ಹೊಸ ಹೋಪ್​ನಲ್ಲಿ ಶ್ವೇತಾ; ಕೆಎಎಸ್ ಅಧಿಕಾರಿಯಾಗಿ ನಟನೆ

Hope
Published on

ಬೆಂಗಳೂರು: ‘ಕಿರಗೂರಿನ ಗಯ್ಯಾಳಿಗಳು’ ನಂತರ ಶ್ವೇತಾ ಮೂರ್ನಾಲ್ಕು ಚಿತ್ರಗಳಲ್ಲಿ ನಟಿಸುತ್ತಿರುವ ಸುದ್ದಿ ಕೇಳಿ ಬಂದಿತ್ತಾದರೂ, ಯಾವೊಂದು ಚಿತ್ರವೂ ಇದುವರೆಗೂ ಬಿಡುಗಡೆಯಾಗಿರಲಿಲ್ಲ. ಈಗ ಮೊದಲ ಹಂತವಾಗಿ ‘ಹೋಪ್’ ಎಂಬ ಚಿತ್ರ ಜುಲೈ 08ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

‘ಹೋಪ್’ ಚಿತ್ರವನ್ನು ಅಂಬರೀಷ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಆಡಳಿತಾತ್ಮಕ ಸೇವೆಗಳ ಕುರಿತು ಈ ಚಿತ್ರದ ಕಥೆ ಸಾಗುತ್ತದಂತೆ. ವಿಶೇಷವೆಂದರೆ, ಖ್ಯಾತ ಸ್ನೂಕರ್ ಆಟಗಾರ್ತಿ ವರ್ಷಾ ಸಂಜೀವ್ ಕಥೆ ಬರೆದು ಈ ಚಿತ್ರವನ್ನು ನಿರ್ವಿುಸಿದ್ದಾರೆ. ಕೆಎಎಸ್ ಅಧಿಕಾರಿಗಳ ವರ್ಗಾವಣೆಯು ಸಾಮಾನ್ಯ ಜನರ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತದೆ ಎಂಬ ಕಥೆ ಇರುವ ಈ ಚಿತ್ರದಲ್ಲಿ ಶ್ವೇತಾ, ಮೊದಲ ಬಾರಿಗೆ ಕೆಎಎಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಹಿರಿಯ ನಟಿ ಮತ್ತು ಸಂಸದೆ ಸುಮಲತಾ ಅಂಬರೀಷ್ ಸಹ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಮಿಕ್ಕಂತೆ ಪ್ರಕಾಶ್ ಬೆಳವಾಡಿ, ಪ್ರಮೋದ್ ಶೆಟ್ಟಿ, ಗೋಪಾಲ್ ದೇಶಪಾಂಡೆ ಸೇರಿದಂತೆ ದೊಡ್ಡ ತಾರಾ ಬಳಗವೇ ಈ ಚಿತ್ರದಲ್ಲಿದೆ. ‘ಹೋಪ್’ನ ಚಿತ್ರೀಕರಣ ಮೊದಲ ಲಾಕ್​ಡೌನ್ ಮುಗಿದ ಮೇಲೆ ಶುರುವಾಗಿತ್ತು. ಇದೀಗ ಎಲ್ಲ ಕೆಲಸಗಳನ್ನು ಮುಗಿಸಿರುವ ಚಿತ್ರತಂಡ ಬಿಡುಗಡೆಗೆ ತಯಾರಿ ನಡೆಸಿದೆ. ಹಾಲೇಶ್ ಛಾಯಾಗ್ರಹಣ, ಋತ್ವಿಕ್ ಮುರಳೀಧರ್ ಸಂಗೀತ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net