

ಭಾವಪೂರ್ಣ ಗಾಯನದ ಮೂಲಕ ಖ್ಯಾತ ಗಾಯಕ ಅರ್ಜಿತ್ ಸಿಂಗ್ ಈಗಾಗಲೇ ದೇಶ, ವಿದೇಶಗಳಲ್ಲಿ ಚಿರಪರಿಚಿತರಾಗಿದ್ದಾರೆ. ಹಿಂದಿ, ಕನ್ನಡ ಸೇರಿ ವಿವಿಧ ಭಾಷೆಗಳ ಸುಮಾರು 650ಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ. ಅದರಲ್ಲಿ ‘ಆಶಿಕಿ 2’ ಚಿತ್ರದ ‘ತುಮ್ ಹಿ ಹೋ’, ‘ಬ್ರಹ್ಮಾಸ್ತ್ರ’ ಸಿನಿಮಾದ ‘ಕೇಸರಿಯಾ’ ಸೇರಿ ನೂರಾರು ಜನಪ್ರಿಯ ಗೀತೆಗಳನ್ನು ಹೆಸರಿಸಬಹುದು. ಇಂತಹ ಅರಿಜಿತ್ ಇದೀಗ ಜಂಗಲ್-ಅಡ್ವೆಂಚರ್ ಕಥೆಗೆ ಆ್ಯಕ್ಷನ್-ಕಟ್ ಹೇಳಲು ಮುಂದಾಗುತ್ತಿದ್ದಾರೆ. ಈ ಮೂಲಕ ಡೈರೆಕ್ಟರ್ ಕ್ಯಾಪ್ ಧರಿಸುತ್ತಿರುವುದು ಬಹುತೇಕ ಖಚಿತವಾಗಿದೆ. ಈ ಚಿತ್ರಕ್ಕೆ ನಿರ್ಮಾಪಕ ಮಹಾವೀರ್ ಜೈನ್ ಬಂಡವಾಳ ಹೂಡುತ್ತಿದ್ದಾರೆ. ಈ ಸಿನಿಮಾ ಬಿಗ್‌ಬಜೆಟ್‌ನಲ್ಲಿ ಮೂಡಿಬರಲಿದ್ದು, ಅರಿಜಿತ್ ಈಗಾಗಲೇ ಪ್ರಿ-ಪ್ರೊಡಕ್ಷನ್ ಕಾರ್ಯಗಳನ್ನು ಆರಂಭಿಸಿದ್ದಾರೆ. ತಾರಾಗಣದ ಆಯ್ಕೆ ಪ್ರಕ್ರಿಯೆ ಆಗಸ್ಟ್‌ನಲ್ಲಿ ನಡೆಯಲಿದೆ ಎನ್ನಲಾಗಿದೆ. ಈ ಚಿತ್ರ ಪ್ಯಾನ್ ಇಂಡಿಯಾ ರೂಪದಲ್ಲಿ ಮೂಡಿಬರಲಿದ್ದು, ಇದೇ ಸೆಪ್ಟೆಂಬರ್‌ನಲ್ಲಿ ಘೋಷಣೆ ಮಾಡುವ ಆಲೋಚನೆ ಚಿತ್ರತಂಡದ್ದು. ಹಿಮೇಶ್ ರೇಷಮಿಯಾ (ಎಕ್ಸ್‌ಪೋಸ್), ಶಂಕರ್ ಮಹಾದೇವನ್ (ಘಾತ್) ಹಾಗೂ ವಿಶಾಲ್ ಭಾರದ್ವಾಜ್ (ಓಂಕಾರ್) ಬಳಿಕ ಇದೀಗ ಮತ್ತೊಬ್ಬ ಬಾಲಿವುಡ್ ಗಾಯಕ ಡೈರೆಕ್ಟರ್ ಕ್ಯಾಪ್ ಧರಿಸುತ್ತಿದ್ದಾರೆ. -ಏಜೆನ್ಸೀಸ್