ತುಂಬಿದ ಮಾಲ್​ನಲ್ಲಿ ಯುವಕನಿಂದ ಅಶ್ಲೀಲ ವರ್ತನೆ: ಕೊನೆಗೂ ಸತ್ಯಾಂಶ ತಿಳಿಸಿದ ನಟಿ ಸಾನಿಯಾ!

Saniya Iyyapan
ಮಲಯಾಳಂ ನಟಿ ಸಾನಿಯಾ ಅಯ್ಯಪ್ಪನ್​
Published on

ಕೊಚ್ಚಿ: ತಿಂಗಳುಗಳ ಹಿಂದೆ ಕೇರಳದ ಕೊಯಿಕ್ಕೋಡ್​ ಮಾಲ್​ನಲ್ಲಿ ನಡೆದಿದ್ದ ಕುಖ್ಯಾತ ಘಟನೆಯ ಬಗ್ಗೆ ಕೊನೆಗೂ ನಟಿ ಸಾನಿಯಾ ಅಯ್ಯಪ್ಪನ್​ ಅವರು ಬಾಯ್ಬಿಟ್ಟಿದ್ದಾರೆ. ಅಶ್ಲೀಲವಾಗಿ ವರ್ತಿಸಿದ ಯುವಕನ ಬದಲು ಅಮಾಯಕ ಯುವಕನಿಗೆ ಕಪಾಳ ಮೋಕ್ಷ ಮಾಡಿದ್ದಾರೆ ಎಂಬ ಆಕ್ರೋಶ ಸಾನಿಯಾ ವಿರುದ್ಧ ವ್ಯಕ್ತವಾಗಿತ್ತು. ಇದೀಗ ಆ ಆರೋಪಕ್ಕೆ ಸಾನಿಯಾ ಉತ್ತರ ನೀಡಿದ್ದಾರೆ.

ಧನ್ಯಾ ವರ್ಮ ಜತೆ ನಡೆದ ಸಂದರ್ಶನದಲ್ಲಿ ಮಾತನಾಡಿರುವ ಸಾನಿಯಾ, ನಾನು ತಪ್ಪಾದ ವ್ಯಕ್ತಿಯ ಮೇಲೆ ಕೈ ಮಾಡಿಲ್ಲ. ಅದೇ ಯುವಕ ನನ್ನ ಮೈಕೈ ಮುಟ್ಟಲು ಯತ್ನಿಸಿದ ಎಂದು ಸಮರ್ಥನೆ ನೀಡಿದ್ದಾರೆ. ಒಂದು ವೇಳೆ ಆಕಸ್ಮಿಕ ಘಟನೆಯಾಗಿದ್ದರೆ ಆ ಯುವಕ ತಕ್ಷಣ ಪ್ರತಿಕ್ರಿಯಿಸುತ್ತಿದ್ದನು, ಆದರೆ ಆ ರೀತಿ ಏನೂ ಸಂಭವಿಸಲಿಲ್ಲ. ಬದಲಾಗಿ ಆ ಯುವಕ ವಿಪರೀತ ಸಂತೋಷವನ್ನು ಅನುಭವಿಸುತ್ತಿದ್ದ. ಆತ ‘ಐ ಡೋಂಟ್ ಕೇರ್’ ಎಂಬ ಮನೋಭಾವವನ್ನು ಹೊಂದಿದ್ದ ಎಂದು ನಟಿ ಸಾನಿಯಾ ಹೇಳಿದ್ದಾರೆ.

ಸಾನಿಯಾ ತನ್ನ ಫ್ಯಾಶನ್ ಡ್ರೆಸ್​ನಿಂದ ಘಟನೆ ನಡೆದ ದಿನ ಟ್ರೋಲ್​ಗೆ ಒಳಗಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಾನಿಯಾ ಅವರ ಡ್ರೆಸ್​ ಅನ್ನು ವ್ಯಂಗ್ಯವಾಡಲಾಗಿತ್ತು. ಸಾನಿಯಾ ತೊಟ್ಟಿದ್ದ ಉಡುಗೆಯೇ ಪ್ರಮುಖ ಸಮಸ್ಯೆಯಾಗಿತ್ತು ಎಂದು ಜಾಲತಾಣದಲ್ಲಿ ವಾದಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾನಿಯಾ, ನಾನು ಸಂಪೂರ್ಣ ಬಟ್ಟೆ ಧರಿಸಿದ ದಿನವೂ ಕೂಡ ಈ ರೀತಿಯ ಕೆಟ್ಟ ಅನುಭವ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.

ಈ ಘಟನೆಯ ಬಳಿಕ ಸಾನಿಯಾ ಅವರಿಗೆ ಭಯ ಆವರಿಸಿದ್ದು, ಪ್ರಸ್ತುತ ಎಲ್ಲ ಸಾರ್ವಜನಿಕ ಪ್ರಚಾರಗಳನ್ನು ಸಾನಿಯಾ ರದ್ದುಗೊಳಿಸುತ್ತಿದ್ದಾರೆ.

ಏನಿದು ಘಟನೆ?

