ಆತ್ಮದ ಜತೆ ಸಿಂಧು ಲವ್ವಿ ಡವ್ವಿ

SINDHU
Published on

ಸಿಂಧು ಲೋಕನಾಥ್ ಅತಿಥಿ ಪಾತ್ರದಲ್ಲಿ ಸ್ಯಾಂಡಲ್​ವುಡ್​ಗೆ ‘ಪರಿಚಯ’ವಾದರೂ ಇವರಿಗೆ ಲೈಫ್ ಕೊಟ್ಟಿದ್ದು ‘ಲೈಫು ಇಷ್ಟೇನೆ’. ನಂತರ ಸಿಕ್ಕಿದ್ದು ಸಾಲುಸಾಲು ಸಿನಿಮಾ, ದಕ್ಕಿದ್ದು ಒಂದೊಳ್ಳೆಯ ಹೆಸರು. ‘ಹೀಗೊಂದು ದಿನ’ದ ಬಳಿಕ ಚಿತ್ರರಂಗದಿಂದ ಕಾಣೆಯಾದಂತಿದ್ದ ನಟಿ ಸಿಂಧು ಇದೀಗ ‘ಕಾಣದಂತೆ ಮಾಯವಾದನು’ ಚಿತ್ರದ ಮೂಲಕ ಮತ್ತೆ ಕಾಣಸಿಕ್ಕಿದ್ದಾರೆ. ಇಂದು ಈ ಸಿನಿಮಾ ಬಿಡುಗಡೆ. ಚಿತ್ರ, ಪಾತ್ರ, ಸಿನಿ ಬದುಕಿನ ಕುರಿತು ಸಿಂಧು ಮಾಹಿತಿ ಹಂಚಿಕೊಂಡಿದ್ದು ಹೀಗೆ...

‘ನಟಿ ಸಿಂಧು ಲೋಕನಾಥ್ ಕಾಣದಂತೆ ಮಾಯವಾಗಿದ್ದಾರೆ’.. ಹೀಗೊಂದು ಮಾತು ಗಾಂಧಿ ನಗರದಿಂದ ಆಗಾಗ ಕೇಳಿಬರುತ್ತಲೇ ಇತ್ತು. ‘ಕಾಣದಂತೆ ಮಾಯವಾದನು’ ಸಿನಿಮಾ ಮೂಲಕ ಕಾಣಿಸಿಕೊಂಡಾಗ ‘ಸಿಂಧು ಕಮ್್ಯಾಕ್ ಮಾಡಿದ್ದಾರೆ’ ಎಂಬ ಸುದ್ದಿ ಕೂಡ ಹರಿದಾಡಿತು. ಆದರೆ ಇದೆಲ್ಲದಕ್ಕೂ ಸಿಂಧು ಕೊಡುವ ಉತ್ತರ, ‘ನಾನು ಚಿತ್ರರಂಗ ಬಿಟ್ಟು ಎಲ್ಲಿಯೂ ಹೋಗಿರಲಿಲ್ಲ, ಇದು ನನ್ನ ಕಮ್್ಯಾಕ್ ಅಲ್ಲ..’

‘ಇಂದು ‘ಕಾಣದಂತೆ ಮಾಯವಾದನು’ ಚಿತ್ರ ಬಿಡುಗಡೆ ಆಗುತ್ತಿದೆ. ಅಜಯ್ ರಾವ್ ಜತೆ ಮಾಡಿರುವ ‘ಕೃಷ್ಣ ಟಾಕೀಸ್’ ಚಿತ್ರ ಕೂಡ ರಿಲೀಸ್​ಗೆ ರೆಡಿ. ಇಷ್ಟು ದಿನ ಈ ಸಿನಿಮಾಗಳಲ್ಲಿ ಬಿಜಿ ಆಗಿದ್ದೆ. ಇವುಗಳ ಚಿತ್ರೀಕರಣ ಮುಗಿಯುವವರೆಗೆ ಬೇರೆ ಸಿನಿಮಾಗಳಿಗೆ ಸಹಿ ಮಾಡಬಾರದು ಅಂದುಕೊಂಡಿದ್ದೆ’ ಎಂದರು ಸಿಂಧು.

ಮೂರು ವರ್ಷದ ಶ್ರಮ, ಒಳ್ಳೆಯ ಚಿತ್ರ ನಿರ್ಮಾಣ ‘ಕಾಣದಂತೆ ಮಾಯವಾದನು’ ಚಿತ್ರ 2016ರಲ್ಲಿ ಶುರುವಾಗಿದ್ದು. ಇಷ್ಟು ದಿನ ಗ್ಯಾಪ್ ಯಾಕೆ ಎಂದು ಕೇಳಿದ್ದಕ್ಕೆ ಸಿಂಧು ಕೆಲ ಕಾಲ ಮೌನ. ‘ಖಳನಟನ ಪಾತ್ರದಲ್ಲಿ ಅಭಿನಯಿಸಿದ್ದ ಉದಯ್ ದುರದೃಷ್ಟವಶಾತ್ ಸಾವಿಗೀಡಾದರು. ಈ ನೋವಿನಲ್ಲೇ ಚಿತ್ರೀಕರಣ ನಿಲ್ಲಿಸಲಾಯಿತು’ ಎನ್ನುತ್ತಾರೆ.

