

ಇಂದು ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಹುಟ್ಟುಹಬ್ಬ. ವಿಶೇಷವೆಂದರೆ, ಇದು ಅವರ 76ನೇ ಹುಟ್ಟುಹಬ್ಬ. ಬಹುಶಃ ಅವರು ಇದ್ದಿದ್ದರೆ ಆ ಸಂಭ್ರಮ ಇನ್ನಷ್ಟು ಜೋರಾಗಿರುತ್ತಿತ್ತೋ ಏನೋ? ಬರೀ ಕನ್ನಡ, ತೆಲುಗು, ತಮಿಳಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗವೇ ಅವರ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ಕೋರುತ್ತಿತ್ತೋ ಏನೋ? ಎಸ್ಪಿಬಿ 76 ಎಂಬ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿತವಾಗುತ್ತಿತ್ತೋ ಏನೋ? ಆದರೆ, ಅದ್ಯಾವುದನ್ನೂ ನೋಡುವುದಕ್ಕೆ ಅವರು ಈಗಿಲ್ಲ.
ಬಹುಶಃ ತಮ್ಮ ಐದು ದಶಕಗಳ ಚಿತ್ರಜೀವನದಲ್ಲಿ ಎಸ್.ಪಿ.ಬಿ ಅವರು ಯಾವುದೇ ಚಿತ್ರಕ್ಕೂ ಹಾಡದೆ, ಮೈಕಿನ ಮುಂದೆ ನಿಲ್ಲದೆ ಇದ್ದಿದ್ದು ಕಳೆದ ಒಂದು ವರ್ಷದಿಂದಲೇ ಇರಬೇಕು. ಮಿಕ್ಕಂತೆ ಅವರೆಂದೂ ಗಾಯನದಿಂದ ದೂರವಾಗಿದ್ದೇ ಇಲ್ಲ. ಸತತವಾಗಿ ಹಲವು ಭಾಷೆಗಳಲ್ಲಿ ಹಾಡುತ್ತಾ, ಹಲವು ನಾಯಕರಿಗೆ ಧ್ವನಿಯಾಗುತ್ತಾ, ಒಂದು ದಿನಕ್ಕೆ ಅತೀ ಹೆಚ್ಚು ಹಾಡುಗಳನ್ನು ಹಾಡುವ ಮೂಲಕ ದಾಖಲೆ ಮಾಡುತ್ತಾ, ಚಿತ್ರತಂಡದವರ ಕಲ್ಪನೆಗೆ ಜೀವ ತುಂಬುತ್ತಾ ಹೋದರು. ಒಂದು ಕಾಲಕ್ಕೆ ಬಾಲಸುಬ್ರಹ್ಮಣ್ಯಂ ಅವರು ಅದೆಷ್ಟು ಬಿಜಿಯಾಗಿದ್ದರೆಂದರೆ, ಅವರಿಗೆ ತಮ್ಮ ಹುಟ್ಟುಹಬ್ಬವನ್ನಾದರೂ ಆಚರಿಸಿಕೊಳ್ಳುವುದಕ್ಕೆ ಪುರುಸೊತ್ತು ಇತ್ತೋ, ಇಲ್ಲವೋ ಗೊತ್ತಿಲ್ಲ. ಆ ಮಟ್ಟಿಗೆ ಅವರು ಬಿಜಿಯಾಗಿದ್ದರು ಮತ್ತು ಏಕಕಾಲಕ್ಕೆ ಮೂರ್ನಾಲ್ಕು ಭಾಷೆಗಳಿಗೆ ಬೇಕಾದವರಾಗಿದ್ದರು. ಅವರು ಹಾಗೆ ಹಾಡದಿದ್ದರೆ, ಅಂಥದ್ದೊಂದು ದಾಖಲೆ ಮಾಡುವುದಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ. ಹಾಗೆ ನೋಡಿದರೆ, ಅತೀ ಹೆಚ್ಚು ಚಿತ್ರಗೀತೆಗಳನ್ನು ಹಾಡಿರುವ ಗಾಯಕರು ಎಂದು ಗಿನ್ನೀಸ್ ಸಂಸ್ಥೆ ಗುರುತಿಸಿರುವುದು ಪಿ. ಸುಶೀಲಾ ಅವರನ್ನು. ಸುಶೀಲಾ ಅವರು ಐದು ದಶಕಗಳಲ್ಲಿ
12 ಭಾಷೆಗಳಲ್ಲಿ 17695 ಹಾಡುಗಳನ್ನು ಹಾಡಿದ್ದು, ಅದೇ ವಿಶ್ವದಾಖಲೆ ಎಂದು ಪರಿಗಣಿಸಲ್ಪಟ್ಟಿದೆ. ಆದರೆ, ಬಾಲಸುಬ್ರಹ್ಮಣ್ಯಂ ಅವರು ಅದಕ್ಕಿಂತ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರು 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ ಎಂದು ಹೇಳಲಾಗುತ್ತದಾದರೂ, ಅದಕ್ಕೆ ಪೂರಕವಾದ ದಾಖಲೆಗಳಿಲ್ಲ. ಆದರೆ, ಒಂದಂತೂ ಸತ್ಯ.
ಪಿ. ಸುಶೀಲ ಅವರಿಗಿಂಥ ಹೆಚ್ಚು ಹಾಡುಗಳನ್ನು ಎಸ್ಪಿಬಿ ಹಾಡಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಜಗತ್ತಿನಲ್ಲಿ ಯಾರೂ ಯಾವತ್ತೂ ಮುರಿಯದ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ. ಆದರೆ, ಅದೊಂದು ಅಲಿಖಿತ ದಾಖಲೆಯಾಗಿ ಉಳಿದಿದೆ ಅಷ್ಟೇ.