ಸೌಮ್ಯ ಎಂಬ ಹಂಟರ್​ವಾಲಿ; ನಿರಂಜನ್ ಹೊಸ ಚಿತ್ರಕ್ಕೆ ನಾಯಕಿ ಸಿಕ್ಕಳು

Hunter
Published on

ಬೆಂಗಳೂರು: ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ಸದ್ಯ ಸ್ಯಾಂಡಲ್​ವುಡ್​ನಲ್ಲಿ ಬಿಜಿ ನಟ. ಅವರು ಈವರೆಗೂ ನಾಯಕನಾಗಿ ನಟಿಸಿದ ಒಂದೇ ಒಂದು ಸಿನಿಮಾ ಬಿಡುಗಡೆ ಆಗದಿದ್ದರೂ, ಹಲವು ಸಿನಿಮಾ ಅವಕಾಶಗಳು ಅವರ ಬತ್ತಳಿಕೆಯಲ್ಲಿವೆ. ಇದೀಗ ಆ ಪಟ್ಟಿಗೆ ಮತ್ತೊಂದು ಸಿನಿಮಾ ಸೇರ್ಪಡೆಯಾಗಿದೆ. ಅದರ ಹೆಸರು ‘ಹಂಟರ್’!

ಹೆಸರೇ ಹೇಳುವಂತೆ ‘ಹಂಟರ್’ ಪಕ್ಕಾ ಮಾಸ್ ಆಕ್ಷನ್ ಜತೆಗೆ ಥ್ರಿಲ್ಲರ್ ಕಥಾಹಂದರದ ಸಿನಿಮಾ. ಇತ್ತೀಚೆಗಷ್ಟೇ ಈ ಚಿತ್ರದ ಮುಹೂರ್ತ ಮುಗಿದಿದ್ದು, ಉಪೇಂದ್ರ ದಂಪತಿ ಆಗಮಿಸಿ ಶುಭಕೋರಿದ್ದಾರೆ. ಸೋಮವಾರದಿಂದ ಶೂಟಿಂಗ್ ಸಹ ಶುರುವಾಗಿದ್ದು, ಮಲಯಾಳಂ ನಟಿ ಸೌಮ್ಯ ಮೆನನ್, ನಿರಂಜನ್​ಗೆ ಜೋಡಿಯಾಗಿದ್ದಾರೆ. ಸೌಮ್ಯಗಿದು ಕನ್ನಡದ ಮೊದಲ ಸಿನಿಮಾ. ಈ ಹಿಂದೆ ರವಿ ಶ್ರೀವತ್ಸ ನಿರ್ದೇಶಿಸಬೇಕಿದ್ದ ‘ಎಮ್​ಆರ್​’ ಚಿತ್ರದಲ್ಲಿ ಸೌಮ್ಯ ನಟಿಸುತ್ತಿದ್ದಾರೆ ಎಂಬ ಸುದ್ದಿ ಇತ್ತಾದರೂ, ಆ ಚಿತ್ರವೇ ಸ್ಥಗಿತವಾಯ್ತು. ಇದೀಗ ‘ಹಂಟರ್’ ಮೂಲಕ ಕನ್ನಡಕ್ಕೆ ಬಂದಿದ್ದಾರೆ ಸೌಮ್ಯ.

ಈ ಹಿಂದೆ ‘ಸೀಜರ್’ ಸಿನಿಮಾ ನಿರ್ದೇಶನ ಮಾಡಿದ್ದ ವಿನಯ್ ಕೃಷ್ಣ, ಈ ಚಿತ್ರಕ್ಕೂ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಅವರ ಈ ಪ್ರಯತ್ನಕ್ಕೆ ತ್ರಿವಿಕ್ರಮ್ ಸಾಫಲ್ಯ ಸಾಥ್ ನೀಡುತ್ತಿದ್ದು, ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ‘ಪ್ರೇಕ್ಷಕನನ್ನು ಸೀಟಿನ ತುದಿಗೆ ತಂದು ಕೂರಿಸುವಂಥ ಚಿತ್ರವಿದು. ಕಳೆದ ಆರು ತಿಂಗಳಿಂದ ನಿರಂಜನ್ ಈ ಸಿನಿಮಾಕ್ಕೆ ತಯಾರಿ ನಡೆಸಿದ್ದಾರೆ. ಕೇಳಿದ್ದನ್ನು ಕೊಡಲು ನಿರ್ವಪಕರು ತಯಾರಾಗಿದ್ದಾರೆ’ ಎನ್ನುತ್ತಾರೆ ವಿನಯ್. ಪ್ರಕಾಶ್ ರೈ, ನಾಜರ್, ಸುಮನ್, ಸಾಧು ಕೋಕಿಲ ಸೇರಿ ಹಲವು ಸ್ಟಾರ್ ಕಲಾವಿದರು ನಟಿಸುತ್ತಿದ್ದಾರೆ. ಚಂದನ್ ಶೆಟ್ಟಿ ಸಂಗೀತ, ಮಹೇಶ್ ಛಾಯಾಗ್ರಾಹಣ, ಶ್ರೀಕಾಂತ್ ಸಂಕಲನ ಮಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net