

ಬೆಂಗಳೂರು: ಲಾಕ್ಡೌನ್ ಘೊಷಣೆ ಆದ ಬಳಿಕ ಬೇರೆ ಬೇರೆ ದೇಶಗಳಲ್ಲಿ ಸಿಲುಕಿದ್ದ ಕನ್ನಡಿಗರನ್ನು ಕರೆತರುವುದು ಅಸಾಧ್ಯದ ಮಾತಾಗಿತ್ತು. ಇದೀಗ ಲಾಕ್ಡೌನ್ನಲ್ಲಿ ಕೊಂಚ ಸಡಿಲಿಕೆ ಆಗಿದ್ದರಿಂದ ವಿದೇಶದಲ್ಲಿ ಸಿಲುಕಿರುವವರು ತಾಯ್ನಾಡಿನತ್ತ ಮರಳುತ್ತಿದ್ದಾರೆ. ಆ ಪೈಕಿ ನಟಿ-ರಾಜಕಾರಣಿ ಡಾ. ಜಯಮಾಲಾ ಅವರ ಪುತ್ರಿ ಸೌಂದರ್ಯ ಸಹ ಸೋಮವಾರ ಬೆಂಗಳೂರಿಗೆ ಬಂದಿಳಿದಿದ್ದಾರೆ.
ಲಂಡನ್ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ವ್ಯಾಸಂಗ ಮಾಡುತ್ತಿರುವ ಸೌಂದರ್ಯ, ಲಾಕ್ಡೌನ್ ಘೊಷಣೆ ಆಗುತ್ತಿದ್ದಂತೆ ಭಾರತಕ್ಕೆ ವಾಪಸ್ಸು ಬರುವ ಪ್ರಯತ್ನ ಮಾಡಿದರೂ, ಸಾಧ್ಯವಾಗಿರಲಿಲ್ಲ. ಮಗಳನ್ನು ಕರೆ ತರುವ ಬಗ್ಗೆ ಡಾ. ಜಯಮಾಲಾ, ವಿಧಾನಸಭೆಯ ಕಲಾಪದಲ್ಲಿ ಪ್ರಸ್ತಾಪ ಮಾಡಿದ್ದರು. ಇದೀಗ ಕೇಂದ್ರ ಸರ್ಕಾರವೇ ಹೊರದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಪ್ರಯತ್ನ ಮಾಡುತ್ತಿದ್ದು, ಸೌಂದರ್ಯ ಸಹ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಅಷ್ಟೇ ಅಲ್ಲ, ಇಂದಿನಿಂದ 14 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇರಲಿದ್ದಾರೆ.
ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಜಯಮಾಲಾ, ‘ಇಂದು ಬಹಳ ಖುಷಿಯಾಗುತ್ತಿದೆ. ಸೌಂದರ್ಯ ಈ ನೆಲಕ್ಕೆ ವಾಪಸ್ಸಾಗಿದ್ದಾಳೆ. ಈ ಎರಡು ತಿಂಗಳಲ್ಲಿ ಅವಳ ಬಗ್ಗೆ ಯೋಚಿಸಿ ಯೋಚಿಸಿ ಜೀವಂತ ಶವ ಆಗಿದ್ದೆ. ನನ್ನ ದೇಹ ಇಲ್ಲೇ ಇದ್ದರೂ, ಆತ್ಮ ಅಲ್ಲಿತ್ತು. ಯಾವಾಗ ವಾಪಸ್ಸು ಬರುತ್ತಾಳೋ ಅಂತ ಕಾಯುತ್ತಿದ್ದೆ. ಲಂಡನ್ನಲ್ಲಿ ಪರಿಸ್ಥಿತಿ ಬಹಳ ಘೋರವಾಗಿತ್ತಂತೆ. ಬಹಳಷ್ಟು ಜನ ಸತ್ತಿದ್ದಾರೆ. ವಿದ್ಯಾರ್ಥಿಗಳಂತೂ ಬಹಳ ಕಷ್ಟಪಟ್ಟಿದ್ದಾರೆ. ಸೌಂದರ್ಯ ಒಮ್ಮೆ ದುಬೈವರೆಗೂ ಬಂದಿದ್ದಳು. ಅಷ್ಟರಲ್ಲಿ ಇಲ್ಲಿ ಲಾಕ್ಡೌನ್ ಪ್ರಾರಂಭವಾಗಿದ್ದರಿಂದ, ಫ್ಲೈಟ್ಗಳೆಲ್ಲಾ ಕ್ಯಾನ್ಸಲ್ ಆಯಿತು. ಹಾಗಾಗಿ ಅವಳು ಲಂಡನ್ಗೆ ವಾಪಸ್ಸು ಹೋಗಬೇಕಾಯಿತು. ಈಗ ಕೊನೆಗೂ ಬೆಂಗಳೂರಿಗೆ ಬಂದಿದ್ದಾಳೆ’ ಎನ್ನುತ್ತಾರೆ.
ಈ ಎರಡು ತಿಂಗಳಲ್ಲಿ ಮಗಳ ಬಗ್ಗೆ ಯೋಚಿಸಿ ಯೋಚಿಸಿ ಜೀವಂತ ಶವ ಆಗಿದ್ದೆ. ನನ್ನ ದೇಹ ಇಲ್ಲೇ ಇದ್ದರೂ, ಆತ್ಮ ಅಲ್ಲಿತ್ತು. ಯಾವಾಗ ವಾಪಸ್ಸು ಬರುತ್ತಾಳೋ ಅಂತ ಕಾಯುತ್ತಿದ್ದೆ. ಇದೀಗ ನಿಟ್ಟುಸಿರು ಬಿಟ್ಟಿದ್ದೇನೆ. | ಜಯಮಾಲಾ, ನಟಿ, ರಾಜಕಾರಣಿ