

ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ನಮ್ಮನ್ನಗಲಿ ಕಳೆದ ತಿಂಗಳ 30ಕ್ಕೆ 15 ವರ್ಷಗಳಾದವು. ಸಿನಿಮಾ, ಪಾತ್ರ, ಸರಳ ವ್ಯಕ್ತಿತ್ವ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಇಂದಿಗೂ ವಿಷ್ಣುವರ್ಧನ್ ಜನಮಾನಸದಲ್ಲಿ ಅಚ್ಚಳಿಯಾಗಿದ್ದಾರೆ. ಈ ಸಮಯದಲ್ಲಿ ಅಭಿಮಾನಿಗಳು ಅವರ ನೆನಪಿಗಾಗಿ ‘ಸಿಂಹದ ಹಾದಿ’ ಎಂಬ ಟೆಲಿಫಿಲಂ ಮೂಲಕ ವಿಷ್ಣು ಅವರನ್ನು ಮತ್ತೊಮ್ಮೆ ತೆರೆ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ಇತ್ತೀಚೆಗೆ ಜಿ.ಕೆ.ಶಶಿರಾಜ್ ದೊರೈ ನಿರ್ದೇಶಿಸಿ, ನಿರ್ಮಿಸಿರುವ ಈ ‘ಸಿಂಹದ ಹಾದಿ’ ಟೆಲಿಫಿಲಂ ಟ್ರೇಲರ್ ಬಿಡುಗಡೆಗೊಳಿಸಲಾಯಿತು. ಹಿರಿಯ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಜೋ ಸೈಮನ್, ಕೃಷ್ಣೇಗೌಡ, ಭಾ.ಮ. ಹರೀಶ್, ಉಮೇಶ್ ಬಣಕಾರ್, ಹಿರಿಯ ನಟಿ ಲಕ್ಷ್ಮೀದೇವಮ್ಮ ಸೇರಿ ಹಲವರು ತಂಡಕ್ಕೆ ಶುಭಹಾರೈಸಿದರು. ಶಶಿರಾಜ್, ‘ವಿಷ್ಣುವರ್ಧನ್ ಆದರ್ಶವಾಗಿಟ್ಟುಕೊಂಡು ಬದುಕು ಕಟ್ಟಿಕೊಂಡ ನಾಲ್ವರ ಜೀವನವನ್ನು ಅಧರಿಸಿ ಈ ಟೆಲಿಚಿತ್ರ ನಿರ್ಮಿಸಲಾಗಿದೆ. ಈ ಕಾರ್ಯದಲ್ಲಿ ನಮಗೆ ಅಭಿಮಾನಿಗಳು ಬೆನ್ನೆಲುಬಾಗಿದ್ದಾರೆ. ವಿಷ್ಣುವರ್ಧನ್ ಅವರ ಜೀವನ-ಸಾಧನೆಯನ್ನು ಮುಂದಿನ ಜನರಿಗೆ ತೋರಿಸುವ ಪ್ರಯತ್ನ ಮಾಡಿದ್ದೇವೆ’ ಎಂದು ಮಾಹಿತಿ ನೀಡಿದರು. ಶಶಿರಾಜ್ ದೊರೆ, ಸಾಯಿ ಜ್ಯೋತಿ, ಸವಿತಾ, ಪಲ್ಲವಿ ರಾವ್, ಪ್ರಕೃತಿ, ಹರಿ ಪ್ರಕಾಶ್, ಮಂಜು, ಮಹೇಶ್ ಮೊದಲಾದವರು ಈ ಟೆಲಿಫಿಲಂನಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ’ಸಿಂಹದ ಹಾದಿ’ ಟೆಲಿಫಿಲಂ 75ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.