ಎಂ.ಜಿ.ಶ್ರೀನಿವಾಸ್-ರಂಜನಿ ರಾಘವನ್ 'ವೆಟರನ್'

Rajani Ullas
Published on

ಬೆಂಗಳೂರು: ಈಗಾಗಲೇ ‘ಬೀರ್​ಬಲ್’ ಮೂಲಕ ಕುತೂಹಲ ಮೂಡಿಸಿ ‘ಓಲ್ಡ್ ಮಾಂಕ್’ ಗುಂಗಿನಲ್ಲಿರುವ ಎಂ.ಜಿ ಶ್ರೀನಿವಾಸ್ ಮತ್ತು ‘ಕನ್ನಡತಿ’ ಧಾರಾವಾಹಿ ಜತೆಯಲ್ಲಿಯೇ ಹಲವು ಸಿನಿಮಾಗಳಲ್ಲಿ ನಟಿಸುತ್ತಿರುವ ರಂಜನಿ ರಾಘವನ್ ಇದೀಗ ಮೊದಲ ಬಾರಿ ಒಂದಾಗಿದ್ದಾರೆ. ಹಾಗಂತ ಇಬ್ಬರು ಒಟ್ಟಾಗಿ ಸಿನಿಮಾ ಮಾಡುತ್ತಿಲ್ಲ. ಬದಲಿಗೆ ಕಿರುಚಿತ್ರ ಮಾಡಿದ್ದಾರೆ.

ಶಿವಕುಮಾರ್ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ‘ವೆಟರನ್’ ಶೀರ್ಷಿಕೆಯ ಕಿರುಚಿತ್ರ ಸಂಪೂರ್ಣವಾಗಿ ಬೇರೆಯ ಲೋಕವೊಂದನ್ನು ತೆರೆದಿಡಲಿದೆಯಂತೆ. ಸೈನ್ಸ್ ಫಿಕ್ಷನ್ ಕಥಾಹಂದರದ 30 ನಿಮಿಷದ ಈ ಕಿರುಚಿತ್ರದಲ್ಲಿ ಭೂಮಿ ಮೇಲೆ ಆಮ್ಲಜನಕ ಪ್ರಮಾಣ ಕೊನೇ ಹಂತಕ್ಕೆ ಬಂದಾಗ ಏನೆಲ್ಲ ಆಗುತ್ತದೆ ಎಂಬುದನ್ನು ತೋರಿಸಲಾಗಿದೆಯಂತೆ. ಶ್ರೀನಿ ಇಲ್ಲಿ ವಿಜ್ಞಾನಿಯಾಗಿ ಕಾಣಿಸಿಕೊಂಡರೆ, ರಂಜನಿಗೆ ನಾಲ್ಕು ಶೇಡ್​ಗಳಿವೆ. ಕನ್ನಡದಲ್ಲಿ ಸೈನ್ಸ್ ಫಿಕ್ಷನ್ ಸಿನಿಮಾಗಳ ಸಂಖ್ಯೆ ಕಡಿಮೆ. ಅದನ್ನೇ ಗಮನದಲ್ಲಿಟ್ಟುಕೊಂಡು ನಿರ್ದೇಶಕ ಶಿವಕುಮಾರ್ ‘ವೆಟರನ್’ ಕಿರುಚಿತ್ರ ಮಾಡಿದ್ದಾರೆ.

ನೋಡುಗರನ್ನು ಕಾಲ್ಪನಿಕ ಲೋಕಕ್ಕೆ ಕರೆದೊಯ್ಯಲು ಸಿದ್ಧತೆ ಮಾಡಿಕೊಂಡಿದ್ದಾರೆ. 2100 ಕಾಲಘಟ್ಟವನ್ನು ಈ ಕಿರುಚಿತ್ರದಲ್ಲಿ ತೋರಿಸಲಿದ್ದು, ಕನಕಪುರದ ಬಳಿಯಲ್ಲಿ ಅದ್ದೂರಿ ಸೆಟ್ ನಿರ್ವಿುಸಿ ಚಿತ್ರೀಕರಿಸಲಾಗಿದೆ. ಇನ್ನೆರಡು ದಿನಗಳ ಶೂಟಿಂಗ್ ಮಾತ್ರ ಬಾಕಿ ಉಳಿದಿದ್ದು, ಎಲ್ಲವೂ ಪೂರ್ಣವಾದ ಬಳಿಕ ಅಂತಾರಾಷ್ಟ್ರೀಯ ಸಿನಿಮೋತ್ಸವ ಗಳಿಗೂ ಈ ಚಿತ್ರವನ್ನು ಕಳಿಸುವ ಪ್ಲಾನ್ ತಂಡದ್ದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net