

ರೀಲ್‌ನಲ್ಲಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡವರಲ್ಲ, ರಿಯಲ್ ಲೈಫ್ನಲ್ಲಿ ಬಹಳ ಸಹೃದಯರಾಗಿರ‌್ತಾರೆ ಎಂಬ ಮಾತು ಮತ್ತೊಮ್ಮೆ ಪ್ರೂವ್ ಆಗಿದೆ. ಈಗ್ಯಾಕೆ ಈ ಮಾತು ಎಂದರೆ, ಆನ್‌ಸ್ಕ್ರೀನ್‌ನಲ್ಲಿ ಸಾಕಷ್ಟು ಕೆಟ್ಟ ಕೆಲಸಗಳನ್ನು ಮಾಡಿರುವ ಸೋನು ಸೂದ್, ನಿಜಜೀವನದಲ್ಲಿ ಜನ ಮೆಚ್ಚುವಂತಹ ಕೆಲಸವನ್ನು ಮಾಡಿದ್ದಾರೆ.
ಇಷ್ಟಕ್ಕೂ ಸೋನು ಏನು ಮಾಡಿದ್ದಾರೆ ಎಂಬ ಕುತೂಹಲ ಕಾಡುವುದು ಸಹಜ. ಅದಕ್ಕೆ ಉತ್ತರ ಇಲ್ಲಿದೆ. ಸೋನು ನಟನೆಯ ಜತೆಗೆ ಹೋಟೆಲ್ ಬ್ಯುಸಿನೆಸ್‌ನಲ್ಲೂ ಸಕ್ರಿಯರಾಗಿದ್ದಾರೆ. ಕರೊನಾದಿಂದ ಇಡೀ ದೇಶವೇ ಲಾಕ್‌ಡೌನ್ ಆಗಿರುವ ಹಿನ್ನೆಲೆಯಲ್ಲಿ, ವೈದ್ಯಕೀಯ ಸಿಬ್ಬಂದಿಗೆ ಅವರು ತಮ್ಮ ಹೋಟೆಲ್ ಬಿಟ್ಟು ಕೊಟ್ಟಿದ್ದಾರೆ.
ಕರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ಹಗಲಿರುಳೆನ್ನದಂತೆ ಭಾಗವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಸೋನು ಸೂದ್, ಮುಂಬೈನ ಜುಹೂನಲ್ಲಿರುವ ತಮ್ಮ ಹೋಟೆಲ್ ಬಿಟ್ಟುಕೊಟ್ಟಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ನಿಜವಾದ ಹೀರೋಗಳೆಂದರೆ ವೈದ್ಯರು, ನರ್ಸ್‌ಗಳು ಮತ್ತು ಇತರ ವೈದ್ಯಕೀಯ ಸಿಬ್ಬಂದಿ. ಲಕ್ಷಾಂತರ ಜನರನ್ನು ಉಳಿಸುವುದಕ್ಕೆ ಅವರು ಹಗಲು-ರಾತ್ರಿ ಶ್ರಮ ಪಡುತ್ತಿದ್ದಾರೆ. ಅಂಥವರಿಗೆ ಹೋಟೆಲ್ ಬಿಟ್ಟುಕೊಡುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಯಾವುದೇ ಕೆಲಸಕ್ಕಾದರೂ ಅವರು ಅದನ್ನು ಬಳಸಿಕೊಳ್ಳಬಹುದು’ ಎಂದು ಸೋನು ಹೇಳಿದ್ದಾರೆ.
ಇದಕ್ಕೂ ಮುನ್ನ ಕ್ವಾರಂಟೈನ್ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಅನುವು ಮಾಡಿಕೊಡುವ ಉದ್ದೇಶದಿಂದ, ಶಾರೂಖ್ ಖಾನ್ ತಮ್ಮ ನಾಲ್ಕು ಮಹಡಿಯ ಕಚೇರಿಯನ್ನು ಮುಂಬೈ ಮಹಾನಗರ ಪಾಲಿಕೆ ನೀಡುವುದಾಗಿ ಹೇಳಿದ್ದರು. ಈ ಕಟ್ಟದಲ್ಲಿ ಮಕ್ಕಳು, ಮಹಿಳೆಯರು ಮತ್ತು ವೃದ್ಧರಿಗೆ ಚಿಕಿತ್ಸೆ ನೀಡಬಹುದು ಎಂದು ಹೇಳಿದ್ದರು.