ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್​ಗೆ ಶ್ರುತಿ ಹಾಸನ್​

Salaar
Published on

ಬೆಂಗಳೂರು: ಪ್ರಶಾಂತ್ ನೀಲ್ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ ‘ಸಲಾರ್’ನಲ್ಲಿ ಪ್ರಭಾಸ್​ಗೆ ನಾಯಕಿ ಯಾರಾಗಬಹುದು ಎಂಬ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇತ್ತು. ಅದಕ್ಕೆ ಸರಿಯಾಗಿ ದಿಶಾ ಪಠಾಣಿ ಸೇರಿದಂತೆ ಒಂದಿಷ್ಟು ಹೆಸರುಗಳು ಕೇಳಿಬಂದವು. ಅಂತಿಮವಾಗಿ ಶ್ರುತಿ ಹಾಸನ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಗುರುವಾರ ಶ್ರುತಿ ಹಾಸನ್ ಅವರ 35ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ, ಖುದ್ದು ನಿರ್ದೇಶಕ ಪ್ರಶಾಂತ್ ನೀಲ್ ಸೋಷಿಯಲ್ ಮೀಡಿಯಾದಲ್ಲಿ ಶ್ರುತಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಅಷ್ಟೇ ಅಲ್ಲ, ಅವರಿಗೆ ‘ಸಲಾರ್’ ಚಿತ್ರತಂಡಕ್ಕೆ ಸ್ವಾಗತ ಕೋರಿದ್ದಾರೆ. ಈ ಮೂಲಕ, ಚಿತ್ರದ ನಾಯಕಿಯ ವಿಷಯವಾಗಿ ಕೇಳಿಬಂದಿದ್ದ ಊಹಾಪೋಹಗಳಿಗೆ ಕೊನೆಗೂ ತೆರೆ ಎಳೆದಿದ್ದಾರೆ. ವಿಜಯ್ ಸೇತುಪತಿ ಅಭಿನಯದ ‘ಲಾಭಂ’ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿರುವ ಶ್ರುತಿ ಹಾಸನ್, ಇತ್ತೀಚೆಗಷ್ಟೇ ಪವನ್ ಕಲ್ಯಾಣ್ ಅಭಿನಯದ ‘ವಕೀಲ್ ಸಾಬ್’ ಚಿತ್ರದಲ್ಲಿ ತಮ್ಮ ಕೆಲಸ ಮುಗಿಸಿದ್ದಾರೆ. ಅದು ಮುಗಿಯುತ್ತಿದ್ದಂತೆಯೇ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಜತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಸಲಾರ್ ಚಿತ್ರದ ಮುಹೂರ್ತ ಈಗಾಗಲೇ ಮುಗಿದಿದೆ. ಫೆಬ್ರವರಿಯಿಂದ ಹೈದರಾಬಾದ್​ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು, ಅದಕ್ಕಾಗಿ ವಿಶೇಷ ಸೆಟ್​ಗಳನ್ನು ನಿರ್ವಿುಸಲಾಗುತ್ತಿದೆ. ಸೆಟ್ ಕೆಲಸಗಳು ಮುಗಿಯುತ್ತಿದ್ದಂತೆಯೇ ಚಿತ್ರೀಕರಣ ಪ್ರಾರಂಭವಾಗಲಿದೆ. ಚಿತ್ರವನ್ನು ಹೊಂಬಾಳೆ ಫಿಲಂಸ್​ನ ವಿಜಯ್ ಕುಮಾರ್ ಕಿರಗಂದೂರು ನಿರ್ವಿುಸುತ್ತಿದ್ದು, ಭುವನ್ ಗೌಡ, ರವಿ ಬಸ್ರೂರು ಮುಂತಾದ ಕನ್ನಡದ ತಂತ್ರಜ್ಞರು ಕೆಲಸ ಮಾಡುತ್ತಿರುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net