾದರೆ ಅನಂತ್​ಗೆ ಯಾವ ನಟರಿಷ್ಟ? ‘ಇಂಡಿಯಾದಲ್ಲಿ ನಾನು ಮೆಚ್ಚಿದ ಹಿಂದಿ ನಟ ಸಂಜೀವ್ ಕುಮಾರ್. ಹಾಲಿವುಡ್​ನಲ್ಲಿ ರಿಚರ್ಡ್ ಬರ್ಟನ್, ಪಿಟ್ರೊಟೂಲ್, ಮಾರ್ವಲ್.. ಹೀಗೆ ಸುಮಾರು ಜನರಿದ್ದಾರೆ. ಅವರಿಗೆ ಸಿಕ್ಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನನಗೆ ಸಿಕ್ಕ ಪಾತ್ರಗಳಲ್ಲಿ ನಾನು ಜೀವಿಸಿದ್ದೇನೆ. ಆದರೆ, ಈ ಹೋಲಿಕೆ ಅಭಿಮಾನದಿಂದ ಹೇಳುತ್ತಿರುವುದರಿಂದ ಒಪ್ಪಿಕೊಳ್ಳಬೇಕಷ್ಟೇ’ ಎಂಬುದು ಅವರ ಅನಿಸಿಕೆ.

ಬದಲಾವಣೆ ಬೇಕು...

ಬೇರೆಲ್ಲ ಕ್ಷೇತ್ರಗಳಂತೆ ಸಿನಿಮಾ ಕ್ಷೇತ್ರ ಈಗ ಮೊದಲಿನಂತಿಲ್ಲ. ಬದಲಾವಣೆಯ ಗಾಳಿಗೆ ಸಿಕ್ಕು ಬೇರೆ ಬೇರೆ ರೂಪ ಪಡೆದುಕೊಳ್ಳುತ್ತಿದೆ. ಮೇಕಿಂಗ್​ನಿಂದ ಹಿಡಿದು ಸಿದ್ಧವಾಗುತ್ತಿರುವ ಕಥೆಗಳು, ಅವುಗಳಲ್ಲಿನ ವಿಷಯ-ವಸ್ತುವಿನ ಪರಿಕಲ್ಪನೆಯೂ ಬೇರೆಯದ್ದೇ ಆಗುತ್ತಿದೆ. ಅಂದಿನ ಮತ್ತು ಇಂದಿನ ಅಂಥ ಕೆಲ ವ್ಯತ್ಯಾಸಗಳನ್ನು ಅನಂತ್ ಇಲ್ಲಿ ಹೇಳಿಕೊಂಡಿದ್ದಾರೆ. ‘ಮೊದಲಿಗೆ ನಾವು ಯಾವ ಕಾಲಘಟ್ಟದಲ್ಲಿದ್ದೇವೆ ಎಂಬುದನ್ನು ಗಮನದಲ್ಲಿಟ್ಟುಕೊಂಡೇ ಮುಂದುವರಿಯಬೇಕು.

ಆಗೆಲ್ಲ ಕಾದಂಬರಿ-ಕೃತಿಗಳೇ ಸಿನಿಮಾ ಆಗಿ ತೆರೆಮೇಲೆ ಬರುತ್ತಿದ್ದವು. ಈಗ ಕಾದಂಬರಿಗಳೇ ಇಲ್ಲ, ಬರೆಯುವವರೇ ಕಡಿಮೆ ಆಗಿದ್ದಾರೆ. ನಾಟಕಗಳೂ ಅಷ್ಟಕಷ್ಟೇ. ಈಗಿನವರು ಕಂಟೆಂಟ್ ಬೇಸ್ಡ್ ಸಿನಿಮಾ ಮಾಡುತ್ತಿದ್ದಾರೆ. ಅದನ್ನು ನಾವು ತಳ್ಳಿಹಾಕಲು ಬರುವುದಿಲ್ಲ, ಟೇಸ್ಟ್​ಗೆ ತಕ್ಕಂತೆ ಬದಲಾಗಬೇಕು. ರೂಪ ಬದಲಾಗಬಹುದು. ಆದರೆ, ಕಂಟೆಂಟ್ ಇಲ್ಲದೆ ಯಾವ ಚಿತ್ರವೂ ಯಶ ಕಾಣುವುದಿಲ್ಲ ಎಂಬುದನ್ನು ಮನಗಂಡಿದ್ದೇನೆ’ ಎಂಬ ಮಾತು ಅವರದ್ದು.

| ಮಂಜು ಕೊಟಗುಣಸಿ ಬೆಂಗಳೂರು 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net