

| ಮಂಜು ಕೊಟಗುಣಸಿ
ಸೋನು ಗೌಡಗೆ, ಕರೊನಾದಿಂದಾಗಿ ಭವಿಷ್ಯವೇ ಅಸ್ಪಷ್ಟ ಎಂಬಂತೆ ಗೋಚರವಾಗುತ್ತಿದೆ. ಒಂದಷ್ಟು ಭಯದಲ್ಲೇ ದಿನದೂಡುತ್ತಿದ್ದಾರೆ. ಅದಕ್ಕೆ ಕಾರಣಗಳನ್ನೂ ಅವರೇ ನೀಡಿದ್ದಾರೆ.
ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ಸಿನಿಮಾರಂಗದ ಎಲ್ಲ ಕೆಲಸಗಳಿಗೆ ಪೆಟ್ಟು ಬಿದ್ದಿದೆ. ಒಂದು ವೈರಸ್ನಿಂದ ಸಿನಿಮಾ ಸರಪಳಿಯೇ ಸಡಿಲಗೊಳ್ಳುತ್ತಿದೆ. ಇಂಥ ಹೊತ್ತಲ್ಲಿ ಮತ್ತೆ ಸಿನಿಮಾ ಅನ್ನೋ ಕಟೌಟ್ ಗಟ್ಟಿಯಾಗಿ ನಿಲ್ಲಬೇಕೆಂದರೆ, ಏನಿಲ್ಲ ಅಂದರೂ ಕನಿಷ್ಟ ಒಂದು ವರ್ಷದ ಅವಧಿಯಾದರೂ ಬೇಕು. ಹಾಗಾದರೆ, ಚಿತ್ರರಂಗವನ್ನೇ ನಂಬಿ ಬದುಕುತ್ತಿರುವವರ ಕಥೆ ಏನು? ಹೌದು, ಇಂಥ ಆತಂಕದ ಸ್ಥಿತಿಯನ್ನು ಸ್ಯಾಂಡಲ್ವುಡ್ ನಟಿ ಸೋನು ಗೌಡ ನೆನಪಿಸಿಕೊಂಡು ಭಯಭೀತಗೊಂಡಿದ್ದಾರೆ.
ಭವಿಷ್ಯ ನೆನೆದರೆ ಭಯ: ಸದ್ಯ ಮನೆಯಲ್ಲಿಯೇ ಇರುವ ಸೋನು ಗೌಡ, ಲಾಕ್ಡೌನ್ನಿಂದಾಗುವ ಪರಿಣಾಮವನ್ನು ಮನೆಯಲ್ಲಿದ್ದಯಕೊಂಡೆ ಲೆಕ್ಕಹಾಕುತ್ತಿದ್ದಾರೆ. ಮುಂದೇನು ಎಂಬ ಲೆಕ್ಕಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ‘ಪರಿಸ್ಥಿತಿ ಹೀಗೆ ಮುಂದುವರಿದರೆ, ಸಿನಿಮಾವನ್ನೇ ಬದುಕುವ ನಮ್ಮಂಥ ಕಲಾವಿದರ ಪಾಡೇನು? ಮುಂದಿನ ದಿನಗಳು ನಿಜಕ್ಕೂ ಸವಾಲಾಗಿ ಪರಿಣಮಿಸಿಲಿದೆ. ಕಷ್ಟಕರವಾದ ಜೀವನವನ್ನು ಸಾಗಿಸಬೇಕಾಗುವ ಸಂದರ್ಭ ಎದುರಾದರೂ ಅಚ್ಚರಿ ಇಲ್ಲ. ಈಗಾಗಲೇ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನಮ್ಮಲ್ಲಿಯೂ ಅಂಥ ಕೆಲಸ ಶುರುವಾದರೆ, ಏನೆಲ್ಲ ಆಗಬಹುದು ಎಂದುಕೊಳ್ಳುತ್ತಿದ್ದೇನೆ’ ಎನ್ನುವ ಸೋನು, ನಿರ್ವಪಕರನ್ನು ನೆನೆದು ಮರುಕ ವ್ಯಕ್ತಪಡಿಸುತ್ತಾರೆ. ‘ನಾವೆನೋ ಹೇಗೋ ಇರಬಹುದು. ಆದರೆ, ದೊಡ್ಡ ದೊಡ್ಡ ಬಜೆಟ್ನ ಸಿನಿಮಾಗಳಿಗೆ ಬಂಡವಾಳ ಹೂಡಿರುವ ನಿರ್ವಪಕರ ಸ್ಥಿತಿ ಇಂಥ ಹೊತ್ತಲ್ಲಿ ಹೇಗಾಗಿರಬೇಡ? ಎಲ್ಲವೂ ಓಕೆ, ಚಿತ್ರೀಕರಣ ಮಾಡಿಕೊಳ್ಳಿ ಎಂದು ಸರ್ಕಾರ ಹೇಳಿದರೂ, ಸೆಟ್ನಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾದ ಪೂರ್ತಿ ಜವಾಬ್ದಾರಿ ನಿರ್ವಪಕರದ್ದೇ. ಒಂದು ಜೀವಕ್ಕೂ ಹಾನಿಯಾದರೆ, ಅದಕ್ಕೆ ನಿರ್ವಪಕನೇ ನೇರ ಹೊಣೆಯಾಗುತ್ತಾನೆ. ಹಾಗಾದರೆ, ಮುಂದೇನು? ಸದ್ಯಕ್ಕೆ ಸರ್ಕಾರವೇ ಇದೆಲ್ಲದಕ್ಕೂ ಉತ್ತರಿಸಬೇಕಿದೆ’ ಎನ್ನುತ್ತಾರೆ ಸೋನು. ಜೀವನಾನುಭವದ
ನೈಜ ದರ್ಶನ: ಈ ಲಾಕ್ಡೌನ್ನಿಂದಾಗಿ ಮನೆಯ ಆಗುಹೋಗುಗಳ ಬಗ್ಗೆ ಗಮನ ಹರಿಸಿದ್ದಾರಂತೆ ಸೋನು. ‘ಇಷ್ಟು ದಿನ ನಾನಾಯ್ತು ನನ್ನ ಕೆಲಸವಾಯ್ತು ಎಂದಷ್ಟೇ ಇದ್ದೆ. ಏನಾದರೂ ಹೇಳಿದರೆ, ಅದನ್ನು ಅರ್ಧ ಕೇಳಿ ಅಲ್ಲೇ ಬಿಟ್ಟು ಹೋಗುತ್ತಿದ್ದೆ. ಈಗ ಹಾಗಲ್ಲ, ಏನೇ ಆದರೂ ಅದನ್ನು ಕುಟುಂಬದೊಟ್ಟಿಗೆ ಕುಳಿತು, ರ್ಚಚಿಸಿ ಒಂದು ನಿರ್ಧಾರಕ್ಕೆ ಬರುತ್ತೇನೆ. ಮುಂದಿನ ದಿನಗಳಲ್ಲಿ ಇದನ್ನು ಅಳವಡಿಸಿಕೊಂಡು ಹೋಗುತ್ತೇನೆ’ ಎನ್ನುತ್ತಾರೆ ಸೋನು. ಇನ್ನು ಈ ಲಾಕ್ಡೌನ್ ಸಮಯದಲ್ಲಿ ಸಾಕಷ್ಟು ನಿದ್ದೆ ಮಾಡಿರುವ ಅವರು, ಒಂದಷ್ಟು ಓದು, ಪೇಂಟಿಂಗ್, ಅಡುಗೆ, ಸಿನಿಮಾ ಸೇರಿ ಹಲವು ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರಂತೆ.
