

ಚೆನ್ನೈ: ‘ಚಾಮುಂಡಿ ತಾಯಿಯಾಣೆ ನಾನೆಂದು ನಿಮ್ಮವನೆ...’ ಎಂದು ಹಾಡಿ ಕನ್ನಡಿಗರೊಂದಿಗೇ ಇರುವ ಪ್ರತಿಜ್ಞೆ ಮಾಡಿದ್ದ ಸ್ವರ ಸಾಮ್ರಾಟ ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ (ಎಸ್ಪಿಬಿ) ಇನ್ನು ನೆನಪು ಮಾತ್ರ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸಹಿತ ದೇಶದ ಹದಿನಾರು ಭಾಷೆಗಳಲ್ಲಿ 40 ಸಾವಿರಕ್ಕೂ ಅಧಿಕ ಹಾಡುಗಳಿಗೆ ಧ್ವನಿಯಾಗಿ ಜಗದಗಲದ ಸಂಗೀತ ರಸಿಕರ ಅಭಿಮಾನ ಸಂಪಾದಿಸಿದ್ದ ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಶುಕ್ರವಾರ ಮಧ್ಯಾಹ್ನ ಗಾನಲೀನರಾದರು.
ಅವರಿಗೆ 74 ವರ್ಷ ವಯಸ್ಸಾಗಿತ್ತು. ಆ.5ರಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಕರೊನಾ ಸೋಂಕು ಗೆದ್ದರೂ ಶ್ವಾಸಕೋಶದ ಸೋಂಕಿಗೆ ಚಿಕಿತ್ಸೆ ಫಲಿಸಲಿಲ್ಲ. ಹೀಗಾಗಿ ಕೃತಕ ಉಸಿರಾಟದ ಸಾಧನದಲ್ಲೇ (ವೆಂಟಿಲೇಟರ್) ಚಿಕಿತ್ಸೆ ಮುಂದು ವರಿಸಲಾಗಿತ್ತು. ಎಂಜಿಎಂ ಆಸ್ಪತ್ರೆ ಗುರುವಾರವೇ ಎಸ್ಪಿಬಿ ಆರೋಗ್ಯ ಚಿಂತಾಜನಕವಾಗಿದೆ ಎಂದು ತಿಳಿಸಿತ್ತು. ತಮ್ಮ ತಂದೆಯ ನಿಧನವನ್ನು ಎಸ್.ಪಿ.ಚರಣ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ನಂತರ ಸಾಂಸ್ಕೃತಿಕ ವಲಯದಲ್ಲಿ ದುಃಖ ಮಡುಗಟ್ಟಿತು. ಆಸ್ಪತ್ರೆಗೆ ಸೇರುವ ವೇಳೆ ಟ್ವೀಟ್ ಮಾಡಿದ್ದ ಎಸ್ಪಿಬಿ, ಆರೋಗ್ಯವಾಗಿದ್ದೇನೆ. ಜ್ವರ, ಆಯಾಸದಿಂದ ಮುಕ್ತನಾಗಿ 2 ದಿನಗಳಲ್ಲಿ ಆಸ್ಪತ್ರೆಯಿಂದ ಹೊರಬರುವೆ ಎಂದಿದ್ದರು. ಎಸ್ಪಿಬಿ ಪತ್ನಿ ಸಾವಿತ್ರಿ ಕರೊನಾದಿಂದ ಚೇತರಿಸಿಕೊಂಡಿದ್ದಾರೆ. ಎಸ್ಪಿಬಿ ಪತ್ನಿ ಜತೆಗೆ ಪುತ್ರ ಚರಣ್, ಪುತ್ರಿ ಪಲ್ಲವಿಯನ್ನು ಅಗಲಿದ್ದಾರೆ.
ಹಳೇ ಬೇರು ಹೊಸ ಚಿಗುರು
55 ವರ್ಷಗಳ ತಮ್ಮ ಗಾಯನ ಬದುಕಿನಲ್ಲಿ ಎಸ್ಪಿಬಿ ಹಿಂದಿನ ಮೇರುನಟರಿಂದ ಇಂದಿನ ಕಿರಿಯ ನಟರವರೆಗೂ ಹಾಡಿದ್ದಾರೆ. ಡಾ. ರಾಜ್ಕುಮಾರ್, ಎಂಜಿಆರ್, ಎನ್ಟಿಆರ್, ಶಿವಾಜಿ ಗಣೇಶನ್, ರಜನಿಕಾಂತ್, ಕಮಲಹಾಸನ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತನಾಗ್, ರವಿಚಂದ್ರನ್ರಿಂದ ಈ ತಲೆಮಾರಿನ ನಾಯಕ ನಟರವರೆಗೆ ಎಲ್ಲರಿಗೂ ಹಾಡಿದ್ದಾರೆ.
