

ಬೆಂಗಳೂರು: 'ರಾಜು ಕನ್ನಡ ಮೀಡಿಯಂ' ನಂತರ 'ಫಸ್ಟ್ ರ್ಯಾಂಕ್ ರಾಜು' ಖ್ಯಾತಿಯ ನಿರ್ದೇಶಕ ನರೇಶ್ ಕುಮಾರ್ ಏನು ಮಾಡುತ್ತಿದ್ದಾರೆ ಎಂಬ ವಿಷಯವನ್ನು ಬಹಿರಂಗಪಡಿಸಿರಲಿಲ್ಲ. ಸದ್ದಿಲ್ಲದೆ, 'ಸೌಥ್ ಇಂಡಿಯನ್ ಹೀರೋ' ಎಂಬ ಚಿತ್ರವನ್ನು ಮುಗಿಸಿದ್ದ ಅವರು, ಈಗ ಆ ಚಿತ್ರವನ್ನು ಬಿಡುಗಡೆ ಮಾಡುವ ಹಂತಕ್ಕೆ ತಂದಿದ್ದಾರೆ. ಈ ಚಿತ್ರವನ್ನು ನರೇಶ್ ಬರೀ ಬರೆದು ನಿರ್ದೇಶಿಸಿರುವುದಷ್ಟೇ ಅಲ್ಲ, ತಮ್ಮ ಪತ್ನಿ ಶಿಲ್ಪಾ ಜೊತೆಗೂಡಿ ನಿರ್ಮಾಣಕ್ಕೂ ಇಳಿದಿದ್ದಾರೆ.
ಇದನ್ನೂ ಓದಿ: ಪ್ರೇಮಗೀತೆಯೊಂದಿಗೆ ‘ಗೌಳಿ’ ಚಿತ್ರೀಕರಣ ಮುಕ್ತಾಯ
ಈ ಚಿತ್ರದಲ್ಲಿ ಸಾರ್ಥಕ್ ನಾಯಕನಾಗಿದ್ದು, ನಾಯಕಿಯರಾಗಿ ಕಾಶಿಮಾ ಹಾಗೂ ಮುಂಬೈ ಮೂಲದ ಊರ್ವಶಿ ನಟಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿರುವ ನರೇಶ್ ಕುಮಾರ್ ಇತ್ತೀಚೆಗೆ ಟೀಸರ್ ಬಿಡುಗಡೆ ಮಾಡಿದ್ದಾರೆ.
ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಹೀರೋಗಳನ್ನು ಸ್ಪೂರ್ತಿಯಾಗಿಟ್ಟುಕೊಂಡು ಹೆಣೆದಿರುವ ಕಥೆಯಿದು ಎನ್ನುವ ನರೇಶ್ ಕುಮಾರ್, 'ನಾಯಕನ ಪಾತ್ರದಲ್ಲಿ ಎಲ್ಲಾ ಸ್ಟಾರ್ ಹೀರೋಗಳನ್ನು ಕಾಣಬಹುದಾಗಿದೆ. ಭೌತಶಾಸ್ತ್ರದ ಶಿಕ್ಷಕ ಲಾಜಿಕ್ ಲಕ್ಷ್ಮಣ್‌ರಾವ್, ಚಿತ್ರರಂಗದ ಯಾವುದೇ ಸಂಪರ್ಕವಿಲ್ಲದ ಆತ ಹೇಗೆ ಚಿತ್ರರಂಗಕ್ಕೆ ಬರುತ್ತಾನೆ, ಬಂದಮೇಲೆ ಏನೆಲ್ಲ ಸಂಕಷ್ಟ ಎದುರಿಸುತ್ತಾನೆ ಎನ್ನುವುದೇ ಚಿತ್ರದ ಕಂಟೆಂಟ್' ಎನ್ನುತ್ತಾರೆ.
ಇಲ್ಲಿ ನಾಯಕನ ಪಾತ್ರಕ್ಕೆ ಮೂರು ಶೇಡ್‌ಗಳಿವೆ. ಒಂದರಲ್ಲಿ ಹಳ್ಳಿಯ ಬ್ಯಾಕ್‌ಡ್ರಾಪ್ ಇದ್ದರೆ, ಮತ್ತೊಂದು ಸಿಟಿಯ ಹಿನ್ನೆಲೆಯಲ್ಲಿರುತ್ತದಂತೆ. ಇನ್ನೊಂದು ಸ್ಪೆಷಲ್ ಗೆಟಪ್ ಕೂಡ ಚಿತ್ರದಲ್ಲಿದೆ. 'ಹೀರೋಯಿಸಂ ಆಧರಿಸಿ ಫನ್ನಿ ಘಟನೆಗಳನ್ನು ಇಟ್ಟುಕೊಂಡು ಮಾಡಿರುವ ಚಿತ್ರವಿದು. ಇಮೇಜ್ ಇಲ್ಲದ ಒಬ್ಬ ನಾಯಕ ಮುಂದೆ ದೊಡ್ಡ ನಾಯಕನಾಗಿ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾನೆಂದು ಚಿತ್ರದ ಮೂಲಕ ಹೇಳಿದ್ದೇನೆ. ನವಂಬರ್ ಅಥವಾ ಡಿಸೆಂಬರ್ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆಯಿದೆ' ಎಂದು ಹೇಳಿದರು.
ಇದನ್ನೂ ಓದಿ: ಹೆದರಿಸಲು ಬರುತ್ತಿದ್ದಾಳೆ ‘ಅಂಬುಜಾ’; ಟೀಸರ್ ಬಿಡುಗಡೆ
'ಸೌಥ್ ಇಂಡಿಯನ್ ಹೀರೋ' ಚಿತ್ರದಲ್ಲಿ ವಿಜಯ್ ಚೆಂಡೂರು, ಅಮಿತ್, ಅಶ್ವಿನ್ ರಾವ್ ಪಲ್ಲಕ್ಕಿ ಮುಂತಾದವರು ನಟಿಸಿದ್ದಾರೆ. ಹರ್ಷವರ್ಧನ್ ಸಂಗೀತ ಮತ್ತು ರಾಜಶೇಖರ್ ಹಾಗೂ ಪ್ರವೀಣ್ ಎಸ್. ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.