

ಬೆಂಗಳೂರು: ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಬಯೋಪಿಕ್ಗಳು ಕಡಿಮೆಯೇ. ಇದೀಗ, ‘ಭಾರತದ ಕೋಗಿಲೆ’ ಎಂದೇ ಜನಪ್ರಿಯರಾದ ಸರೋಜಿನಿ ನಾಯ್ಡು ಕುರಿತು ಒಂದು ಬಯೋಪಿಕ್ ತಯಾರಾಗುತ್ತಿದೆ. ಸರೋಜಿನಿ ನಾಯ್ಡು ಅವರ ಪಾತ್ರವನ್ನು ಸೋನಲ್ ಮಾಂತೇರೋ ನಿರ್ವಹಿಸುತ್ತಿದ್ದು, ಈ ಚಿತ್ರವನ್ನು ವಿನಯ್ ಚಂದ್ರ ನಿರ್ದೇಶಿಸಲಿದ್ದಾರೆ. ಈ ಚಿತ್ರದ ಹೆಸರು ‘ಸರೋಜಿನಿ’. ಧೀರಜ್ ಮಿಶ್ರಾ ಅವರ ಕಥೆಯನ್ನು ಆಧರಿಸಿದ ಈ ಚಿತ್ರದಲ್ಲಿ ಸರೋಜಿನಿ ನಾಯ್ಡು ಅವರ ಜೀವನದ ವಿವಿಧ ಕಾಲಘಟ್ಟಗಳನ್ನು ಹಿಡಿದಿಡಲಾಗುತ್ತದಂತೆ.
ಈ ಕುರಿತು ಮಾತನಾಡುವ ವಿನಯ್, ‘ಇಲ್ಲಿ ಸರೋಜಿನಿ ನಾಯ್ಡು ಅವರ ಗೊತ್ತಿಲ್ಲದ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದೇವೆ. ಅವರ ಖಾಸಗೀ ಜೀವನದ ಜತೆಗೆ, ಸಾರ್ವಜನಿಕ ಜೀವನದ ಹಲವು ವಿಷಯಗಳನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ’ ಎನ್ನುತ್ತಾರೆ. ಸೋನಲ್ ಮಾಂತೇರೋಗೆ ಜೀವನದಲ್ಲೊಮ್ಮೆ ಬಯೋಪಿಕ್ನಲ್ಲಿ ನಟಿಸಬೇಕು ಎಂಬ ಆಸೆ ಇತ್ತಂತೆ. ಅದು ಇಷ್ಟು ಬೇಗ ಈಡೇರಿದ್ದರ ಬಗ್ಗೆ ಖುಷಿ ಇದೆ. ‘ಸರೋಜಿನಿ ಅವರ ಚಿಕ್ಕವಯಸ್ಸಿನ ಪಾತ್ರ ಮಾಡುತ್ತಿದ್ದೇನೆ. ಅವರ ಕಾಲೇಜಿನ ದಿನಗಳು ಮತ್ತು ರಾಜಕೀಯಕ್ಕೆ ಎಂಟ್ರಿ ಕೊಡುವುದಕ್ಕಿಂತ ಮುಂಚಿನ ಪಾತ್ರ ಮಾಡುತ್ತಿದ್ದೇನೆ’ ಎನ್ನುತ್ತಾರೆ.
ಸರೋಜಿನಿ ನಾಯ್ಡು ಅವರ ಚಿಕ್ಕ ವಯಸ್ಸಿನ ಪಾತ್ರವನ್ನು ಸೋನಲ್ ಮಾಂತೇರೋ ಮಾಡಿದರೆ, ಹಿರಿವಯಸ್ಸಿನ ಪಾತ್ರದಲ್ಲಿ ಶಾಂತಿಪ್ರಿಯ ಕಾಣಿಸಿಕೊಳ್ಳುತ್ತಿ ದ್ದಾರೆ. ತೆಲುಗು ಮತ್ತು ಹಿಂದಿ ಚಿತ್ರರಂಗಗಳಲ್ಲಿ ಜನಪ್ರಿಯ ನಾಯಕಿಯಾಗಿದ್ದ ಶಾಂತಿಪ್ರಿಯ, ಈ ಚಿತ್ರದ ಮೂಲಕ 28 ವರ್ಷಗಳ ನಂತರ ಅಭಿನಯಕ್ಕೆ ವಾಪಸಾಗುತ್ತಿದ್ದಾರೆ. ಒಂದೊಳ್ಳೆಯ ಪಾತ್ರ ಸಿಕ್ಕಿದ್ದು, ತಮ್ಮ ಶಕ್ತಿಮೀರಿ ಜೀವ ತುಂಬುವುದಾಗಿ ಹೇಳುತ್ತಾರೆ.