ಕಾಲಿವುಡ್​ ಸ್ಟಾರ್​ ನಟ ವಿಷ್ಣು ವಿಶಾಲ್​ ಕುಟುಂಬದ ವಿರುದ್ಧ ತಿರುಗಿಬಿದ್ದ ಹಾಸ್ಯನಟ ಸೂರಿ..!

Soori
Published on

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ಹಾಸ್ಯನಟ ಸೂರಿ ನಿರ್ಮಾಪಕ ಅಂಬುವೆಲ್​ ಮತ್ತು ಪ್ರಖ್ಯಾತ ನಟ ವಿಷ್ಣು ವಿಶಾಲ್​ ತಂದೆ ರಮೇಶ್​ ಕುಡಾವ್ಲ ವಿರುದ್ಧ 2.70 ಕೋಟಿ ರೂ. ವಂಚನೆ ಮಾಡಿದ್ದಾರೆಂದು ಆರೋಪಿಸಿ ಚೆನ್ನೈನ ಆದ್ಯಾರ್ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ​

ದೂರು ಸ್ವೀಕರಿಸಿರುವ ಪೊಲೀಸರು ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿದ್ದು, ಹೇಳಿಕೆ ದಾಖಲಿಸಿಕೊಳ್ಳಲು ಅಕ್ಟೋಬರ್​ 29ರಂದು ಹಾಜರಾಗುವಂತೆ ನಟ ಸೂರಿಗೆ ಸಿಸಿಬಿ ಸಮನ್ಸ್​ ನೀಡಿದೆ. ಪ್ರಕರಣದ ಆರೋಪಿಗಳಿಗೂ ಸಮನ್ಸ್​ ನೀಡುವ ಸಾಧ್ಯತೆ ಇದೆ.

ಸಮಾನ ಬೆಲೆಯಲ್ಲಿ ಭೂಮಿ ಕೊಂಡುಕೊಳ್ಳುವ ಭರವಸೆ ನೀಡಿ ನಿರ್ಮಾಪಕ ಅಂಬುವೆಲ್​ ಮತ್ತು ವಿಷ್ಣು ತಂದೆ ರಮೇಶ್​ ಕುಡಾವ್ಲ ಅವರು ಸೂರಿಯಿಂದ 2.70 ಕೋಟಿ ತೆಗೆದುಕೊಂಡಿದ್ದರಂತೆ. ಇದೊಂದೆ ಆರೋಪವಲ್ಲದೆ, 2015ರ ವೀರ ಧೀರ ಸೂರನ್ ಚಿತ್ರದ 40 ಲಕ್ಷ ಸಂಭಾವನೆಯನ್ನೂ ಸಹ ಇನ್ನೂ ಕೊಟ್ಟಿಲ್ಲ ಎಂದು ದೂರಿದ್ದಾರೆ. ​​

ನಟ ಸೂರಿ, ವಿಷ್ಣು ವಿಶಾಲ್​ರೊಂದಿಗೆ ವೆನ್ನಿಲಾ ಕಬಡಿ ಕುಜು, ವೆಲೈನ್ನು ವಂತುಟ್ಟ ವೆಲ್ಲಿಕ್ಕಾರನ್​ ಮತ್ತು ಕಥಾನಾಯಗನ್​ ಸೇರಿದಂತೆ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.

ದೂರಿನ ಬೆನ್ನಲ್ಲೇ ಟ್ವೀಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ವಿಷ್ಣು, ನನ್ನ ತಂದೆ ಹಾಗೂ ನನ್ನ ವಿರುದ್ಧ ಬಂದಿರುವ ತಪ್ಪು ಆರೋಪ ಕೇಳಿ ನಿಜಕ್ಕೂ ನನಗೆ ನೋವಾಯಿತು. ನಿಸ್ಸಂಶಯವಾಗಿ ಇದರಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಕಾರ್ಯನಿರ್ವಹಿಸುತ್ತಿವೆ ಎಂದಿರುವ ವಿಷ್ಣು, 2017ರಲ್ಲಿ ಕವಾರಿಮಾನ್ ಪರಂಬರೈ ಚಿತ್ರಕ್ಕಾಗಿ ವಿಷ್ಣು ವಿಶಾಲ್ ಸ್ಟುಡಿಯೋಜ್ ಸೂರಿಗೆ ಮುಂಗಡ ಹಣವನ್ನು ಪಾವತಿಸಿದೆ. ಆದರೆ, ಕಾರಣಾಂತರಗಳಿಂದ ಚಿತ್ರೀಕರಣ ಮುಂದುವರಿಯಲಿಲ್ಲ. ಹೀಗಾಗಿ ಸೂರಿ ಅವರು ಮುಂಗಡವನ್ನು ಮರುಪಾವತಿಸಬೇಕಾಗಿದೆ ಎಂದು ಅವರ ವಿರುದ್ಧವೇ ಆರೋಪ ಮಾಡಿದ್ದಾರೆ.

ನಮಗೆ ಕಾನೂನಿನ ಮೇಲೆ ನಂಬಿಕೆ ಇದೆ ಎಂದಿರುವ ವಿಷ್ಣು, ಸತ್ಯಾಸತ್ಯತೆ ತಿಳಿದು ಮಾಧ್ಯಮದವರು ವರದಿ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಸತ್ಯ ಹೊರಗೆ ಬರುವವರೆಗೂ ಕಾಯಿರಿ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net