ಕಬ್ಜಗೆ ಶ್ರೀಯಾ: 11 ವರ್ಷಗಳ ಬಳಿಕ ಕನ್ನಡಕ್ಕೆ ಆಗಮನ

Kabzaa
Published on

ಬೆಂಗಳೂರು: ಉಪೇಂದ್ರ, ಸುದೀಪ್ ನಟನೆಯ ‘ಕಬ್ಜ’ ಚಿತ್ರದ ಚಿತ್ರೀಕರಣ ಮುಗಿಯುವುದಕ್ಕೆ ಬಂದರೂ, ನಾಯಕಿ ಯಾರು ಎಂದು ಬಾಯಿಬಿಟ್ಟಿರಲಿಲ್ಲ ನಿರ್ವಪಕ- ನಿರ್ದೇಶಕ ಆರ್. ಚಂದ್ರು. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾದ್ದರಿಂದ, ಎಲ್ಲ ಭಾಷೆಗಳಿಗೂ ಪರಿಚಯವಿರುವ ಮುಖವನ್ನು ಆಯ್ಕೆ ಮಾಡಿರುವುದಾಗಿ ಈ ಹಿಂದೆ ಹೇಳಿದ್ದರು. ಅಷ್ಟೇ ಅಲ್ಲ, ಸೋಮವಾರ ಚಿತ್ರದ ಇಬ್ಬರು ನಾಯಕಿಯರ ಪೈಕಿ ಒಬ್ಬರನ್ನು ಪರಿಚಯಿಸುವ ವಿಚಾರವೂ ಹೊರಬಿದ್ದಿತ್ತು. ಅದರಂತೆ, ಚಿತ್ರದ ಮೊದಲ ನಾಯಕಿಯಾಗಿ ‘ಕಬ್ಜ’ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ ಶ್ರೀಯಾ ಶರಣ್.

ಶ್ರೀಯಾಗೆ ಕನ್ನಡ ಹೊಸದೇನಲ್ಲ. ಆದರೆ, ಒಂದು ಗ್ಯಾಪ್ ಆಗಿತ್ತು ಅಷ್ಟೇ. ಪುನೀತ್ ಅಭಿನಯದ ‘ಅರಸು’ ಚಿತ್ರದಲ್ಲೊಂದು ಅತಿಥಿ ಪಾತ್ರ ಮಾಡುವ ಮೂಲಕ ಕನ್ನಡಕ್ಕೆ ಬಂದಿದ್ದ ಶ್ರೀಯಾ, ಆ ನಂತರ ‘ಚಂದ್ರ’ ಚಿತ್ರಕ್ಕೆ ನಾಯಕಿಯಾಗಿದ್ದರು. ಈಗ 11 ವರ್ಷಗಳ ನಂತರ ‘ಕಬ್ಜ’ ಮೂಲಕ ಕನ್ನಡಕ್ಕೆ ವಾಪಸಾಗುತ್ತಿದ್ದಾರೆ.

ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಚಂದ್ರು, ‘ಚಿತ್ರದಲ್ಲಿ ಶ್ರೀಯಾ, ಮಧುಮತಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಏಪ್ರಿಲ್​ನಲ್ಲಿ ಇನ್ನೊಬ್ಬ ನಾಯಕಿಯ ಘೋಷಣೆ ಮಾಡಲಿದ್ದೇವೆ. ಇದು ಕೊನೆಯ ಹಂತದ ಚಿತ್ರೀಕರಣ. 35 ದಿನಗಳ ಚಿತ್ರೀಕರಣ ಬಾಕಿ ಇದೆ. ಬೆಂಗಳೂರಿನಲ್ಲಿ ಮೋಹನ್ ಬಿ ಕೆರೆ ಸ್ಟುಡಿಯೋ ಸೇರಿ ಕೆಲವೆಡೆ ಸೆಟ್​ಗಳನ್ನು ಹಾಕಿದ್ದೇವೆ. 35 ದಿನಗಳಲ್ಲಿ 5 ದಿನ ಮಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಕ್ಲೈಮ್ಯಾಕ್ಸ್ ಚಿತ್ರೀಕರಣ ಹೈದರಾಬಾದ್​ನಲ್ಲಿ ಆಗಲಿದೆ’ ಎಂದು ಮಾಹಿತಿ ಕೊಡುತ್ತಾರೆ ಚಂದ್ರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net