ಐದು ತಿಂಗಳ ಬಳಿಕ ಶೂಟಿಂಗ್ ಶುರುವಾದಾಗ ಉದಯ್ ಪಾತ್ರಕ್ಕೆ ಜೀವ ತುಂಬಿದ್ದು ಭಜರಂಗಿ ಲೋಕಿ. ‘ಚಿತ್ರದಲ್ಲಿ ಗ್ರಾಫಿಕ್ಸ್ ಕೆಲಸ ಜಾಸ್ತಿ ಇದೆ. ಪ್ರತಿ ಸೀನ್​ಗೂ ಸೆಟ್ ಹಾಕಬೇಕಿದ್ದರಿಂದ ಸಿನಿಮಾ ತಡವಾಯಿತು. ಒಂದೊಳ್ಳೆಯ ಕಥೆ ಇದೆ, ನಿರ್ವಣವೂ ಚೆನ್ನಾಗಿದೆ’ ಎಂದರು ಸಿಂಧು ಲೋಕನಾಥ್.

ಆತ್ಮದ ಸುತ್ತ ಸುತ್ತುವ ಕಥೆ

ಇದು ಥ್ರಿಲ್ಲರ್-ಸಸ್ಪೆನ್ಸ್ ಚಿತ್ರ. ನವಿರಾದ ಲವ್ ಸ್ಟೋರಿ ಕೂಡ ಇಲ್ಲಿದೆಯಂತೆ. ‘ಎನ್​ಜಿಒದಲ್ಲಿ ಕೆಲಸ ಮಾಡುವ, ಸಾಮಾಜಿಕ ಕಳಕಳಿ ಹೊಂದಿರುವ ಯುವತಿ ಪಾತ್ರ ನನ್ನದು. ಪ್ರೀತಿಸುವ ಹುಡುಗ ಇದ್ದಕ್ಕಿದ್ದಂತೆ ಕಾಣೆ ಆಗುತ್ತಾನೆ. ಆದರೆ ಆತ ಕೊಲೆ ಆಗಿರುತ್ತಾನೆ.

ಬಳಿಕ ಆತ್ಮದ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ಬದುಕಿದ್ದಾಗ ಸಾಕಷ್ಟು ತಪು್ಪ ಮಾಡಿದ್ದ ಆತ, ಸತ್ತ ಮೇಲೆ ತಪ್ಪಿನ ಅರಿವಾಗಿ ಆತ್ಮದ ರೂಪದಲ್ಲಿ ಒಳ್ಳೆಯ ಕೆಲಸ ಮಾಡುತ್ತಾನೆ. ಇದುವೇ ಸಿನಿಮಾ ಕಥೆ’ ಎನ್ನುವ ಸಿಂಧು, ಮೇಲ್ನೋಟಕ್ಕೆ ಇದು ಹಾರರ್ ಸಿನಿಮಾ ಅನಿಸಿದರೂ ಭಯ ಬೀಳಿಸುವ ದೃಶ್ಯಗಳಿಲ್ಲ. ಚಿತ್ರದಲ್ಲಿ ಮನರಂಜನೆ, ಕಾಮಿಡಿಗೆ ಹೆಚ್ಚು ಒತ್ತುಕೊಡಲಾಗಿದೆ’ ಎನ್ನುತ್ತಾರೆ.

ನಿರ್ದೇಶಕ ಯೋಗರಾಜ್ ಭಟ್ ಜತೆ ಕೆಲಸ ಮಾಡಿ ಪಳಗಿರುವ, ‘ಜಯಮ್ಮನ ಮಗ’ ಸಿನಿಮಾ ನಿರ್ದೇಶಿಸಿದ್ದ ವಿಕಾಸ್, ಈ ಚಿತ್ರದಲ್ಲಿ ಮೊದಲ ಬಾರಿಗೆ ನಟನಾಗಿ ಅಭಿನಯಿಸುವ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದ್ದಾರೆ. ‘ವಿಕಾಸ್ ಉತ್ತಮ ನಟ. ಮೊದಲ ಚಿತ್ರದಲ್ಲೇ ಹತ್ತು ಸಿನಿಮಾ ಮಾಡಿ ಅನುಭವ ಇದ್ದವರಂತೆ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಹೊಸ ಪ್ರಯೋಗದ ಸಿನಿಮಾ ಇದು. ನೋಡುಗರಿಗೆ ಥ್ರಿಲ್ ಕೊಡುತ್ತದೆ’ ಎನ್ನುವ ಸಿಂಧು, ಇಲ್ಲಿ ಪಾತ್ರಗಳಿಗಿಂತ ಕಥೆಯೇ ಮುಖ್ಯ ಎನ್ನುತ್ತಾರೆ.

ಸವಾಲಿನ ಪಾತ್ರಗಳಿಗೂ ಸೈ

ಅವಕಾಶಗಳು ಸಾಕಷ್ಟು ಬಂದರೂ ಆಯ್ಕೆಯಲ್ಲಿ ಸಿಂಧು ಜಾಣೆ. ಕಥೆ ಚೆನ್ನಾಗಿದ್ದರೆ ಮಾತ್ರ ಸಿನಿಮಾ ಒಪ್ಪಿಕೊಳ್ಳುತ್ತೇನೆ ಎನ್ನುವ ಇವರನ್ನು ಈ ಮೂರು ವರ್ಷಗಳಲ್ಲಿ ಹಲವಾರು ಅವಕಾಶಗಳು ಅರಸಿ ಬಂದಿವೆಯಂತೆ. ‘ಅಭಿನಯಿಸುವ ಪಾತ್ರಗಳು ಹೊಸತನ ಹಾಗೂ ಸವಾಲಿನಿಂದ ಕೂಡಿರಬೇಕು. ಆಗ ಮಾತ್ರ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಲು ಸಾಧ್ಯ’ ಎನ್ನುತ್ತಾರೆ ಸಿಂಧು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net