ಸ್ಯಾಂಡಲ್‌ವುಡ್‌ಗೆ ಶ್ರಾವಣ ಕಳೆ : ದ್ವಿತೀಯಾರ್ಧದಲ್ಲಿ ಕನ್ನಡ ಸಿನಿಮಾಗಳ ಕೈಹಿಡಿದ ಪ್ರೇಕ್ಷಕ ಪ್ರಭು

shravana
Published on

ಬೆಂಗಳೂರು : ಕರುನಾಡಿನಲ್ಲಿ ಇದೀಗ ಶ್ರಾವಣ ಕಳೆ ಹೆಚ್ಚಿದ್ದು, ಹಬ್ಬಗಳ ಸೀಸನ್ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಭಕ್ತರ ದಂಡೇ ಹರಿದುಬರುತ್ತಿದೆ. ಇದೇ ವಾತಾವರಣ, ಸದ್ಯ ಚಿತ್ರಮಂದಿರಗಳಲ್ಲೂ ಇದೆ. ಈ ವರ್ಷದ ಮೊದಲರ್ಧ ಚಿತ್ರಗಳು ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆದಿರಲಿಲ್ಲ. ಕಳೆದ ಜುಲೈನಿಂದ ಸ್ಯಾಂಡಲ್‌ವುಡ್‌ಗೆ ಕಳೆ ಬಂದಂತಾಗಿದ್ದು, ಮೂರು ಚಿತ್ರಗಳು ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆದಿವೆ. ಹೀಗಾಗಿ, ಶ್ರಾವಣ ಸ್ಯಾಂಡಲ್‌ವುಡ್‌ಗೆ ಸಂತಸದ ಕಳೆ ತಂದಿದೆ.

ಜುಲೈನಲ್ಲಿ ಹೊಸಬರ ಭರ್ಜರಿ ಬೆಳೆ

ಕನ್ನಡ ಚಿತ್ರರಂಗಕ್ಕೆ ಮೊದಲರ್ಧದಲ್ಲಿ ದೊಡ್ಡ ಹಿಟ್ ಸಿನಿಮಾ ಬಂದಿರಲಿಲ್ಲ. ಆದರೆ, ಜುಲೈ 7ಕ್ಕೆ ರಿಲೀಸ್ ಆಗಿದ್ದ ‘ಹೆಬ್ಬುಲಿ ಕಟ್’ ತಕ್ಕಮಟ್ಟಿಗೆ ಪ್ರೇಕ್ಷಕರ ಗಮನಸೆಳೆದಿತ್ತು. ಬಳಿಕ ಜು.18ಕ್ಕೆ ತೆರೆಕಂಡ ಯುವ ರಾಜಕುಮಾರ್ ನಟನೆಯ ‘ಎಕ್ಕ’ ಹಾಗೂ ಕಿರೀಟಿ ರೆಡ್ಡಿಯ ‘ಜೂನಿಯರ್’ ಒಂದೇ ದಿನ ರಿಲೀಸ್ ಆದರೂ, ಪ್ರೇಕ್ಷಕರನ್ನು ಥಿಯೇಟರ್‌ನತ್ತ ಸೆಳೆದವು.

‘ಸು ಫ್ರಮ್ ಸೋ’ ತಂದ ನಗು

ಕಳೆದ ಶುಕ್ರವಾರ ತೆರೆಕಂಡಿದ್ದ ಜೆ.ಪಿ.ತುಮಿನಾಡ್ ನಿರ್ದೇಶನದ, ರಾಜ್ ಬಿ.ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಚಿತ್ರ ದಿನದಿಂದ ದಿನಕ್ಕೆ ದಾಖಲೆ ಬರೆಯುತ್ತಿದೆ. ರಿಲೀಸ್ ಆದ ಒಂದೇ ವಾರದಲ್ಲಿ ಅಂದಾಜು 15 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿದೆ. ಇದೀಗ ಅಮೆರಿಕ, ಕತಾರ್, ಕೆನಡಾ, ಜರ್ಮನಿ, ಯೂರೋಪ್ ಸೇರಿ ವಿದೇಶಗಳಲ್ಲೂ ಸಿನಿಮಾ ರಿಲೀಸ್ ಆಗುತ್ತಿದೆ. ಹಾಗೇ ಇಂದು ಮಲಯಾಳಂನಲ್ಲಿ ಡಬ್ ಆಗಿ ಸಿನಿಮಾ ಬಿಡುಗಡೆಯಾಗುತ್ತಿದೆ. ಇನ್ನು ಹೊಂಬಾಳೆ ಫಿಲಂಸ್ ಅರ್ಪಿಸಿರುವ, ಅಶ್ವಿನ್ ಕುಮಾರ್ ನಿರ್ದೇಶನದ ಪ್ಯಾನ್ ಇಂಡಿಯಾ ಆ್ಯನಿಮೇಟೆಡ್ ‘ಮಹಾವತಾರ ನರಸಿಂಹ’ ಚಿತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಕ್ಸಸ್ ಆಗಿದ್ದು, ಮೊದಲ ವಾರಾಂತ್ಯಕ್ಕೆ 35 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿಕೊಂಡಿದೆ. ಆ ಮೂಲಕ ಅತಿಹೆಚ್ಚು ಗಳಿಕೆ ಕಂಡ ಭಾರತದ ಆ್ಯನಿಮೇಟೆಡ್ ಸಿನಿಮಾ ಎಂಬ ದಾಖಲೆ ಬರೆದಿದೆ.

