ದುಬೈನಲ್ಲಿ ಸೆ. 14 ಮತ್ತು 15ರಂದು ಸೈಮಾ ; ಕಾಟೇರ 8, ಸಪ್ತಸಾಗರದಾಚೆ ಸೈಡ್​ ಎ 7 ವಿಭಾಗಗಳಲ್ಲಿ ಸ್ಪರ್ಧೆ

asef
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

2024ನೇ ಸಾಲಿನ ಸೈಮಾ (ಸೌತ್​ ಇಂಡಿಯನ್​ ಇಂಟರ್​ನ್ಯಾಷನಲ್​ ಮೂವಿ ಅವಾರ್ಡ್ಸ್​) ಸಮಾರಂಭ ದುಬೈನಲ್ಲಿ ಸೆಪ್ಟಂಬರ್ 14 ಮತ್ತು 15ರಂದು ನಡೆಯಲಿದೆ. ಇದರ ಭಾಗವಾಗಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಿನ್ನೆ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಸೈಮಾ ಅಧ್ಯಕ್ಷರಾದ ಬೃಂದಾ ಪ್ರಸಾದ್, ನಟರಾದ ಡಾಲಿ ಧನಂಜಯ್, ರಿಷಿ, ನಟಿಯರಾದ ನೇಹಾ ಶೆಟ್ಟಿ, ನಿಧಿ ಅಗರ್ವಾಲ್, ಅವಿಕಾ ಗೋರ್, ಶಾನ್ವಿ ಶ್ರೀವಾಸ್ತವ್, ಶುಭ್ರ ಅಯ್ಯಪ್ಪ, ಮಾರುತಿ ಸುಜುಕಿ ಇಂಡಿಯಾಲಿಮಿಟೆಡ್ ಸೀನಿಯರ್ ಎಕ್ಸಿಕ್ಯೂಟಿವ್ ಆಫೀಸರ್ ನೊಬುಟಾಕಾ ಸುಜುಕಿ, ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ರಾಯ್ ಸಿಜೆ ಸೇರಿದಂತೆ ಹಲವರು ಭಾಗಿಯಾಗಿದ್ದರು.

ನಟ ಡಾಲಿ ಧನಂಜಯ್ , ‘ಈ ಬಾರಿ ದುಬೈನಲ್ಲಿ ಸೈಮಾ ಆಗುತ್ತಿದೆ. ಸೈಮಾ ನನಗೆ ಅದ್ಭುತ ಮೆಮೋರಿ ಕ್ರಿಯೇಟ್ ಮಾಡುವ ಜಾಗ. ಲಾಸ್ಟ್ ಇಯರ್ ನನ್ನ ಹುಟ್ಟುಹಬ್ಬಕ್ಕೆ ಇಂಡಸ್ಟ್ರೀಗೆಲ್ಲಾ ನಾನು ಪಾರ್ಟಿ ಕೊಟ್ಟಿದ್ದೆ. ಈ ಬಾರಿ ನನಗೆ ಸೈಮಾದಿಂದ ಪಾರ್ಟಿ ಕೊಡುತ್ತಿದ್ದಾರೆ. ಎಲ್ಲಾ ಇಂಡಸ್ಟ್ರೀಯ ಕಲಾವಿದರು, ನಿರ್ದೇಶಕರನ್ನು ನೋಡುವ ಒಳ್ಳೆ ವೇದಿಕೆ. ಈ ರೀತಿಯ ಇವೆಂಟ್ ಚೆನ್ನಾಗಿರುತ್ತವೆ, ಈ ಬಾರಿ ಲಿರಿಕ್ಸ್ ಕೆಟಗರಿಯಲ್ಲಿ ನಾನು ನಾಮಿನೇಟ್ ಮಾಡಲಾಗಿದೆ‘ ಎಂದು ಸಂತಸ ಹಂಚಿಕೊಂಡರು. ನಟಿ ನಿಧಿ ಅಗರ್ವಾಲ್, ‘ನಾನು ಇಲ್ಲಿ ಭಾಗಿಯಾಗಿರುವುದಕ್ಕೆ ಬಹಳಷ್ಟು ಖುಷಿಯಾಗಿದೆ. ಪ್ರತಿ ವರ್ಷ ನಡೆಯುವ ಸೈಮಾ ಸಂಭ್ರಮದಲ್ಲಿ ನಾನು ಭಾಗಿಯಾಗುತ್ತಿದ್ದೇನೆ. ಸೈಮಾದಲ್ಲಿ ಎಲ್ಲರನ್ನೂ ನೋಡುವುದು ಖುಷಿ‘ ಎಂದರು. ನಟಿ ಶಾನ್ವಿ ಶ್ರೀವಾಸ್ತವ್, ‘ಪ್ರತಿ ವರ್ಷದಂತೆ ಈ ವರ್ಷ ಸೈಮಾ ಮತ್ತೆ ಬಂದಿದೆ. ನಾನು ಸೆಲೆಬ್ರೆಟ್ ಮಾಡಲು ಕಾಯುತ್ತಿದ್ದೇವೆ. ಎಲ್ಲಾ ಇಂಡಸ್ಟ್ರೀಯ ಕಲಾವಿದರು ಒಂದು ಜಾಗದಲ್ಲಿ ಒಂದು ಸಮಾರಂಭದಲ್ಲಿ ಭಾಗಿಯಾಗಿ ಸಿನಿಮಾವನ್ನು ಸಂಭ್ರಮಿಸುತ್ತೇವೆ‘ ಎಂದರು.

