

ನಟನೆಯ ಜತೆ ಜತೆಗೆ ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್, ಅನುಷ್ಕಾ ಶರ್ಮಾ, ಕೃತಿ ಸನನ್ ಸೇರಿ ಕೆಲ ಬಾಲಿವುಡ್ ನಟಿಯರು ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಇದೀಗ ‘ಮಿರ್ಜಾಪುರ್’ ವೆಬ್‌ಸರಣಿ ಸೇರಿ ಹಿಂದಿಯ ‘ಮಸಾನ್’, ‘ಹರಾಮ್‌ಖೋರ್’, ‘ರಾತ್ ಅಕೇಲಿ ಹೈ’ ಸೇರಿ ಹಲವು ಚಿತ್ರಗಳಲ್ಲಿ ನಟಿಸಿರುವ ಶ್ವೇತಾ ತ್ರಿಪಾಠಿ ಕೂಡ ಆ ಪಟ್ಟಿಗೆ ಸೇರಿಕೊಂಡಿದ್ದಾಋಎ. ‘ಮುಝೇ ಜಾನ್ ನಾ ಕಹೋ ಮೇರಿ ಜಾನ್’ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸುವ ಜತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದಾರೆ. ಇದೊಂದು ವಿಭಿನ್ನ ಲವ್‌ಸ್ಟೋರಿಯಾಗಿದ್ದು, ಚಿತ್ರಕ್ಕೆ ‘ಮೆಮೊರೀಸ್ ಇನ್ ಮಾರ್ಚ್’ ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸಂಜಯ್ ನಾಗ್ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಚಿತ್ರದ ಪ್ರಿ-ಪ್ರೊಡಕ್ಷನ್ ಕಾರ್ಯಗಳು ಆರಂಭವಾಗಿದ್ದು, ಸದ್ಯದಲೇ ಶೂಟಿಂಗ್ ಪ್ರಾರಂಭವಾಗಲಿದೆ. ‘ವಿಲಕ್ಷಣ ಪ್ರೇಮಕಥೆಯ ಜತೆಗೆ ಬಹು ಸೂಕ್ಷ್ಮ ಅಂಶಗಳಿರುವ ಕಾರಣಕ್ಕೆ ಈ ಕಥೆ ನನಗೆ ತುಂಬಾ ಹತ್ತಿರವಾಗುತ್ತದೆ ಹೊರತು, ನನ್ನ ನಿರ್ಮಾಣದ ಮೊದಲ ಸಿನಿಮಾ ಎಂಬ ಕಾರಣಕ್ಕಲ್ಲ. ಈ ಚಿತ್ರದ ಮೂಲಕ ನಾನು ಹಾಗೂ ತಿಲೋತ್ತಮಾ ಶೋಮ್ ಒಟ್ಟಿಗೆ ನಟಿಸುತ್ತಿದ್ದೇವೆ. ಈ ಪ್ರಯಾಣ ಆರಂಭಿಸುವ ಬಗ್ಗೆ ಖುಷಿಯಿದೆ’ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. -ಏಜೆನ್ಸೀಸ್