ಆಗಸ್ಟ್ ನಲ್ಲಿ ಸಿನಿಮಾ  ಕ್ರಾಂತಿ

ಇನ್ನೊಂದು ತಿಂಗಳ ಕಾಲ ಕರುನಾಡಿನಲ್ಲಿ ಹಬ್ಬಗಳ ಸೀಸನ್. ಇದನ್ನೇ ಸದುಪಯೋಗಿಸಿಕೊಳ್ಳಲು ಸ್ಯಾಂಡಲ್‌ವುಡ್‌ನಲ್ಲಿ ಆಗಸ್ಟ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ತೆರೆಗೆ ಬರುತ್ತಿವೆ. ಪೃಥ್ವಿ ಅಂಬಾರ್, ಕಾವ್ಯಾ ಶೈವ ಮುಖ್ಯಭೂಮಿಕೆಯಲ್ಲಿರುವ ‘ಕೊತ್ತಲವಾಡಿ’, ಹೊಸ ಪ್ರತಿಭೆ ಲಿಖಿತ್ ಆ್ಯಕ್ಷನ್-ಕಟ್ ಹೇಳಿರುವ ‘ವೃತ್ತ’, ರಾ.ಸೂರ್ಯ ನಟಿಸಿ, ನಿರ್ದೇಶಿಸಿರುವ ‘ಎಲ್ಟು ಮುತ್ತ’, ವಿಜಯ್ ಭಾರದ್ವಾಜ್ ಅವರ ‘ನಮೋ ನಾರಾಯಣ’ ಹಾಗೂ ಉತ್ತರ ಕರ್ನಾಟಕ ಪ್ರತಿಭೆಗಳ ‘ಕಿಡ್ನ್ಯಾಪ್ ಕಾವ್ಯ’ ಚಿತ್ರಗಳು ಇಂದು ಬಿಡುಗಡೆಯಾಗುತ್ತಿವೆ. ಬಳಿಕ ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ತಾರಾಗಣದ ಅರ್ಜುನ್ ಜನ್ಯ ನಿರ್ದೇಶನದ ‘45’ ಆ.14ಕ್ಕೆ ತೆರೆಕಾಣಲಿದೆ. ‘ಕೊತ್ತಲವಾಡಿ’ ಹಾಗೂ ‘45’ ಚಿತ್ರಗಳಿಂದ ಆಗಸ್ಟ್‌ನಲ್ಲಿ ಮತ್ತೊಂದು ಕ್ರಾಂತಿ ಆಗಬಹುದು ಎನ್ನಲಾಗುತ್ತಿದೆ.

ಶ್ರಾವಣ ಬಳಿಕ ಶುಕ್ರದೆಸೆ

ಈ ಶ್ರಾವಣ ಕನ್ನಡ ಚಿತ್ರರಂಗಕ್ಕೆ ಕಳೆ ತಂದರೆ ಬಳಿಕ ಶುಕ್ರದೆಸೆ ಆರಂಭವಾಗಲಿದೆ. ಯಾಕೆಂದರೆ, ಶ್ರಾವಣ ಬಳಿಕ ಕನ್ನಡದ ಸ್ಟಾರ್ ನಟರ ಬಹುನಿರೀಕ್ಷಿತ ಚಿತ್ರಗಳು ತೆರೆಕಾಣಲಿವೆ. ಧ್ರುವ ಸರ್ಜಾ ಮತ್ತು ಪ್ರೇಮ್ ಕಾಂಬಿನೇಷನ್‌ನ, ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಕೆಡಿ: ದ ಡೆವಿಲ್’ ದಸರಾ ಹಬ್ಬಕ್ಕೆ ತೆರೆಗೆ ಬರಲಿದೆ. ಅದರ ಬೆನ್ನಲ್ಲೇ ಅ. 2ರಂದು ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಹಿಟ್ ‘ಕಾಂತಾರ’ ಚಿತ್ರದ ಪ್ರೀಕ್ವೆಲ್ ‘ಚಾಪ್ಟರ್ 1’ ರಿಲೀಸ್ ಆಗಲಿದೆ. ಆ ನಂತರ ವರ್ಷದಂತ್ಯಕ್ಕೆ ನಟ ದರ್ಶನ್ ಮತ್ತು ಪ್ರಕಾಶ್ ವೀರ್ ಕಾಂಬಿನೇಷನ್‌ನ ‘ಡೆವಿಲ್’ ರಿಲೀಸ್ ಆಗಲಿದೆ. ‘ದ ರೈಸ್ ಆಫ್​ ಅಶೋಕ’, ‘ಕಿಚ್ಚ 47’, ‘ಯುವರ್ಸ್ ಸಿನ್ಸಿಯರ್ಲಿ ರಾಮ್ ’ ಸೇರಿ ಇನ್ನೂ ಕೆಲ ನಿರೀಕ್ಷಿತ ಚಿತ್ರಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net