

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
"ಆಕಾಶ್', "ಅರಸು', "ಅಭಯ್', "ಮೆರವಣಿಗೆ' ಸೇರಿ ಹಲವು ಚಿತ್ರಗಳನ್ನು ನಿರ್ದೇಶಿಸಿರುವ ಮಹೇಶ್ ಬಾಬು ಕಳೆದ ವರ್ಷ "ಅಪರೂಪ' ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದರು. ಇದೀಗ ಹೊಸ ಸಿನಿಮಾ ಮೂಲಕ ಕಿರುತೆರೆ ನಟ ಸ್ಮೈಲ್ ಗುರು ಖ್ಯಾತಿಯ ರಕ್ಷಿತ್ರನ್ನು ಬೆಳ್ಳಿತೆರೆಗೆ ನಾಯಕನಾಗಿ ಪರಿಚಯಿಸುತ್ತಿದ್ದಾರೆ.
ಇತ್ತೀಚೆಗಷ್ಟೆ ಚಿತ್ರದ ಮುಹೂರ್ತ ನೆರವೇರಿದ್ದು, ನಟ "ನೆನಪಿರಲಿ' ಪ್ರೇಮ್ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಿದರು. ಚಿತ್ರದ ಶೀರ್ಷಿಕೆ ಇನ್ನಷ್ಟೇ ಚಿತ್ರತಂಡ ಬಹಿರಂಗ ಮಾಡಬೇಕಿದೆ. ರತ್ಗೆ "ವೀರ ಮದಕರಿ'ಯ ಬಾಲನಟಿ ಜೆರುಶಾ ನಾಯಕಿಯಾಗಿದ್ದು, ಮತ್ತೊಬ್ಬ ನಾಯಕಿಯ ಹುಡುಕಾಟ ನಡೆಯುತ್ತಿದೆ. ಉಳಿದಂತೆ ಮಹೇಶ್ ಬಾಬು, ಸ್ಮೈಲ್ ಗುರು ರಕ್ಷಿತ್ ಕಾಂಬಿನೇಷನ್ನ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಸತ್ಯ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಸಂಕಲನವಿರಲಿದೆ.
ಖುದ್ದು ನಾಯಕ ರಕ್ಷಿತ್ ಅವರೇ ಈ ಸಿನಿಮಾಕ್ಕೆ ಕಥೆ ಬರೆದಿದ್ದು, ವಿಜಯ್ ಈಶ್ವರ್ ಸಂಭಾಷಣೆಯಲ್ಲಿ ಚಿತ್ರ ಮೂಡಿಬರಲಿದೆ. ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದ್ದು, ಮಲೆನಾಡಿನಲ್ಲಿ ಎರಡನೇ ಹಂತದ ಶೂಟಿಂಗ್ ನಡೆಸುವ ಯೋಜನೆ ಚಿತ್ರತಂಡದ್ದು.