ಸಿಂಧೂ ಈಗ ರಾ ಏಜೆಂಟ್; ಬೆಂಗಳೂರು ಬ್ಲಾಸ್ಟ್ ಘಟನೆ ಈಗ ವೆಬ್​ಸೀರಿಸ್​

Sindhu
Published on

ಬೆಂಗಳೂರು: ಈ ಹಿಂದೆ ‘ಲೂಸ್ ಕನೆಕ್ಷನ್’ ವೆಬ್​ಸಿರೀಸ್​ನಲ್ಲಿ ನಟಿಸಿದ್ದ ಸಿಂಧೂ ಲೋಕನಾಥ್, ಇದೀಗ ಸದ್ದಿಲ್ಲದೆ ಮತ್ತೊಂದು ವೆಬ್ ಸರಣಿ ಒಪ್ಪಿ, ಅದರ ಬಹುಪಾಲು ಕೆಲಸವನ್ನು ಮುಗಿಸಿದ್ದಾರೆ. ಶೀರ್ಷಿಕೆ ಅಂತಿಮವಾಗದ ಈ ಸರಣಿಯಲ್ಲಿ ರಾ ಏಜೆಂಟ್ ಪಾತ್ರದಲ್ಲಿ ಸಿಂಧೂ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ‘ಅಟೆಂಪ್ಟ್ ಟು ಮರ್ಡರ್’ ಸಿನಿಮಾ ನಿರ್ದೇಶನ ಮಾಡಿದ್ದ ಅಮರ್ ಗೌಡ, ಈ ವೆಬ್ ಸರಣಿಯನ್ನು ನಿರ್ದೇಶನ ಮಾಡುತ್ತಿದ್ದಾರೆ. ದಯಾ ಎಂಬುವವರೂ ಇದರ ನಿರ್ದೇಶಕರಾಗಿದ್ದಾರೆ. ಬೆಂಗಳೂರಿನಲ್ಲಿ ಕೆಲ ವರ್ಷಗಳ ಹಿಂದೆ ನಡೆದ ಬಾಂಬ್ ಸ್ಫೋಟ ಪ್ರಕರಣವನ್ನೇ ಕಥೆಯನ್ನಾಗಿ ಮಾಡಿಕೊಂಡು, ಅದಕ್ಕೊಂದಿಷ್ಟು ಕಾಲ್ಪನಿಕ ಅಂಶಗಳನ್ನು ಮಿಶ್ರಣ ಮಾಡಿ ಒಟ್ಟು 10 ಏಪಿಸೋಡ್​ಗಳ ವೆಬ್​ಸಿರೀಸ್ ನಿರ್ವಣವಾಗಿದೆ. ಇನ್ನೇನು ಡಿಸೆಂಬರ್ ವೇಳೆಗೆ ಒಟಿಟಿ ವೇದಿಕೆಯಲ್ಲಿ ಸ್ಟ್ರೀಮ್ ಆಗಲಿದೆಯಂತೆ.

ಇತ್ತ ತಮ್ಮ ಪಾತ್ರ ಸೇರಿ ಸಿರೀಸ್ ಬಗ್ಗೆಯೂ ಸಿಂಧೂ ಒಂದಷ್ಟು ಮಾಹಿತಿ ನೀಡಿದ್ದಾರೆ. ‘ಇಲ್ಲಿಯವರೆಗೂ ನಾನು ಮಾಡದ ಪಾತ್ರವೊಂದು ಈ ವೆಬ್​ಸಿರೀಸ್​ನಲ್ಲಿ ಸಿಕ್ಕಿದೆ. ಹಳ್ಳಿ ಹುಡುಗಿ, ಕಾಲೇಜು ಹುಡುಗಿ ರೀತಿಯ ಪಾತ್ರ ಮಾಡುತ್ತಿದ್ದ ನನಗೆ, ಇದೀಗ ಅಂಡರ್ ಕವರ್ ರಾ ಏಜೆಂಟ್ ಪಾತ್ರ ಸಿಕ್ಕಿದೆ. ಕ್ರೖೆಂ ಥ್ರಿಲ್ಲರ್ ಎಳೆಯ ಈ ಸಿರೀಸ್ ಬೆಂಗಳೂರಿನಲ್ಲಾದ ಬಾಂಬ್ ಬ್ಲಾಸ್ಟ್ ಹಿನ್ನೆಲೆಯಲ್ಲಿ ಸಾಗಲಿದೆ. 30 ನಿಮಿಷಗಳ 10 ಏಪಿಸೋಡ್​ಗಳು ಇದರಲ್ಲಿರಲಿವೆ’ ಎನ್ನುತ್ತಾರೆ ಸಿಂಧೂ. ಶ್ರೀಧರ್, ಭರತ್ ಬೋಪಣ್ಣ ಹಲವರು ಈ ಸರಣಿಯಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net