ಸಿನಿಮಾಗಳು ಈ ಹಂತದಲ್ಲಿವೆ: ಪುನೀತ್ ರಾಜ್ಕುಮಾರ್ ಅಭಿನಯದ ‘ಯುವರತ್ನ’ ಚಿತ್ರದಲ್ಲಿ ಸೋನು ನಟಿಸಿದ್ದಾರೆ. ಈಗಾಗಲೇ ಆ ಚಿತ್ರದಲ್ಲಿ ಅವರ ಭಾಗದ ಶೂಟಿಂಗ್ ಮುಕ್ತಾಯವಾಗಿದೆ. ‘ಶಬ್ಧ’ ಚಿತ್ರದ ಒಂದು ಹಂತದ ಶೂಟಿಂಗ್ ಮುಗಿಸಿದ್ದಾರೆ. ‘ಶಾಲಿನಿ ಐಎಎಸ್’ ಡಬ್ಬಿಂಗ್ ಹಂತದಲಿದೆ. ಏಪ್ರಿಲ್ 10ಕ್ಕೆ ಹೊಸ ತಂಡದೊಟ್ಟಿಗಿನ ಸಿನಿಮಾ ಶುರುವಾಗಬೇಕಿತ್ತು. ಆದರೆ, ಆ ತಂಡದಿಂದ ಯಾವುದೇ ಮಾಹಿತಿ ಸದ್ಯಕ್ಕಿಲ್ಲವಂತೆ. ದಿಗಂತ್ ಜತೆಗಿನ ಸಿನಿಮಾವೊಂದರಲ್ಲಿಯೂ ಸೋನು ನಟಿಸಲಿದ್ದಾರೆ ಎನ್ನಲಾಗಿತ್ತಾದರೂ, ಅದಿನ್ನು ಮಾತುಕತೆ ಹಂತದಲ್ಲಿದೆ ಎನ್ನುತ್ತಾರೆ.
ಕರೊನಾ ಜತೆಗೆ ಬದುಕುವುದನ್ನು ಕಲಿಯುವುದು ಅನಿವಾರ್ಯ: ‘ದಿನದಿಂದ ದಿನಕ್ಕೆ ಕರೊನಾ ಪ್ರಕರಣಗಳ ಸಂಖ್ಯೆ ಏರಿಯಾಗುತ್ತಲೇ ಇದೆ. ಇದು ಭವಿಷ್ಯದ ದೃಷ್ಟಿಯಿಂದ ತುಂಬ ಅಪಾಯಕಾರಿ’ ಎನ್ನುವ ಸೋನು, ‘ಲಾಕ್ಡೌನ್ ಶುರುವಾದ ಬಳಿಕ ಮೊದಲೊಂದಷ್ಟು ದಿನ ಎಂಜಾಯ್ ಮಾಡಿದೆ. ಆದರೆ, ದಿನಗಳೆದಂತೆ ಲಾಕ್ಡೌನ್ ವಿಸ್ತರಣೆಯಾಗುತ್ತಿದ್ದಂತೆ ಆ ಎಂಜಾಯ್ಮೆಂಟ್ ಕಡಿಮೆ ಆಗಿ ಆತಂಕ ಹೆಚ್ಚಾಗತೊಡಗಿತು. ಇಲ್ಲಿಯವರೆಗೂ ಮುಂದಿನ ದಿನಗಳ ಬಗ್ಗೆ ಸ್ವಲ್ಪವೂ ವಿಚಾರ ಮಾಡಿರಲಿಲ್ಲ. ಇದೀಗ ಕರೊನಾ ಮುಂದಿನದನ್ನು ವಿಚಾರ ಮಾಡುವಂತೆ ಮಾಡುತ್ತಿದೆ. ಕರೊನಾದ ಜತೆಗೆ ಬದುಕುವುದನ್ನು ಕಲಿಯಬೇಕು. ಅದರೊಂದಿಗೆ ಸಮರಕ್ಕಿಳಿಯದೆ, ಉಡಾಫೆ ಬದಿಗಿಟ್ಟು, ಮುನ್ನೆಚ್ಚರಿಕಾ ಕ್ರಮಗಳನ್ನು ಚಾಚೂತಪ್ಪದೆ ಪಾಲಿಸಬೇಕು. ಆರೋಗ್ಯ, ಉತ್ತಮ ಆಹಾರ ಮತ್ತು ವ್ಯಾಯಾಮವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಹೈಜೀನ್ ಆಗಿರಬೇಕು’ ಎಂದು ಒಂದಷ್ಟು ಸಲಹೆ ನೀಡುತ್ತಾರೆ.