ರಾಮಾಚಾರಿ ಜತೆಯಾದ ಶ್ರುತಿ: ಕ್ಲಾಸ್ ಮೀಟ್ಸ್ ಮಾಸ್

Shruthi Goradiya
Published on

ಬೆಂಗಳೂರು: ‘ಸಂಕಷ್ಟಕರ ಗಣಪತಿ’ ಸಿನಿಮಾ ಮೂಲಕ ಗುರುತಿಸಿಕೊಂಡ ನಟಿ ಶ್ರುತಿ ಗೋರಾಡಿಯಾ ಇದೀಗ ರಾಮಾಚಾರಿಯ ಸಂಘ ಮಾಡಿದ್ದಾರೆ. ಈಗಾಗಲೇ ರಾಮಾಚಾರಿ ಜತೆಗೆ ಫೋಟೋಗಳನ್ನೂ ಕ್ಲಿಕ್ಕಿಸಿಕೊಂಡಿರುವ ಶ್ರುತಿ, ಇನ್ನೇನು ಕೆಲ ದಿನಗಳಲ್ಲಿ ಆತನ ಕೈ ಹಿಡಿದು ಸುತ್ತಾಡಲಿದ್ದಾರೆ. ಹೌದು, ತೇಜ್ ಎಂಬುವವರು ‘ರಾಮಾಚಾರಿ 2.0’ ಶೀರ್ಷಿಕೆಯ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ನಿರ್ದೇಶನದ ಜತೆಗೆ ನಾಯಕನಾಗಿಯೂ ಅವರು ನಟಿಸಲಿದ್ದಾರೆ. ಮೊದಲಾರ್ಥವಾಗಿ ಚಿತ್ರದ ಪೋಸ್ಟರ್ ಶೂಟ್ ಮುಗಿದಿದ್ದು, ಕರೊನಾ ಹಾವಳಿ ಕಡಿಮೆ ಆಗುತ್ತಿದ್ದಂತೆ ಚಿತ್ರೀಕರಣದತ್ತ ಮುಖಮಾಡಲಿದೆ ಚಿತ್ರತಂಡ.

ಕನ್ನಡ ಸಿನಿಮಾ ರಸಿಕರಿಗೆ ‘ರಾಮಾಚಾರಿ’ ಹೆಸರು ಚಿರಪರಿಚಿತ. ‘ನಾಗರಹಾವು’ ವಿಷ್ಣುವರ್ಧನ್ ಅವರ ರಾಮಾಚಾರಿಯಿಂದ ಹಿಡಿದು, ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕತ್ವದ ‘ರಾಮಾಚಾರಿ’ ಮತ್ತು ಯಶ್ ನಟನೆಯ ಸೂಪರ್ ಹಿಟ್ ಸಿನಿಮಾ ‘ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ’ ಈಗಾಗಲೇ ಎಲ್ಲರ ಮನಸ್ಸಿನಲ್ಲಿವೆ. ಇದೀಗ ಅದೇ ಹೆಸರಿನ ಮುಂದೆ 2.0 ಸೇರಿಸಿಕೊಂಡು ಆಗಮಿಸಿದ್ದಾರೆ ತೇಜ್.

ಈ ಚಿತ್ರದಲ್ಲಿ ಮಾರ್ಗರೇಟ್ ಪಾತ್ರದಲ್ಲಿ ಶ್ರುತಿ ಕಾಣಿಸಿಕೊಳ್ಳಲಿದ್ದು, ಪಾತ್ರದ ಬಗ್ಗೆ ತುಂಬ ಎಗ್ಸೈಟ್​ ಆಗಿದ್ದಾರೆ. ‘ಮಾರ್ಗರೇಟ್- ರಾಮಾಚಾರಿ ರೀತಿಯ ಪಾತ್ರಗಳನ್ನು ಮಾಡಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ನಿರ್ದೇಶಕರು ಕಥೆ ಹೇಳಿದ ಕೆಲವೇ ನಿಮಿಷಗಳಲ್ಲಿ ನಟಿಸಲು ಒಪ್ಪಿಕೊಂಡೆ. ಇದೊಂದು ಪಕ್ಕಾ ಲವ್​ಸ್ಟೋರಿ ಹಿನ್ನೆಲೆಯ ಸಿನಿಮಾ. ಈ ಹಿಂದಿನ ಯಾವುದೇ ರಾಮಾಚಾರಿ ಸಿನಿಮಾಕ್ಕೂ ಇದಕ್ಕೂ ಸಂಬಂಧವಿಲ್ಲ’ ಎನ್ನುತ್ತಾರೆ ಶ್ರುತಿ.

ತೆಲುಗು ಮತ್ತು ತಮಿಳಿನಲ್ಲಿ ಗುರುತಿಸಿಕೊಂಡಿರುವ ತೇಜ್, ಈ ಚಿತ್ರವನ್ನು ಬಹುಭಾಷೆಗಳಲ್ಲಿ ತೆರೆಗೆ ತರುವ ಸಾಧ್ಯತೆ ಇದೆ. ಇನ್ನುಳಿದಂತೆ ವಿನೋದ್ ಚಿತ್ರಕ್ಕೆ ಬಂಡವಾಳ ಹೂಡಲಿದ್ದು, ಪ್ರೇಮ್ ಛಾಯಾಗ್ರಹಣ, ಸಬೇಶ್ ಸೊಲೊಮನ್ ಸಂಗೀತ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net