ಕಳೆದ ವರ್ಷ ಸೆ. 27ರಂದು ನಡೆದ ಘಟನೆ ಇದಾಗಿದೆ. ಕೇರಳದ ಕೋಯಿಕ್ಕೋಡ್​ನ ಮಾಲ್‌ನಲ್ಲಿ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ತಮಗೆ ಮತ್ತು ಇನ್ನೋರ್ವ ನಟಿ ಗ್ರೇಸ್ ಆಂಟೋನಿ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯದ ಕುರಿತು ಜನಪ್ರಿಯ ಮಲಯಾಳಿ ನಟಿ ಸಾನಿಯಾ ಐಯಪ್ಪನ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು.

ಇಬ್ಬರು ನಟಿಯರು ಕೋಯಿಕ್ಕೋಡ್​ನ ಹಿಲೈಟ್ ಮಾಲ್‌ನಲ್ಲಿ ತಮ್ಮ ಮುಂಬರುವ ಚಿತ್ರ ‘ಸ್ಯಾಟರ್ಡೇ ನೈಟ್’ ಅನ್ನು ಪ್ರಚಾರ ಮಾಡುತ್ತಿದ್ದಾಗ ಈ ಘಟನೆ ನಡೆದಿತ್ತು. ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ತಮಗಾದ ಸಂಕಟವನ್ನು ಹಂಚಿಕೊಂಡ ಸಾನಿಯಾ, ‘ನಾನು ಮತ್ತು ನನ್ನ ಚಿತ್ರ ತಂಡವು ಸಿನಿಮಾದ ಪ್ರಚಾರ ಮಾಡುತ್ತಿದ್ದೆವು. ಮಾಲ್‌ನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಪರೀತ ಜನರು ಬಂದಿದ್ದ ಹಿನ್ನೆಲೆಯಲ್ಲಿ ಭದ್ರತೆಯನ್ನು ಮಾಡುವುದು ಕೂಡ ಕಷ್ಟವಾಗಿ ಪರಿಣಮಿಸಿತು’ ಎಂದು ಹೇಳಿದ್ದರು.

“ಈವೆಂಟ್‌ ನಂತರ, ನಾನು ಮತ್ತು ನನ್ನ ಸಹ ನಟಿಯೊಬ್ಬರು ಹೊರಗೆ ಹೋಗುತ್ತಿದ್ದೆವು. ಆ ಸಂದರ್ಭದಲ್ಲಿ ನನ್ನ ಸಹೋದ್ಯೋಗಿಯೊಂದಿಗೆ ಆರಂಭದಲ್ಲಿ ಜನರು ಲೈಂಗಿಕವಾಗಿ ಅನುಚಿತವಾಗಿ ವರ್ತಿಸಿದರು. ಆದರೆ ವಿಪರೀತ ಜನಸಂದಣಿ ಇದ್ದ ಹಿನ್ನೆಲೆಯಲ್ಲಿ ಆಕೆಗೆ ಯಾರು ಹೀಗೆ ಮಾಡಿದ್ದಾರೆ ಎಂದು ನೋಡಿ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ. ಸ್ವಲ್ಪ ದೂರ ಹೋದ ಮೇಲೆ ನನಗೂ ಇದೇ ರೀತಿ ಕಹಿ ಅನುಭವವಾಯಿತು. ಕೋಯಿಕ್ಕೋಡ್​ ನನಗೆ ತುಂಬಾ ಇಷ್ಟವಾದ ಸ್ಥಳ. ಆದರೆ ಇಂದು ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದಾಗ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬರು ನನ್ನನ್ನು ಹಿಡಿದುಕೊಂಡಿದ್ದರು, ಅವರ ಈ ಕೃತ್ಯ ಹೇಳಲು ನನಗೆ ಅಸಹ್ಯವಾಗುತ್ತಿದೆ’ ಎಂದಿದ್ದರು. ‘ಆ ಸಮಯದಲ್ಲಿ ನಾನು ಹೇಗೆ ಪ್ರತಿಕ್ರಿಯೆ ನೀಡಿದೆ ಎಂದು ಇಲ್ಲಿರುವ ವಿಡಿಯೋದಲ್ಲಿ ನೋಡಬಹುದು’ ಎಂದು ವಿಡಿಯೋ ಒಂದನ್ನು ನಟಿ ಸಾನಿಯಾ ಶೇರ್​ ಮಾಡಿದ್ದರು. ಆ ವಿಡಿಯೋದಲ್ಲಿ ವ್ಯಕ್ತಿಯೊಬ್ಬನಿಗೆ ನಟಿ ಹೊಡೆಯುವುದನ್ನು ಕಾಣಬಹುದು. “ಯಾರಿಗೂ ಇಂಥ ಕಹಿ ಅನುಭವ ಆಗಬಾರದು. ಮಹಿಳೆಯರ ಮೇಲಿನ ಇಂಥ ದೌರ್ಜನ್ಯವನ್ನು ಯಾರೂ ಸುಮ್ಮನೇ ಬಿಡಬಾರದು. ಇದೇ ಕಾರಣಕ್ಕೆ ನಾನು ಆ ರೀತಿ ನಡೆದುಕೊಂಡೆ’ ಎಂದು ಅವರು ಹೇಳಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net