ಇಂದು ಅಂತ್ಯಸಂಸ್ಕಾರ
ಎಸ್ಪಿಬಿ ಪಾರ್ಥಿವ ಶರೀರವನ್ನು ಶುಕ್ರವಾರ ರಾತ್ರಿ ತಿರುವಳ್ಳೂರು ಜಿಲ್ಲೆಯ ತಾಮರೈಪಾಕ್ಕಂನಲ್ಲಿರುವ ಅವರ ತೋಟದ ಮನೆಗೆ ಸ್ಥಳಾಂತರಿಸಲಾಯಿತು. ಅಂತಿಮ ದರ್ಶನದ ಬಳಿಕ ಶನಿವಾರ ಬೆಳಗ್ಗೆ 11 ಗಂಟೆಗೆ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಲಿದೆ.
ಸಂಕೇಶ್ವರರ ಸಂತಾಪ
ವಿಆರ್ಎಲ್ ಸಮೂಹದ ಜತೆಗೆ ಉತ್ತಮ ಒಡನಾಟ ಹೊಂದಿದ್ದ ಕರುನಾಡ ಕೋಗಿಲೆ ಎಸ್.ಪಿ. ಬಾಲ ಸುಬ್ರಹ್ಮಣ್ಯಂ ನಿಧನ ಕಲಾ ಜಗತ್ತಿಗೆ ತುಂಬಲಾರದ ನಷ್ಟ ಎಂದು ಸಂಸ್ಥೆಯ ಚೇರ್ಮನ್ ಡಾ.ವಿಜಯ ಸಂಕೇಶ್ವರ ಹಾಗೂ ಎಂಡಿ ಆನಂದ ಸಂಕೇಶ್ವರ ಕಂಬನಿ ಮಿಡಿದಿದ್ದಾರೆ. ವಿಜಯವಾಣಿ ಹಾಗೂ ದಿಗ್ವಿಜಯ ಸಹಯೋಗದಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದ ಎಸ್ಪಿಬಿ ಅವರ ಕಂಠ ಸಿರಿ ಕನ್ನಡಿಗರ ಕಿವಿಯಲ್ಲಿ ಸದಾ ಜೀವಂತವಿರುತ್ತದೆ ಎಂದು ಅವರು ಹೇಳಿದ್ದಾರೆ.
ಕನ್ನಡ ನಾಡಲ್ಲೇ ಹುಟ್ಟುವೆ
ಕನ್ನಡಿಗರು ನೀಡಿದ ಪ್ರೀತಿ, ವಾತ್ಸಲ್ಯ ಬೇರೆ ಯಾರಿಂದಲೂ ಸಿಕ್ಕಿಲ್ಲ. ಮುಂದಿನ ಜನ್ಮದಲ್ಲಿ ಕನ್ನಡ ನಾಡಲ್ಲೇ ಹುಟ್ಟಲು ಬಯಸುತ್ತೇನೆ. | ಎಸ್.ಪಿ.ಬಾಲಸುಬ್ರಹ್ಮಣ್ಯಂ
ವಿಷ್ಣು ಜತೆಗಿನ ನಂಟು ಸಾಹಸಸಿಂಹ ವಿಷ್ಣುವರ್ಧನ್ ಅವರ ಮೊದಲ ಹಾಡು ಹಾವಿನ ದ್ವೇಷ ಹನ್ನೆರಡು ವರ್ಷ ಹಾಡಿದ್ದ ಎಸ್ಪಿಬಿ ವಿಷ್ಣು ಕೊನೆಯ ಹಾಡಾದ ಆಪ್ತರಕ್ಷಕದ ‘ಚಾಮುಂಡಿ ತಾಯಿ ಆಣೆ’ ಹಾಡಿದ್ದು ವಿಶೇಷ.
ಎಸ್ಪಿಬಿಯವರ ಅಗಲಿಕೆ ದುರದೃಷ್ಟ ಕರ. ಮನೆ-ಮನಗ ಳಲ್ಲಿ ನೆಲೆಸಿದ್ದ ಗಾಯಕನನ್ನು ಕಳೆದು ಕೊಂಡು ದೇಶದ ಸಾಂಸ್ಕೃತಿಕ ವಲಯ ಬಡವಾಗಿದೆ. ಅವರ ಕುಟುಂಬದವರು, ಅಭಿಮಾನಿಗಳಿಗೆ ನನ್ನ ಸಾಂತ್ವನ. | ನರೇಂದ್ರ ಮೋದಿ ಪ್ರಧಾನಿ
ವಿಜಯವಾಣಿ-ದಿಗ್ವಿಜಯನ್ಯೂಸ್ ಸಹಯೋಗದಲ್ಲಿ ಬೆಂಗಳೂರು, ಮಂಗಳೂರು, ಕೋಲಾರದಲ್ಲಿ ನಡೆದಿದ್ದ ಪ್ರತ್ಯೇಕ ಸಂಗೀತ ಕಾರ್ಯಕ್ರಮಗಳಲ್ಲಿ ಎಸ್ಪಿಬಿ ತಮ್ಮ ಸಿರಿಕಂಠದ ಮೂಲಕ ರಂಜಿಸಿದ್ದರು.