

ಪಾಕಿಸ್ತಾನ ಮೂಲದ ಬಾಲಿವುಡ್ ನಟಿ ಸದ್ಯ ಅಮೆರಿಕಾದಲ್ಲಿ ಸೆಟಲ್ ಆಗಿರುವ ಸೋಮಿ ಅಲಿ ಸಾಮಾಜಿಕ ಜಾಲತಾಣದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ. ಇನ್ಸ್ಟಾಗ್ರಾಮ್ಲ್ಲಿ ಸಲ್ಮಾನ್ ಖಾನ್ ನಟಿಸಿರುವ ‘ಮೈನೆ ಪ್ಯಾರ್ ಕಿಯಾ’ ಚಿತ್ರದ ಪೋಸ್ಟರ್ ಹಂಚಿಕೊಂಡು, ‘ಆತ ಮಹಿಳಾ ಪೀಡಕ. ನನಗೆ ಮಾತ್ರವಲ್ಲ ಹಲವು ಹೆಣ್ಣುಮಕ್ಕಳನ್ನು ಪೀಡಿಸಿದ್ದಾನೆ. ಆತನ ಆರಾಧನೆಯನ್ನು ನಿಲ್ಲಿಸಿ. ಮತ್ತೊಬ್ಬರನ್ನು ಹಿಂಸಿಸಿ ಆನಂದಿಸುತ್ತಾನೆ. ನಿಮಗೆ ಆತನ ಬಗ್ಗೆ ಗೊತ್ತಿಲ್ಲ..’ ಎಂದು ಬರೆದುಕೊಂಡಿದ್ದಾರೆ. ಅದು ನಟ ಸಲ್ಮಾನ್ ಖಾನ್ ಕುರಿತ ಪೋಸ್ಟ್ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
ಸೋಮಿ ಈ ರೀತಿ ಬರೆದುಕೊಂಡಿರುವುದು ಇದೇ ಮೊದಲಲ್ಲ. ಬದಲಾಗಿ ಕೆಲ ತಿಂಗಳ ಹಿಂದಷ್ಟೇ ಅವರು, ‘ನಿನ್ನ ನಿಜಬಣ್ಣ ಬಯಲಾಗೇ ಆಗುತ್ತದೆ. ಐಶ್ವರ್ಯ ರೈ ಅವರಂತೆ ನಿನ್ನಿಂದ ದೌರ್ಜನ್ಯಕ್ಕೊಳಗಾದ ಹೆಣ್ಣುಮಕ್ಕಳು ಸತ್ಯ ಹೇಳಲಿದ್ದಾರೆ’ ಎಂದು ಬರೆದುಕೊಂಡಿದ್ದರು. 1991ರಿಂದ 1999ರವರೆಗೆ ಸೋಮಿ, ಸಲ್ಮಾನ್ ಇಬ್ಬರೂ ಪ್ರೀತಿಸುತ್ತಿದ್ದರು. ಆ ಬಳಿಕ ಬ್ರೇಕಪ್ ಆಗಿ ಸೋಮಿ ಅಮೆರಿಕಾಗೆ ತೆರಳಿದ್ದರು. ಆದರೂ ಆಗೊಮ್ಮೆ ಈಗೊಮ್ಮೆ ಸಲ್ಮಾನ್ ಬಗ್ಗೆ ಮಾತನಾಡುವ ಸೋಮಿ, ಕೆಲ ವರ್ಷಗಳ ಹಿಂದೆ, ‘ಆತನೊಂದಿಗೆ ಬ್ರೇಕಪ್ ಆಗಿ 20 ವರ್ಷಗಳಾಗಿವೆ. ಆತ ನನಗೆ ವಂಚಿಸಿದ. ಹೀಗಾಗಿ ನಾನು ಬ್ರೇಕಪ್ ಮಾಡಿಕೊಂಡೆ. ಆತನಿಗಾಗಿಯೇ ನಾನು ಮುಂಬೈಗೆ ಬಂದಿದ್ದು. ಆದರೆ ಆತನೇ ಇಲ್ಲದಿರುವಾಗ ಇಲ್ಲಿದ್ದು ಮಾಡುವುದೇನು ಎಂದು ವಾಪಸ್ಸಾದೆ’ ಎಂದು ಹೇಳಿಕೊಂಡಿದ್ದರು. -ಏಜೆನ್ಸೀಸ್