'ಭಾಗ್​ ಮಿಲ್ಕಾ ಭಾಗ್​' ಚಿತ್ರದಲ್ಲಿ ನಟಿಸಲು ಸೋನಮ್​ ಪಡೆದ ಸಂಭಾವನೆ 11 ರೂ ಅಂತೆ ...

Sonam Kapoor - Final
Published on

ಮುಂಬೈ: ನಟ-ನಟಿಯರು ತಾವು ಕೇಳಿದ ಸಂಭಾವನೆ ಕೊಡದೇ ಇದ್ದರೆ ಚಿತ್ರದಲ್ಲಿ ನಟಿಸದಿರುವ ಅದೆಷ್ಟೋ ಉದಾಹರಣೆಗಳಿವೆ. ಒಂದು ಪಕ್ಷ ಕೇಳಿದ ಸಂಭಾವನೆ ಕೊಡುವುದು ತಡವಾದರೂ, ಚಿತ್ರತಂಡದವರನ್ನು ಹೈರಾಣು ಮಾಡುವ ಹಲವರಿದ್ದಾರೆ. ಇನ್ನೊಂದು ಕಡೆ ಕಥೆ ಇಷ್ಟವಾದರೆ, ಸಂಭಾವನೆ ಪಡೆಯದೆ ಫ್ರೀಯಾಗಿ ಅಥವಾ ಕಡಿಮೆ ಸಂಭಾವನೆ ಪಡೆದು ನಟಿಸುವ ಕಲಾವಿದರು ಸಹ ಇದ್ದಾರೆ. ಆ ಸಾಲಿಗೆ ಸೋನಂ ಕಪೂರ್ ಸಹ ಸೇರಿರುವುದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ.

ಸೋನಮ್​ ಕಪೂರ್​ ಕೆಲವು ವರ್ಷಗಳ ಹಿಂದೆ 'ಭಾಗ್​ ಮಿಲ್ಕಾ ಭಾಗ್​' ಚಿತ್ರದಲ್ಲಿ ಫರ್ಹಾನ್​ ಅಖ್ತರ್​ಗೆ ನಾಯಕಿಯಾಗಿ ನಟಿಸಿದ್ದು ನೆನಪಿರಬಹುದು. ಆ ಚಿತ್ರದಲ್ಲಿ ನಟಿಸುವುದಕ್ಕೆ ಅವರು ಕೇವಲ 11 ರೂ. ಸಂಭಾವನೆ ಪಡೆದಿದ್ದರು ಎಂಬ ವಿಷಯ ಇದೀಗ ಬಹಿರಂಗವಾಗಿದೆ.

ಇತ್ತೀಚೆಗೆ ನಿರ್ದೇಶಕ ರಾಕೇಶ್​ ಓಂಪ್ರಕಾಶ್​ ಮೆಹ್ರಾ, 'ದಿ ಸ್ಟ್ರೇಂಜರ್​ ಇನ್​ ದಿ ಮಿರರ್​' ಹೆಸರಿನ ಆತ್ಮಚರಿತ್ರೆ ಬರೆದಿದ್ದಾರೆ. ಇದರಲ್ಲಿ ಅವರು ಹಲವು ರೋಚಕ ಮತ್ತು ಸ್ವಾರಸ್ಯಕರ ವಿಷಯಗಳನ್ನು ಬರೆದುಕೊಂಡಿದ್ದಾರೆ. ಈ ಪೈಕಿ, 'ಭಾಗ್​ ಮಿಲ್ಕಾ ಭಾಗ್​' ಚಿತ್ರದಲ್ಲಿ ನಟಿಸುವುದಕ್ಕೆ ಸೋಣಮ್​ ಕೇವಲ 11 ರೂ.ಗಳನ್ನು ಪಡೆದಿದ್ದರು ಎಂದು ಹೇಳಿದ್ದಾರೆ.

'ಅದಕ್ಕೂ ಮುನ್ನ ಸೋನಮ್​ ನನ್ನ ನಿರ್ದೇಶನದ 'ಡೆಲ್ಲಿ 6' ಚಿತ್ರದಲ್ಲಿ ನಟಿಸಿದ್ದರು. ಆ ಸಂದರ್ಭದಲ್ಲಿ ನಮ್ಮಿಬ್ಬರ ನಡುವೆ ಒಳ್ಳೆಯ ಸ್ನೇಹ ಬೆಳೆದಿತ್ತು. 'ಭಾಗ್​ ಮಿಲ್ಕಾ ಭಾಗ್​' ಮಾಡುವಾಗ ನಾಯಕಿ ಪಾತ್ರಕ್ಕೆ ಯಾರನ್ನು ಕೇಳಬೇಕು ಎಂಬ ಜಿಜ್ನಾಸೆ ಇತ್ತು. ಏಕೆಂದರೆ, ಚಿತ್ರದಲ್ಲಿ ಆಕೆಯದು ಬಹಳ ಚಿಕ್ಕ ಪಾತ್ರ. ಹೆಚ್ಚೆಂದರೆ, 10-11 ನಿಮಿಷಗಳ ಕಾಲ ಬರುವಂತಹ ಪಾತ್ರ. ಈ ಪಾತ್ರ ಮಾಡುವುದಕ್ಕೆ ಯಾರೂ ಒಪ್ಪುತ್ತಿರಲಿಲ್ಲ. ಆದರೆ, ಸೊನಮ್​ ಒಪ್ಪಿದರು. ಆಕೆಗೆ ಇದೊಂದು ಪ್ರೇಮಕಥೆಯಲ್ಲ, ಒಬ್ಬ ಕ್ರೀಡಾಪಟುವಿನ ಕಥೆ ಎಂಬುದು ಗೊತ್ತಿತ್ತು. ದೇಶದ ವಿಭಜನೆಯಿಂದ ಆಘಾತಕ್ಕೊಳಗಾದ ಅಕ್ಕ-ತಮ್ಮನ ಕಥೆ ಎಂದು ಗೊತ್ತಿತ್ತು. ಹಾಗಾಗಿಯೇ, ತಮ್ಮ ಪಾತ್ರ ಚಿಕ್ಕದಾಗಿದೆ ಎಂದು ಅರ್ಥ ಮಾಡಿಕೊಂಡ ಅವರು, ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡರು. ಕೇವಲ 11 ರೂ. ಸಂಭಾವನೆ ಪಡೆದು, ಏಳು ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು' ಎಂದು ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net