ದ್ವಿಪಾತ್ರದಲ್ಲಿ ಪ್ರಿನ್ಸ್ ಮಹೇಶ್ ಬಾಬು

SHRUTI
Published on

ತೆಲುಗಿನಲ್ಲಿ ‘ಮಹರ್ಷಿ’ ಹಿಟ್ ಸಿನಿಮಾ ನೀಡಿದ್ದ ನಿರ್ದೇಶಕ ವಂಶಿ ಪೈಡಿಪಲ್ಲಿ- ನಟ ಮಹೇಶ್ ಬಾಬು ಜೋಡಿ ಮತ್ತೆ ‘ಎಸ್​ಎಸ್​ಎಂಬಿ 27’ ಚಿತ್ರದ ಮೂಲಕ ಒಂದಾಗಿರುವುದು ಗೊತ್ತಿರುವ ವಿಚಾರ.

ಆದರೆ ಈ ಚಿತ್ರ ಪ್ರಿನ್ಸ್ ಸಿನಿಜರ್ನಿಯಲ್ಲಿಯೇ ವಿಶೇಷವಂತೆ. ಹೌದು, ನಾಯಕನಾಗಿ ಮೊದಲ ಬಾರಿಗೆ ಈ ಚಿತ್ರದ ಮೂಲಕ ದ್ವಿಪಾತ್ರದಲ್ಲಿ ಮಹೇಶ್ ಬಾಬು ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅಲ್ಲದೆ, ದರೋಡೆಕೋರನ ಗೆಟಪ್​ನಲ್ಲಿ ಪ್ರಿನ್ಸ್ ಅಭಿನಯಿಸಲಿದ್ದಾರಂತೆ. ಸೂಪರ್ ಸ್ಟಾರ್ ರಜನಿಕಾಂತ್ ಅವರ ‘ಬಾಷಾ’ ಚಿತ್ರದ ಮಾದರಿಯಲ್ಲಿ ಈ ಸಿನಿಮಾ ಮೂಡಿಬರಲಿದೆ ಎಂಬ ಮಾತುಗಳು ಕೇಳಿಬಂದಿದ್ದವಾದರೂ ಚಿತ್ರತಂಡ ಮಾತ್ರ ತುಟಿ ಬಿಚ್ಚಿಲ್ಲ.

ಸದ್ಯ ‘ಎಸ್​ಎಸ್​ಎಂಬಿ 27’ ಎಂಬ ತಾತ್ಕಾಲಿಕ ಶೀರ್ಷಿಕೆಯಲ್ಲಿ ಚಿತ್ರೀಕರಣ ಪೂರ್ವ ಸಿದ್ಧತೆ ಭರದಿಂದ ಸಾಗಿದ್ದು, ತಾಂತ್ರಿಕ ಸಿಬ್ಬಂದಿ ಆಯ್ಕೆಯಲ್ಲಿ ಚಿತ್ರತಂಡ ನಿರತವಾಗಿದೆ. ಈ ಹಿಂದೆ ‘ಶ್ರೀಮಂತುಡು’ ಚಿತ್ರದಲ್ಲಿ ಮಹೇಶ್​ಗೆ ಜೋಡಿಯಾಗಿದ್ದ ಶ್ರುತಿ ಹಾಸನ್, ಈ ಸಿನಿಮಾದಲ್ಲೂ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಎಸ್. ತಮನ್ ಸಂಗೀತ ನೀಡಲಿದ್ದಾರೆ ಎಂಬುದಷ್ಟೇ ಅಧಿಕೃತವಾಗಿದೆ. ಎಲ್ಲ ಅಂದುಕೊಂಡಂತಾದರೆ, ಏಪ್ರಿಲ್​ನಲ್ಲಿ ಸಿನಿಮಾ ಸೆಟ್ಟೇರಲಿದ್ದು, 2021ರ ಸಂಕ್ರಾಂತಿಗೆ ತೆರೆಕಾಣುವ ಸಾಧ್ಯತೆ ಇದೆ. ಇದು ಮಹೇಶ್ ಬಾಬು ನಟನೆಯ 27ನೇ ಚಿತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net