

ಇಲ್ಲಿಯವರೆಗೂ ಸಿನಿಮಾಗಳಲ್ಲಿ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳದ ನಟಿ ಸೋನು ಗೌಡ, ಇದೀಗ "ವಾರ್ಡ್ 126' ಚಿತ್ರದಲ್ಲಿ ಅದನ್ನೂ ನಿಭಾಯಿಸಿದ್ದಾರೆ. ಅದಕ್ಕೆ ಸಾಕ್ಷ$್ಯ ಎಂಬಂತೆ ಇತ್ತೀಚೆಗೆ "ವಾರ್ಡ್ 126' ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಹಿಂದೆಂದೂ ಕಾಣದ ರೀತಿಯಲ್ಲಿ ಸೋನು ಎದುರಾಗಿದ್ದಾರೆ.
ತಮಿಳಿನಲ್ಲಿ ಸಿದ್ಧವಾಗಿರುವ ಈ ಚಿತ್ರವನ್ನು ಸಾಯಿ ಸೆಲ್ವ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಪಾತ್ರದ ಬಗ್ಗೆ ಮಾಹಿತಿ ನೀಡುವ ನಟಿ ಸೋನು, "ನನ್ನ ಪಾಲಿಗೆ ಇದೊಂದು ವಿಶೇಷ ಪಾತ್ರ. ಬೋಲ್ಡ್ ಆಗಿ ಕಾಣಿಸಿಕೊಳ್ಳುವುದರ ಜತೆಗೆ ಸಿಗರೇಟ್ ಸೇದುವ ದೃಶ್ಯಗಳೂ ಈ ಸಿನಿಮಾದಲ್ಲಿವೆ. ಬೇರೆಯವರನ್ನು ಮರುಳು ಮಾಡಿ ಬುಟ್ಟಿಗೆ ಹಾಕುವ ಹುಡುಗಿ, ತಾನೇ ಆ ಮೋಸದ ಬುಟ್ಟಿಗೆ ಬಿದ್ದರೆ ಹೇಗೆ ಅದರಿಂದ ಹೊರಬರುತ್ತಾಳೆ ಎಂಬುದೇ ನನ್ನ ಪಾತ್ರದ ವಿವರಣೆ. ಬೋಲ್ಡ್ ದೃಶ್ಯಗಳು ಸಿನಿಮಾದ ಕಥೆಗೆ ಪೂರಕವಾಗಿವೆ. ಅದೇ ರೀತಿ ನೆಗೆಟಿವ್ ಶೇಡ್ನಲ್ಲಿ ನನ್ನ ಪಾತ್ರ ಸಾಗಲಿರುವುದ ರಿಂದ, ತಿರುವು ನೀಡುತ್ತಲೇ ಸಾಗುತ್ತದೆ. 2 ಭಾಗಗಳಲ್ಲಿ ಚಿತ್ರ ಬಿಡುಗಡೆ ಆಗಲಿದೆ. ಮೊದಲ ಭಾಗದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ನಾನು, 2ನೇ ಭಾಗದಲ್ಲಿ ಹೆಚ್ಚು ಸ್ಕ್ರೀನ್ ಸ್ಪೇಸ್ ಸಿಕ್ಕಿದೆ ' ಎನ್ನುತ್ತಾರೆ.
"ವಾರ್ಡ್ 126' ತಮಿಳಿನಲ್ಲಿ ಸಿದ್ಧವಾದ ಸಿನಿಮಾ. ಬಹುತಾರಾಗಣದ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಈ ಚಿತ್ರ ಒಟ್ಟು 2 ಭಾಗಗಳಲ್ಲಿ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಬಹುತೇಕ ಶೂಟಿಂಗ್ ಮುಗಿದಿದ್ದು, ಸೆಪ್ಟಂಬರ್ ವೇಳೆಗೆ ಮೊದಲ ಭಾಗ, ನವೆಂಬರ್ನಲ್ಲಿ 2ನೇ ಭಾಗ ಬಿಡುಗಡೆ ಆಗುವ ಸಾಧ್ಯತೆ ಇದೆ. ಇದಲ್ಲದೆ, ಮಲಯಾಳಂನಲ್ಲಿಯೂ ಒಂದು ಚಿತ್ರದಲ್ಲಿ ನಟಿಸುತ್ತಿದ್ದು, ಲಾಕ್ಡೌನ್ ಹಿನ್ನೆಲೆಯಲ್ಲಿ ಅದರ ಶೂಟಿಂಗ್ ಮುಂದೂಡಲಾಗಿದೆ.