ಈಗಾಗಲೇ ಸೈಮಾ ಪ್ರಶಸ್ತಿಗೆ ನಾಮಿನೇಷನ್ಸ್ ಆರಂಭವಾಗಿದೆ. ‘ಕಾಟೇರ’ ಹಾಗೂ ಸಪ್ತಸಾಗರದಾಚೆ ಎಲ್ಲೋ ಸೈಡ್-ಎ ಸಿನಿಮಾಗಳು ಸೈಮಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿವೆ. ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಚಿತ್ರ 8 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ. ಅತ್ತ ರಕ್ಷಿತ್ ಶೆಟ್ಟಿ ನಟನೆಯ, ಹೇಮಂತ್ ರಾವ್ ನಿರ್ದೇಶನದ ಸಪ್ತಸಾಗರದಾಚೆ ಎಲ್ಲೋ ಸೈಡ್-ಎ ಚಿತ್ರ 7 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ. ತೆಲುಗಿನಲ್ಲಿ, ನಾನಿ ಮತ್ತು ಕೀರ್ತಿ ಸುರೇಶ್ ಅಭಿನಯದ ಶ್ರೀಕಾಂತ್ ಒಡೆಲಾ ನಿರ್ದೇಶನದ ‘ದಸರಾ’ ಚಿತ್ರ 11 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದ್ದು, ನಾನಿ ಮತ್ತು ಮೃಣಾಲ್ ಠಾಕೂರ್ ಅಭಿನಯದ ‘ಹಾಯ್ ನನ್ನಾ’ 10 ವಿಭಾಗಗಳಲ್ಲಿ ನಾಮಿನೇಷನ್ ಗೊಂಡಿದೆ. ತಮಿಳಿನಲ್ಲಿ, ರಜನಿಕಾಂತ್ ಅಭಿನಯದ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ‘ಜೈಲರ್’ 11 ವಿಭಾಗದಲ್ಲಿ ನಾಮನಿರ್ದೇಶನಗಳೊಂದಿಗೆ ಮುಂಚೂಣಿಯಲ್ಲಿದ್ದರೆ, ಉದಯನಿಧಿ ಸ್ಟಾಲಿನ್ ಮತ್ತು ಕೀರ್ತಿ ಸುರೇಶ್ ಅಭಿನಯದ ‘ಮಾಮಣ್ಣನ್‌’ ಸಿನಿಮಾ 9 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ. ಮಲಯಾಳಂನಲ್ಲಿ, ಟೊವಿನೋ ಥಾಮಸ್ ಮತ್ತು ಆಸಿಫ್ ಅಲಿ ಅಭಿನಯದ ಜೂಡ್ ಆಂಥನಿ ಜೋಸೆಫ್ ನಿರ್ದೇಶನದ ‘2018’ ಸಿನಿಮಾ 8 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ, ಮಮ್ಮುಟ್ಟಿ ಮತ್ತು ಜ್ಯೋತಿಕಾ ಅಭಿನಯದ ‘ಕಾತಲ್ – ದಿ ಕೋರ್’ 7 ವಿಭಾಗಗಳಲ್ಲಿ ನಾಮಿನೇಷನ್ ಆಗಿದೆ.

ಆನ್‌ಲೈನ್ ವೋಟಿಂಗ್ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರು ಮತ್ತು ಚಲನಚಿತ್ರಗಳಿಗೆ www.siima.in ಮತ್ತು SIIMA ನ ಫೇಸ್‌ಬುಕ್ ಪುಟದಲ್ಲಿ ವೋಟ್ ಮಾಡಬಹುದು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net