‘ವಿಡಿಯೋ’ ಮೂಲಕ ಹೆದರಿಸುವ ಪ್ರಯತ್ನ : ಫೌಂಡ್ ಫುಟೇಜ್ ಜಾನರ್ ಚಿತ್ರಕ್ಕೆ ಮುಂದಾದ ‘ಬ್ಲಿಂಕ್’ ತಂಡ

video
Published on

ಬೆಂಗಳೂರು: ಕಳೆದ ವರ್ಷ ತೆರೆಕಂಡಿದ್ದ ‘ಬ್ಲಿಂಕ್’ ಯಶಸ್ಸಿನ ಬಳಿಕ ನಟ ದೀಕ್ಷಿತ್ ಶೆಟ್ಟಿ ಮತ್ತು ನಿರ್ದೇಶಕ ಶ್ರೀನಿಧಿ ಬೆಂಗಳೂರು ಮತ್ತೆ ಒಂದಾಗಿದ್ದಾರೆ. ಇದೀಗ ಹೊಸ ಸಿನಿಮಾ ಘೋಷಣೆ ಮಾಡಿದ್ದು, ‘ವಿಡಿಯೋ’ ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ. ದೀಕ್ಷಿತ್ ಹೊಸ ಚಿತ್ರವನ್ನು ನಿರ್ಮಿಸುವ ಮೂಲಕ ನಿರ್ಮಾಪಕರಾಗುತ್ತಿದ್ದಾರೆ. ಶ್ರೀನಿಧಿ ‘ವಿಡಿಯೋ’ ಮೂಲಕ ಫೌಂಡ್ ಫುಟೇಜ್ ಥ್ರಿಲ್ಲರ್ ಜಾನರ್ ಕಥೆ ಹೇಳಲು ಮುಂದಾಗಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಸಣ್ಣ ಝಲಕ್ ಬಿಡುಗಡೆ ಮಾಡಲಾಗಿದ್ದು, ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಮೂಲಕ ಹೆದರಿಸುವ ಪ್ರಯತ್ನ ಮಾಡಿದ್ದಾರೆ. ದೀಕ್ಷಿತ್ ಶೆಟ್ಟಿ, ‘ಮೊದಲ ಬಾರಿಗೆ ಸಿನಿಮಾ ನಿರ್ದೇಶನ ಮಾಡಿ, ಸೈ ಎನಿಸಿಕೊಂಡವರಿಗೆ ಎರಡನೇ ಅವಕಾಶ ನೀಡುವ ಪ್ರಯತ್ನ ಇದು. ಇಷ್ಟು ವರ್ಷಗಳ ಚಿತ್ರರಂಗ ನನ್ನನ್ನು ಸಾಕಿ, ಒಂದಿಷ್ಟು ಶಕ್ತಿ ನೀಡಿದೆ. ಹೀಗಿರುವಾಗ, ನಾವ್ಯಾಕೆ ಸಿನಿಮಾ ನಿರ್ಮಿಸಬಾರದು ಎಂಬ ಯೋಚನೆ ಬಂತು. ಹಾಗಾಗಿ, ನಿರ್ಮಾಣಕ್ಕೆ ಮುಂದಾದೆ. ಚಿತ್ರರಂಗಕ್ಕೆ ನನ್ನ ಕಡೆಯಿಂದ ಒಂದು ಥ್ಯಾಂಕ್ಸ್ ಹೇಳುವ ಪ್ರಯತ್ನವಿದು. ಈ ಚಿತ್ರದ ಮೂಲಕ ಮತ್ತೊಂದು ಸುತ್ತಿನ ರಿಸ್ಕ್ ತೆಗೆದುಕೊಳ್ಳುತ್ತಿದ್ದೇನೆ’ ಎಂದರು. ಶ್ರೀನಿಧಿ ಬೆಂಗಳೂರು, ‘ಕಳೆದ ವರ್ಷ ತೆರೆಕಂಡಿದ್ದ ನಮ್ಮ ‘ಬ್ಲಿಂಕ್’ ಸಿನಿಮಾ ಜನರಿಗೆ ಇಷ್ಟವಾಗಿತ್ತು. ಆದರೆ, ಆ ಚಿತ್ರದ ನಿರ್ಮಾಣ ಸಂಸ್ಥೆಗೂ ನಮಗೂ ಸರಿ ಬರಲಿಲ್ಲ. ಹಾಗಾಗಿ, ನಾವೇ ತಂಡಕಟ್ಟಿಕೊಂಡಿದ್ದೇವೆ. ಈ ಬಾರಿ ಫೌಂಡ್ ಫುಟೇಜ್ ಜಾನರ್ ಸಿನಿಮಾ ಮಾಡುತ್ತಿದ್ದೇವೆ. ಇದು ಒಡಿಶಾದಲ್ಲಿ ನಡೆಯುವ ಕಥೆ. ಇಲ್ಲಿನ ಪ್ರೇಕ್ಷಕರನ್ನು ಹೆದರಿಸಲು ಅಲ್ಲಿಂದ ದೆವ್ವ ಕರೆದುಕೊಂಡು ಬರುತ್ತಿದ್ದೇವೆ. ತಾಂತ್ರಿಕವಾಗಿ ಚಿತ್ರವನ್ನು ಸಶಕ್ತವಾಗಿ ತರುವ ಜವಾಬ್ದಾರಿ ತಂಡದ ಮೇಲಿದೆ’ ಎಂದು ಮಾಹಿತಿ ನೀಡಿದರು. ಭರತ್, ಜೀವನ್ ಶಿವಕುಮಾರ್, ತೇಜೇಶ್, ಪ್ರಿಯಾ ಜೆ. ಆಚಾರ್, ನಲ್ಮೇ ನಾಚಿಯಾರ್ ಕಲಾ ಬಳಗದಲ್ಲಿದ್ದಾರೆ. ಪ್ರಸನ್ನ ಕುಮಾರ್ ಸಂಗೀತ, ಅವಿನಾಶ್ ಶಾಸ್ತ್ರೀ ಛಾಯಾಗ್ರಹಣ ಚಿತ್ರಕ್ಕಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net